ಸೋಮವಾರಪೇಟೆ, ಆ. 2: ತಾಲೂಕಿನ ಗ್ರಾಮೀಣ ಪ್ರದೇಶದ ಹಲವಷ್ಟು ರಸ್ತೆಗಳಲ್ಲಿ ದೊಡ್ಡ ಕೆರೆಗಳು ನಿರ್ಮಾಣವಾಗಿದ್ದರೆ, ಹಲವು ರಸ್ತೆಗಳಲ್ಲಿ ಡಾಂಬರನ್ನು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ.
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕರ್ಕಳ್ಳಿ ರಸ್ತೆಯನ್ನು ಹೊರತುಪಡಿಸಿದರೆ ಉಳಿದ ರಸ್ತೆಗಳು ಸಂಚಾರಕ್ಕೆ ಒಂದಿಷ್ಟು ಯೋಗ್ಯವಾಗಿದ್ದರೆ, ಗ್ರಾಮೀಣ ಪ್ರದೇಶದ ರಸ್ತೆಗಳ ಸ್ಥಿತಿ ಅಧೋಗತಿಯತ್ತ ಸಾಗಿದೆ.
ಸೋಮವಾರಪೇಟೆ-ಶಾಂತಳ್ಳಿ-ಸಕಲೇಶಪುರ ರಾಜ್ಯ ಹೆದ್ದಾರಿಯ ವಿವೇಕಾನಂದ ವೃತ್ತದಿಂದ ಆಲೇಕಟ್ಟೆವರೆಗಿನ ರಸ್ತೆ ಕಾಂಕ್ರೀಟೀಕರಣಗೊಳ್ಳುತ್ತಿರುವದರಿಂದ ಸದ್ಯಕ್ಕೆ ವಾಹನಗಳ ಸಂಚಾರಕ್ಕೆ ತಡೆಬಿದ್ದಿದೆ. ಪರಿಣಾಮ ಹಾನಗಲ್ಲು ಹಾಗೂ ಚೌಡ್ಲು ಗ್ರಾ.ಪಂ. ವ್ಯಾಪ್ತಿಯ ರಸ್ತೆಗಳನ್ನು ಸಾರ್ವಜನಿಕರು ಅವಲಂಬಿಸಿದ್ದು, ಕಿರಿದಾದ ರಸ್ತೆಗಳು ಸಂಚಾರಕ್ಕೆ ಸಂಚಕಾರ ತಂದೊಡ್ಡಿವೆ. ಪಟ್ಟಣದಿಂದ ಜೂನಿಯರ್ ಕಾಲೇಜು ಮಾರ್ಗವಾಗಿ ಚೌಡ್ಲು ಕೆರೆ ಏರಿ ರಸ್ತೆ, ಬಸವೇಶ್ವರ ದೇವಾಲಯದಿಂದ ಗಾಂಧಿನಗರ ಸಂಪರ್ಕ ರಸ್ತೆ, ಗಾಂಧಿನಗರ ದೊಡ್ಡಮಾರಿಯಮ್ಮ ದೇವಾಲಯ ಪಕ್ಕದ ರಸ್ತೆ, ಆಲೇಕಟ್ಟೆ ಪದ್ಮಕ್ಯಾಂಟೀನ್‍ನಿಂದ ಕಾನ್ವೆಂಟ್‍ಬಾಣೆ ಸಂಪರ್ಕಿಸುವ ರಸ್ತೆಗಳನ್ನು ಬದಲಿ ಮಾರ್ಗವಾಗಿ ಬಳಸಲಾಗುತ್ತಿದ್ದು, ಈ ರಸ್ತೆಗಳು ಅದಾಗಲೇ ದುಸ್ಥಿತಿಗೆ ತಲುಪಿವೆ.
ರಸ್ತೆಗಳಲ್ಲಿ ಸಾವಿರಾರು ಗುಂಡಿಗಳು ನಿರ್ಮಾಣವಾಗಿದ್ದರೆ, ಕೆಲವೆಡೆ ಡಾಂಬರು ಮಾಯವಾಗಿ ವರ್ಷಗಳೇ ಕಳೆದಿವೆ. ಮಳೆಗಾಲವಾಗಿರುವ ಹಿನ್ನೆಲೆ ರಸ್ತೆಯಲ್ಲಿನ ಗುಂಡಿಗಳಲ್ಲಿ ನೀರು ನಿಂತು ಸಣ್ಣಪುಟ್ಟ ಕೆರೆಗಳಂತೆ ಕಂಡುಬರುತ್ತಿವೆ.
ಇನ್ನು 7ನೇ ಹೊಸಕೋಟೆಯಿಂದ ಭೂದಾನ ಪೈಸಾರಿ, ಕೊಡಗರಹಳ್ಳಿಯ ರಸ್ತೆ ಅಧೋಗತಿಯತ್ತ ಸಾಗಿ ದಶಕಗಳು ಕಳೆದಿವೆ. ರಸ್ತೆಯ ನಡುವೆ ಬೃಹತ್ ಹೊಂಡಗಳು ನಿರ್ಮಾಣವಾಗಿದ್ದು, ಸಣ್ಣಪುಟ್ಟ ವಾಹನಗಳ ಸಂಚಾರಕ್ಕೆ ಸರ್ಕಸ್ ಮಾಡಬೇಕಾಗಿದೆ.
ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಣಿಮರೂರು-ಉಂಜಿಗನಹಳ್ಳಿ-ಮುಳ್ಳೂರು ಸಂಪರ್ಕದ ರಸ್ತೆಯಲ್ಲಿ ಸಾವಿರಾರು ಹೊಂಡಗಳು ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ರಸ್ತೆಗಳು ಅನುದಾನದ ಕೊರತೆಯಿಂದ ನಲುಗಿ ಹೋಗಿವೆ. ಇನ್ನು ಜಿ.ಪಂ. ವ್ಯಾಪ್ತಿಯ ರಸ್ತೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.
ಪಟ್ಟಣದಿಂದ ಗಜಾನನ ಗ್ಯಾಸ್ ಗೋಡೌನ್ ಮೂಲಕ ಬೇಳೂರು ಸಂಪರ್ಕಿಸುವ ರಸ್ತೆಯಲ್ಲಿ ವಾಹನಗಳ ಚಾಲನೆಗೆ ಹರಸಾಹಸ ಪಡುವಂತಾಗಿದೆ. ರಸ್ತೆ ಕಾಮಗಾರಿಗೆ ಅನುಮೋದನೆ ದೊರೆತಿದ್ದರೂ ಕಾಮಗಾರಿ ಪ್ರಾರಂಭವಾಗದ ಹಿನ್ನೆಲೆ, ಸಮಸ್ಯೆ ಹಾಗೆಯೇ ಉಳಿದಿದೆ.
ಉಳಿದಂತೆ ಗೌಡಳ್ಳಿ, ಹಾನಗಲ್ಲು, ಬೇಳೂರು, ಶಾಂತಳ್ಳಿ, ಬೆಟ್ಟದಳ್ಳಿ, ತೋಳೂರುಶೆಟ್ಟಳ್ಳಿ, ಶನಿವಾರಸಂತೆ, ಕೊಡ್ಲಿಪೇಟೆ, ಗಣಗೂರು, ನೇರುಗಳಲೆ, ಶಿರಂಗಾಲ, ತೊರೆನೂರು, ಹೆಬ್ಬಾಲೆ ಸೇರಿದಂತೆ ಇತರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಳರಸ್ತೆಗಳು ದುಸ್ಥಿತಿಗೆ ತಲುಪಿದ್ದು, ಕಾಮಗಾರಿಗಾಗಿ ಎದುರು ನೋಡುತ್ತಿವೆ. - ವಿಜಯ್ ಹಾನಗಲ್