ಕುಶಾಲನಗರ, ಆ. 3: ರಾಜ್ಯ ಸರಕಾರ ಸಂಕಷ್ಟ ಸವಾಲುಗಳ ನಡುವೆ ಸಂವೇದನೆ, ಸ್ಪಂದನೆ, ಸಾಧನೆ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಜಿಲ್ಲಾ ಬಿಜೆಪಿ ಪ್ರಮುಖರು ಕುಶಾಲನಗರದಲ್ಲಿ ಮನೆಮನೆಗೆ ಭೇಟಿ ನೀಡಿ ಮಾಹಿತಿ ನೀಡುವ ಕಾರ್ಯಕ್ರಮ ನಡೆಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ರಥಬೀದಿ ಮತ್ತಿತರ ಬಡಾವಣೆಗಳಿಗೆ ತೆರಳಿದ ತಂಡದ ಸದಸ್ಯರು ರಾಜ್ಯದ ಮತ್ತು ಕೇಂದ್ರದ ಸಾಧನೆಗಳ ಬಗ್ಗೆ ಮನೆಮನೆಗೆ ತೆರಳಿ ಕರಪತ್ರ ನೀಡುವ ಮೂಲಕ ಮಾಹಿತಿ ಒದಗಿಸಿದರು.

2.7 ಲಕ್ಷ ಪ್ರವಾಹ ಸಂತ್ರಸ್ತ ಕುಟುಂಬ ಸದಸ್ಯರಿಗೆ ತಲಾ ರೂ. 10 ಸಾವಿರ, ಕೃಷಿ ಬೆಳೆ ಪರಿಹಾರದ ನಿಟ್ಟಿನಲ್ಲಿ ರೈತರಿಗೆ ಪರಿಹಾರ ಧನ ಸೇರಿದಂತೆ ಹಲವು ವಿಷಯಗಳ ಬಗ್ಗೆ ದಾಖಲೆ ಸಹಿತ ವಿವರ ಒದಗಿಸಿದರು.

ಈ ಸಂದರ್ಭ ಪಪಂ ಸದಸ್ಯ ಅಮೃತ್‍ರಾಜ್, ಬಿಜೆಪಿ ಪ್ರಮುಖರಾದ ಎಂ.ಡಿ.ಕೃಷ್ಣಪ್ಪ, ವೈಶಾಖ್, ಪುಂಡರೀಕಾಕ್ಷ, ಬೋಸ್ ಮೊಣ್ಣಪ್ಪ, ಪ್ರವೀಣ್, ಅಶ್ವಿನ್ ಮತ್ತಿತರರು ಇದ್ದರು.