ಮಡಿಕೇರಿ, ಆ.2: ಜಿಲ್ಲೆಯಲ್ಲಿ ಹೊಟೇಲ್ ಹಾಗೂ ವಸತಿ ಉದ್ಯಮಗಳು ಸಂಪೂರ್ಣ ನೆಲಕಚ್ಚುತ್ತಿವೆ. ಇದನ್ನೇ ನಂಬಿರುವ ಕಾರ್ಮಿಕ ವರ್ಗ ಈಗಾಗಲೇ ಬೇರೆ ಜಿಲ್ಲೆಗಳಿಗೆ ವಲಸೆ ಹೋಗುತ್ತಿದೆ, ವಿದ್ಯುತ್ ಬಿಲ್‍ಗಳನ್ನು ಪಾವತಿಸ ಲಾಗದೆ, ಸಂಪರ್ಕ ಕಡಿತಗೊಳ್ಳುತ್ತಿದೆ, ಸಾಲ ಮರುಪಾವತಿಸಲಾಗದೆ ಸಂಕಷ್ಟ ಸ್ಥಿತಿ ಒದಗಿದೆ ಎಂದು ಹೊಟೇಲ್ ಮತ್ತು ರಿಸಾರ್ಟ್‍ಗಳ ಸಂಘದ ಪದಾಧಿಕಾರಿಗಳು ಮತ್ತಿತರ ಪ್ರಮುಖರು ಜಿಲ್ಲೆಯ ಜನಪ್ರತಿನಿಧಿಗ ಳೊಂದಿಗೆ ಶುಕ್ರವಾರ ಇಲ್ಲಿ ಸುದೀರ್ಘ ಚರ್ಚೆ ನಡೆಸಿ ವಿವರಿಸಿದರು. ಕೊರೊನಾ ಹಾಗೂ ಲಾಕ್‍ಡೌನ್‍ಗಳು ತೀವ್ರ ಪರಿಣಾಮ ಬೀರಿವೆ. ಈ ನಡುವೆ ಕೊಡಗು ಹೊರತುಪಡಿಸಿ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ನಿಯೋಗವು ಗಮನಕ್ಕೆ ತಂದಿತು.ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಇವರುಗಳನ್ನು ನಿಯೋಗದಿಂದ ಭೇಟಿ ಮಾಡಿ ಸಂಕಷ್ಟವನ್ನು ವಿವರಿಸಲಾಯಿತು ಎಂದು ಹೊಟೇಲ್ ಮತ್ತು ರಿಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಹಾಗೂ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಪ್ರಧಾನ ಕಾರ್ಯದರ್ಶಿ ಹಾಗೂ ಹೋಂ ಸ್ಟೇ ಸಂಘದ ಜಂಟಿ ಕಾರ್ಯದರ್ಶಿ ಯಾಗಿರುವ ಅಂಬೆಕಲ್ ನವೀನ್ “ಶಕ್ತಿ”ಗೆ ಮಾಹಿತಿಯಿತ್ತರು.

ಜಿಲ್ಲಾಧಿಕಾರಿಯವರು ಇತ್ತೀಚೆಗೆ ಆದೇಶವೊಂದನ್ನು ಹೊರಡಿಸಿದ್ದಾರೆ, ಪ್ರವಾಸಿಗರು ನೇರವಾಗಿ ವಸತಿ ಗೃಹಗಳಿಗೆ ಆಗಮಿಸಿ ಇತರ ಎಲ್ಲಿಯೂ ತೆರಳದೆ ನೇರವಾಗಿ ಅವರು ಬಂದ ಸ್ಥಳಗಳಿಗೆ ಹಿಂತಿರುಗಬೇಕೆಂದೂ, ಜಿಲ್ಲೆಯ ಇತರ ಯಾವ ಪ್ರದೇಶ ಗಳಿಗೂ ಭೇಟಿ ಕೊಡಬಾರದೆಂದೂ ಆದೇಶಿಸಿದ್ದಾರೆ. ಇದರಿಂದಾಗಿ ಯಾವ ಪ್ರವಾಸಿಗರೂ ಕೊಡಗು ಜಿಲ್ಲೆಗೆ ಬರುತ್ತಿಲ್ಲ. ಬೇರೆ ಜಿಲ್ಲೆಗಳಲ್ಲಿ ಪ್ರವಾಸೀ ತಾಣಗಳನ್ನೂ ತೆರೆಯಲಾಗಿದೆ. ಪ್ರವಾಸಿಗರು ಮುಕ್ತವಾಗಿ ಬರುತ್ತಿದ್ದಾರೆ. ಆದರೆ, ಇದೀಗ ತೀವ್ರ ನಿರ್ಬಂಧಗಳಿಂದಾಗಿ ಹಾಗೂ ಯಾವುದೇ ಪ್ರವಾಸೀ ತಾಣಗಳು ತೆರೆಯದಿರುವುದರಿಂದಾಗಿ ಯಾವ ಪ್ರವಾಸಿಗರೂ ಬರುತ್ತಿಲ್ಲ ಎಂದು ನಾಗೇಂದ್ರ ಪ್ರಸಾದ್ ವಿವರಿಸಿದರು.

ಈ ನಡುವೆ ವಿದ್ಯುತ್ ಇಲಾಖೆ ಕಳೆದ ಲಾಕ್‍ಡೌನ್ ಬಳಿಕ ಇದುವರೆಗೂ ಸಹಕಾರ ನೀಡಿ ವಸತಿ ಗೃಹಗಳ ಭಾರೀ ಮೊತ್ತದ ವಿದ್ಯುತ್ ಬಿಲ್‍ಗಳನ್ನು ಪಾವತಿಸಲು ಸಮಯಾವಕಾಶ ನೀಡಿತ್ತು. ಆದರೆ, ಯಾವುದೇ ವಹಿವಾಟಿಲ್ಲದೆ ಇದೀಗ ಹೋಟೆಲ್‍ಗಳು, ವಸತಿ ಗೃಹಗಳು ರಿಸಾರ್ಟ್‍ಗಳು ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಿಲ್ಲದೆ ಸಂಕಷ್ಟದಲ್ಲಿವೆ. ಸೆಸ್ಕ್ ಸಿಬ್ಬಂದಿ ಇದೀಗ ಒಂದೊಂದಾಗಿ ವಸತಿಗೃಹಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸರಬರಾಜು ನಿಲ್ಲಿಸುತ್ತಿದೆ. ಇನ್ನೊಂದೆಡೆ ಕಾರ್ಮಿಕ ವರ್ಗ ಇದೀಗ ಶೇ. 10ರಷ್ಟು ಸಂಖ್ಯೆಯಲ್ಲಿ ಮಾತ್ರ ಕೊಡಗಿನಲ್ಲಿ ಉಳಿದಿದೆ. ಇತರ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಮುಕ್ತವಾಗಿರುವುದರಿಂದ ಇಲ್ಲಿಂದ ಬಿಟ್ಟು ಅಲ್ಲ್ಲಿಗೆ ವಲಸೆ ತೆರಳುತ್ತಿದ್ದಾರೆ. ಈ ನಡುವೆ ಉಳಿದಿರುವ ಕಾರ್ಮಿಕ ವರ್ಗವನ್ನು ಮುಂದುವರಿಸಿ ಉಳಿಸಿಕೊಂಡು ಉದ್ಯಮ ನಡೆಸುವುದು ಹರಸಾಹಸವೆನಿಸಿದೆ. ಯಾವುದೇ ಪ್ರವಾಸೋದ್ಯಮ ತಾಣ ತೆರೆಯದಿರು ವುದರಿಂದ ಇನ್ನೂ ಸಂಕಷ್ಟವುಂಟಾಗಿದೆ. ಕನಿಷ್ಟ ಪಕ್ಷ ರ್ಯಾಫ್ಟಿಂಗ್ ಇತ್ಯಾದಿಗಳನ್ನು ನಿಷೇಧಗೊಳಿಸಿ ಪ್ರವಾಸಿಗರು ಕೇವಲ ತಾಣಗಳನ್ನು ನೋಡುವುದಕ್ಕಾದರೂ ಅವಕಾಶ ಕಲ್ಪಿಸಿದರೆ ಉದ್ಯಮವನ್ನು ಕಿಂಚಿತ್ತಾದರೂ ಉಳಿಸಿಕೊಳ್ಳ ಬಹುದಾಗಿದೆ ಎಂದು ಅಧ್ಯಕ್ಷರು ಬಿನ್ನವಿಸಿಕೊಂಡರು.

ಅಲ್ಲದೆ, ಇದೀಗ ಯಾವ ಬ್ಯಾಂಕ್‍ಗಳು (ಮೊದಲ ಪುಟದಿಂದ) ಕೂಡ ಹೊಟೇಲ್ ಉದ್ಯಮಕ್ಕೆ ಎಂದರೆ ಸಾಲ ಕೊಡಲು ಹಿಂಜರಿಯುತ್ತಿವೆ. ಈ ಉದ್ಯಮ ಸಂಪೂರ್ಣ ನೆಲಕಚ್ಚಿದೆ ಎಂದು ಬ್ಯಾಂಕ್‍ಗಳು ನಿರ್ಲಕ್ಷ್ಯ ಮಾಡುತ್ತಿವೆ. ಈ ನಡುವೆ ಕೇಂದ್ರ ರಿಸರ್ವ್ ಬ್ಯಾಂಕ್ ಸಾಲ ತೀರಿಸಲು ನೀಡಿದ್ದ ಅವಧಿ ವಿಸ್ತರಣೆಯೂ ಮುಗಿದಿದ್ದು ಇದೀಗ ಬ್ಯಾಂಕ್‍ಗಳಿಗೆ ಸಾಲ ಮರುಪಾವತಿ ಮಾಡಲೇಬೇಕಾಗಿದೆ. ಉದ್ಯಮಿಗಳಿಗೆ ನೋಟೀಸ್‍ಗಳು ಜಾರಿಯಾಗುತ್ತಿವೆ. ಬಡ್ಡಿ ನೀಡಲೂ ಅಸಾಧ್ಯವಾದ ಸ್ಥಿತಿಯಲ್ಲಿ ಉದ್ಯಮಿಗಳಿದ್ದಾರೆ. ತಮ್ಮ ಬಳಿಯಿದ್ದ ಉಳಿತಾಯದ ಎಲ್ಲ ಹಣವನ್ನೂ ಉದ್ಯಮಿಗಳು ಇದುವರೆಗೆ ಖರ್ಚು ಮಾಡಿಯಾಗಿದೆ ಎಂದು ಶಾಸಕರುಗಳ ಗಮನಕ್ಕೆ ತರಲಾಯಿತು. ಈ ಬಗ್ಗೆ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಶಾಸಕರುಗಳು ನಿಯೋಗಕ್ಕೆ ಭರವಸೆಯಿತ್ತರು ಎಂದು ಅಧ್ಯಕ್ಷರು “ಶಕ್ತಿ”ಗೆ ಮಾಹಿತಿಯಿತ್ತಿದ್ದಾರೆ.

ವಿಷ ಕೊಳ್ಳಲು ಹಣ ನೀಡಿ

ಇದೀಗ ಉದ್ಯಮಿಗಳು ಕೂಡ ರೈತರಂತೆಯೇ ಕಂಗಾಲಾಗಿದ್ದಾರೆ, ಈಗಲೇ ಸಾಲಭಾರ, ಕಾರ್ಮಿಕರನ್ನೂ ಇರಿಸಿಕೊಳ್ಳಲಾಗದೆ ತೀವ್ರ ಬವಣೆಗೆ ಒಳಗಾಗಿದ್ದೇವೆ. ಮುಂದೊಂದು ದಿನ ಹೊಟೇಲ್ ಉದ್ಯಮಿಗಳು ವಿಷ ಖರೀದಿಸಲು ಸರಕಾರದಿಂದ ಹಣ ಕೇಳುವಂತಹ ದುಸ್ಥಿತಿ ಒದಗಬಹುದು ಎಂದು ನಾಗೇಂದ್ರ ಪ್ರಸಾದ್ “ಶಕ್ತಿ”ಯೊಂದಿಗೆ ನೊಂದು ನುಡಿದರು.

ಈಗ ಜಿಲ್ಲಾಧಿಕಾರಿ ಹೊರಡಿಸಿ ರುವ ಪ್ರವಾಸಿಗರ ಆಗಮನಕ್ಕೆ ಕಲ್ಪ್ಪಿಸಿದ ಆದೇಶದಿಂದ ಪ್ರಯೋಜನವಾಗದು. ಏಕೆಂದರೆ ನೇರ ವಸತಿ ಗೃಹಕ್ಕೆ ಬಂದು ನೇರವಾಗಿ ಹಿಂತಿರುಗಬೇಕೆಂದರೆ ಯಾರೂ ಬರುತ್ತಿಲ್ಲ. ಈ ಆದೇಶದ ಬಳಿಕ ಶೇ. 1 ರಿಂದ 2 ರಷ್ಟು ಮಾತ್ರ ಪ್ರವಾಸಿಗರು ಬಂದು ಹೋಗುತ್ತಿದ್ದಾರೆ ಎಂದು ಎ.ಕೆ. ನವೀನ್ “ಶಕ್ತಿ”ಯೊಂದಿಗೆ ಅಭಿಪ್ರಾಯಪಟ್ಟರು.