ಗೋಣಿಕೊಪ್ಪ ವರದಿ, ಆ. 2: ಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡುವ ನಿಟ್ಟಿನಲ್ಲಿ ಕೂಡಿಗೆ ಹಾಲು ಡೈರಿಯ ವಿಸ್ತರಣಾ ಅಧಿಕಾರಿ ವೀಣಾ ಅವರು ಶುಕ್ರವಾರ ಹೊಸೂರು ವ್ಯಾಪ್ತಿಯ ಗ್ರಾಮಗಳಲ್ಲಿ ಜಾನುವಾರು ಕೊಟ್ಟಿಗೆಗಳಿಗೆ ಭೇಟಿ ನೀಡಿ ಜಾನುವಾರುಗಳ ಸಮೀಕ್ಷೆ ನಡೆಸಿದರು.
ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ನಿರ್ದೇಶನದಂತೆ ಅಮ್ಮತ್ತಿ ನಾಡು, ಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಗೆ ಭೇಟಿ ನೀಡಿದರು ಸಂಘದ ನೋಂದಣಿ ಸಲುವಾಗಿ ಗ್ರಾಮ ಪಂಚಾಯಿತಿ ವತಿಯಿಂದ ಒಂದು ವಿಶೇಷ ಗ್ರಾಮ ಸಭೆ ಕರೆಯುವಂತೆ ತಿಳಿಸಿದರು. ಸಂಘ ನೋಂದಣಿ ನಂತರ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು.
ಸಂಘದ ಆಡಳಿತ ಮಂಡಳಿಯ ಸದಸ್ಯರೊಂದಿಗೆ ಚರ್ಚೆಸಿ, ಅಗತ್ಯ ಮಾಹಿತಿ, ಹೈನುಗಾರಿಕೆಗೆ ಲಭ್ಯವಿರುವ ಸಂಪನ್ಮೂಲಗಳ ಮಾಹಿತಿಗಳನ್ನು ಪಡೆದುಕೊಂಡರು.
ಹೊಸೂರು ಗ್ರಾ.ಪಂ. ಪಿಡಿಒ ಶ್ರೀನಿವಾಸ್ ಈ ವ್ಯಾಪ್ತಿಯ ಗ್ರಾಮ ಗಳಲ್ಲಿ ಹೈನುಗಾರಿಕೆ ಉದ್ಯಮದಲ್ಲಿ ತೊಡಗಿಸಿಕೊಂಡ ರೈತ ಕುಟುಂಬಗಳ ಮಾಹಿತಿ ನೀಡಿದರು.
ಅಮ್ಮತ್ತಿ ಪಶುವೈದ್ಯ ಆಸ್ಪತ್ರೆಯ ಪಶುವೈದ್ಯಾಧಿಕಾರಿ ಡಾ. ಪ್ರಸನ್ನ ಅವರು ಅಮ್ಮತ್ತಿ ಹೋಬಳಿಗೆ ಒಳಪಟ್ಟ ಗ್ರಾಮಗಳಲ್ಲಿನ ಜಾನುವಾರಗಳ ಸಂಖ್ಯೆ ಮತ್ತು ಹೆಚ್ಚು ಹಾಲು ಉತ್ಪಾದಿಸುವ ಬಗ್ಗೆ ಮಾಹಿತಿ ನೀಡಿದರು.
ಹೊಸೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕೊಲ್ಲಿರ ಗೋಪಿ ಚಿಣ್ಣಪ್ಪ ಮಾತನಾಡಿ, ಅಮ್ಮತಿ ಹೋಬಳಿಯ ಸುಮಾರು ಎಂಟು ಗ್ರಾಮಗಳಿಂದ ಅಂದಾಜು 450 ಲೀಟರಿನಷ್ಟು ಹಾಲು ಸಂಗ್ರಹವಾಗುತ್ತಿದೆ, ಮುಂದಿನ ದಿನಗಳಲ್ಲಿ ಹಾಲು ಸಂಗ್ರಹಣೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಹಾಲು ಸಂಗ್ರಹ ಕೇಂದ್ರಗಳನ್ನು ಇನ್ನೂ ಹೆಚ್ಚುವರಿಯಾಗಿ ಅಮ್ಮತ್ತಿ ಮತ್ತು ಕೈಕೇರಿ ಗ್ರಾಮಗಳಲ್ಲಿಯೂ ಆರಂಭಿಸಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡರು.
ಗ್ರಾಮಸ್ಥ ಕೊಲ್ಲಿರ ಧರ್ಮಜ ಮಾತನಾಡಿ, ಉತ್ತಮ ಗುಣಮಟ್ಟದ ಪಶು ಆಹಾರವಾದ ನಂದಿನಿ ಪಶು ಆಹಾರ ಹಾಗೂ ಇತರ ಸಲಕರಣೆ ಗಳನ್ನು ಹೊಸೂರು ಸಂಘದ ಸದಸ್ಯರಿಗೂ ಸರಬರಾಜು ಮಾಡುವಂತೆ ಕೇಳಿಕೊಂಡರು. ಈ ಸಂದರ್ಭ ಸಂಘದ ನಿಯೋಜಿತ ಅಧ್ಯಕ್ಷ ತುಷಾರ್ ಕುಲಕರ್ಣಿ ನಿತ್ಯ ಉತ್ಪಾದನೆ ಯಾಗುತ್ತಿರುವ ಹಾಲಿನ ಬಗ್ಗೆ ಮಾಹಿತಿಗಳನ್ನು ಪಡೆದು ಕೊಂಡರು.
ಈ ಸಂದರ್ಭ ಸಂಘದ ಗೌರವ ಕಾರ್ಯದರ್ಶಿ ಸುಭಾಷಿಣಿ ಮತ್ತು ಸಹ ಕಾರ್ಯದರ್ಶಿ ಕೊಲ್ಲಿರ ಜಯ ಉತ್ತಯ್ಯ, ನಿರ್ದೇಶಕರುಗಳಾದ ಪಟ್ಟಡ ಧನು ಉತ್ತಯ್ಯ, ಮಂಡೇಪಂಡ ಶ್ಯಾಮ್, ಸಂದೀಪ್, ಕತ್ರಿಕೊಲ್ಲಿ ಚಂದ್ರಶೇಖರ್, ಮುರುವಂಡ ತಮ್ಮಯ್ಯ ಇದ್ದರು.