ಶೌನಕಾದಿ ಮಹರ್ಷಿಗಳು ಹೇಳುತ್ತಾರೆ:-ಮಹಾಭಾಗ್ಯ ಶಾಲಿಯೂ, ಸರ್ವಪ್ರಾಣಿಗಳಲ್ಲಿ ದಯೆಯುಳ್ಳವನೂ ಆದ ಸೂತನೇ ಈ ದೇಶಕ್ಕೆ ಮಾತ್ಸ್ಯ ದೇಶವೆಂದು ಹೆಸರು ಬರಲು ಕಾರಣವಾದ ಚರಿತ್ರೆಯನ್ನು ನಿನ್ನಿಂದ ಕೇಳಿ ನಾವು ಕೃತಾರ್ಥರಾದೆವು. ನಮ್ಮ ಶ್ರವಣ ಸಫಲತೆಗೊಂಡಿತು. ಕೃತಕೃತ್ಯರಾದೆವು. ಮನೋಭಿಲಾಷೆ ಈಡೇರಿದಂತಾಯಿತು. ಸರ್ವ ಪವಿತ್ರ ತೀರ್ಥಗಳಲ್ಲಿ ನಾವು ಸ್ನಾನ ಮಾಡಿದಂತಹ ಅನುಭವವುಂಟಾಯಿತು. ಈ ದೇಶಕ್ಕೆ ಮೂರನೆಯ ಹೆಸರು ಬರಲು ಹಿನ್ನೆಲೆಯೇನೆಂಬುದನ್ನು ದಯವಿಟ್ಟು ವಿವರಿಸು ಎಂದು ಕೋರುತ್ತಾರೆ. ಅವರ ಮಾತುಗಳಿಂದ ಸಂತುಷ್ಟನಾದ ಸೂತನು” ಋಷಿ ಶ್ರೇಷ್ಠರುಗಳಿರಾ, ಕೇಳಿ ಮೂರನೆಯ ಚರಿತ್ರೆಯನ್ನೂ ಹೇಳುತ್ತೇನೆ.

ಮಾತೆ ಪಾರ್ವತಿಯ ದರ್ಶನ, ಅನುಗ್ರಹಗಳಿಂದ ದೇಶದಲ್ಲಿದ್ದ ದುಷ್ಟ ಮ್ಲೇಚ್ಛರನ್ನು ಸಂಹರಿಸಿ ಚಂದ್ರವರ್ಮ ರಾಜನು ಮತ್ತೊಬ್ಬ ಶುಕ್ಲಪಕ್ಷದ ಚಂದ್ರಮನಂತೆ ಶೋಭಿತನಾಗಿದ್ದನು. ಸತ್ಕರ್ಮಗಳಿಗೆ ಸಾಧನಳಾದ ತನ್ನ ಸ್ವಜಾತೀಯ ಪತಿವ್ರತಾ ಸ್ತ್ರೀಯಿಂದಾಗಿ ಬೇರೊಬ್ಬ ಇಂದ್ರನಂತೆಯೇ ಗೋಚರನಾಗಿದ್ದನು. ಮಾತೆ ಪಾರ್ವತಿಯು ಸ್ವತಃ ಸೃಷ್ಟಿಸಿ ಸಂತಾನಾರ್ಥ ನೀಡಿದ್ದ ಆದಿಮ ಸಂಜಾತೆ ಯುವತಿಯೊಡಗೂಡಿ ಮತ್ತೊಬ್ಬ ಬಲಿ ಚಕ್ರವರ್ತಿಯಂತೆ ದೃಗ್ಗೋಚರನಾದನು. ಇಬ್ಬರು ಸಂಗಾತಿಯರೊಂದಿಗೆ ಇನ್ನೊಬ್ಬ ಕುಮಾರ ಸುಬ್ರಹ್ಮಣ್ಯನಂತೆ ದೃಷ್ಟಿ ಗೋಚರನಾದನು. ತನ್ನ ತಪಸ್ಸಿನ ಪ್ರಭಾವದಿಂದ ಮತ್ತೊಬ್ಬ ಅಗ್ನಿಯಂತೆ ಪ್ರಕಾಶಿಸುತ್ತಿದ್ದನು. ಸಮರ್ಪಕವಾದ ಶಿಕ್ಷಾ- ರಕ್ಷಾ ಜ್ಞಾನದಿಂದ ಬೇರೊಬ್ಬ ಧರ್ಮರಾಜನಂತೆ ಕಂಡುಬಂದನು. ಅನೇಕ ರತ್ನಗಳನ್ನು ಹೊಂದಿದ್ದ ರಾಜಕುವರನು ಇನ್ನೊಬ್ಬ ಸಮುದ್ರರಾಜನೇ ಎನ್ನುವಂತೆ ಶೋಭಿಸುತ್ತಿದ್ದನು. ಮಹಾಬಲನೂ, ವೇಗಗಾಮಿಯೂ ಆಗಿದ್ದುದರಿಂದ ಮಗದೊಬ್ಬ ವಾಯುವಿನಂತೆಯೂ ನೆರೆದವರಿಗೆ ಅನುಭವವಾಯಿತು. ಪಾರ್ವತಿಯು ನೀಡಿದ ಸಂಪತ್ತಿನ ಬಲದಿಂದ ಕುಬೇರ ಸಮಾನನಾಗಿ ಕಂಡು ಬಂದನು. ಪ್ರಭುತ್ವವುಳ್ಳವನೂ, ಪ್ರತಾಪವಂತನೂ ಆಗಿದ್ದುದರಿಂದ ನೋಡುಗರಿಗೆ ಬೇರೊಬ್ಬ ಸೂರ್ಯನೇ ಇವನೇನೋ ಅನಿಸುತ್ತಿತ್ತು, ಮತ್ತೊಬ್ಬ ಕಾಶೀರಾಜನಂತೆ ಸಕಲ ವಿದ್ಯಾಪಾರಂಗತನಾಗಿದ್ದನು. ಬುದ್ಧಿವಂತಿಕೆಯಲ್ಲಿ ದೇವತೆಗಳ ಗುರುವಿಗೆ ಸಮಾನನಾಗಿದ್ದನು. ಸಮಾನ ದೃಷ್ಟಿಯಿಂದಲೂ, ಧರ್ಮ ಮಾರ್ಗದಿಂದಲೂ ಸಕಲ ರಾಜ್ಯವನ್ನೂ, ಗೋವುಗಳನ್ನೂ, ಗ್ರಾಮಗಳನ್ನೂ, ದೇವಾಲಯಗಳನ್ನೂ ರಕ್ಷಿಸುತ್ತ ರಾಜ್ಯಭಾರ ಮಾಡುತ್ತಿದ್ದನು. ದೇವ ಯಜ್ಞ, ಅಶ್ವಮೇಧ ಮೊದಲಾದ ಯಾಗಗಳನ್ನು ಮಾಡಿಸಿದನು. ಋತ್ವಿಜರೊಡನೆ ಶ್ರದ್ಧೆಯಿಂದಿದ್ದು, ಬಡವರನ್ನೂ ಸಂತಸಗೊಳಿಸುತ್ತಿದ್ದನು. ಅಧ್ಯಯನದಿಂದ ಋಷಿಗಳನ್ನೂ, ಕವ್ಯಗಳಿಂದ ಪಿತೃಗಳನ್ನೂ, ಅನ್ನದಿಂದ ದ್ವಿಜರನ್ನೂ, ಪ್ರತಿನಿತ್ಯವೂ ತೃಪ್ತಿಗೊಳಿಸುತ್ತಿದ್ದನು. ಹೀಗೆ ಕೆಲವು ಕಾಲ ಕಳೆಯಲು ಪಾರ್ವತಿಯು ಸೃಷ್ಟಿಸಿ ಬಳವಳಿಯಾಗಿ ನೀಡಿದ ಆದಿಮ ಸಂಜಾತೆಯಾದ ಅತಿ ಸೌಂದರ್ಯವತಿ ಯುವತಿಯಲ್ಲಿ ಅನುರಕ್ತನಾದನು. ಆಕೆಯಲ್ಲಿ ಪಾರ್ವತಿಯು ಹೇಳಿದಂತೆ ಗುಣವಂತರಾದ ಹಾಗೂ ಅತಿ ತೇಜೋವಂತರಾದ ಹನ್ನೊಂದು ಮಂದಿ ಶ್ರೇಷ್ಠರಾದ ಪುತ್ರರನ್ನು ಪಡೆದನು. ದಿನ ಕಳೆದಂತೆ ಆ ಹನ್ನ್ರೊಂದು ಮಂದಿ ಪುತ್ರರು ಶುಕ್ಲ ಪಕ್ಷದ ಚಂದ್ರನಂತೆ ವೃದ್ಧಿ ಹೊಂದಲಾರಂಭಿಸಿದರು. ಅವರ ಜನಕನಾದ ಚಂದ್ರವರ್ಮನು ಶಾಸ್ತ್ರ ವಿಧಿಯನ್ನು ಬಲ್ಲ ಪುರೋಹಿತರ ಮೂಲಕ ಆಯಾ ಕಾಲದಲ್ಲಿ ಮಾಡಬೇಕಾದ ಜಾತಃಕರ್ಮ, ನಾಮಕರಣ ಮೊದಲಾದ ಧಾರ್ಮಿಕ ವಿಧಿವಿಧಾನ ಸಹಿತ ಕಾರ್ಯಗಳನ್ನು ಮಾಡಿಸಿದನು. ತನ್ನ ಮಕ್ಕಳ ಜಾತಿಯ ಅಂದರೆ ಕ್ಷತ್ರಿಯರಲ್ಲದ ಆದಿಮ ಸಂಜಾತರಾದ ಯುವತಿಯರನ್ನೇ ವಿವಾಹ ಮಾಡಿಕೊಡುವ ಉದ್ದೇಶ ಹೊಂದಿದನು. ಅದಕ್ಕಾಗಿ ವಿದರ್ಭ ದೇಶದ ರಾಜನ ಅರಮನೆಯಲ್ಲಿ ಅಂತಹ ನೂರು ಮಂದಿ ಯುವತಿಯರಿರುವದನ್ನು ಅರಿತು ಕೊಂಡನು, ಅವರೆಲ್ಲರನ್ನೂ ಕರೆ ತಂದು ತನ್ನ ಮಕ್ಕಳಿಗೆ ವಿವಾಹ ಮಾಡಿಕೊಡುವ ಮೂಲಕ ಸಂತಾನಾಭಿವೃದ್ಧಿ ಮಾಡಬೇಕೆಂದು ಬಯಸಿದನು.

ಚಂದ್ರವರ್ಮನು ತನ್ನ ರಾಜ್ಯದಲ್ಲಿದ್ದ ಪ್ರಮುಖ ಕನ್ಯಾಸಂಘಟಕರನ್ನು ಕರೆಸಿದನು. ವಿದರ್ಭ ದೇಶಾಧಿಪತಿಯ ಬಳಿಗೆ ತನ್ನ ಮಕ್ಕಳಿಗೆ ಬೇಕಾದ ಯುವತಿಯರ ಅವಶ್ಯಕತೆಗಾಗಿ ಹೇಳಿ ಕಳುಹಿಸಿದನು. ಚಂದ್ರವರ್ಮನ ಕಡೆಯ ಕನ್ಯಾ ಸಂಘಟಕರು ವಿದರ್ಭ ದೇಶ ತಲುಪಿದರು. ಅವರು ಬಂದ ವಿಚಾರವನ್ನು ಕೇಳಿ ದ್ವಾರಪಾಲಕರು ವಿದರ್ಭ ರಾಜನ ಆಸ್ಥಾನಕ್ಕೆ ಕರೆದೊಯ್ದರು.

ಮಹಾತ್ಮನಾದ ವಿದರ್ಭ ರಾಜನಿಗೆ ತಾವು ಬಂದ ವಿಚಾರ ವನ್ನು ಸಂಘಟಕರು ವಿವರವಾಗಿ ತಿಳಿಸಿದರು. ಇದನ್ನು ಕೇಳಿ ರಾಜ ಶ್ರೇಷ್ಠನಾದ ವಿದರ್ಭನು ತಲೆದೂಗಿದನು. ಚಂದ್ರವರ್ಮನ ಹಿನ್ನೆಲೆಯನ್ನು ಚೆನ್ನಾಗಿ ತಿಳಿದುಕೊಂಡಿದ್ದ ವಿದರ್ಭನು ಆ ಕುರಿತು ರಾಜ ಸಭೆಯಲ್ಲಿಯೇ ಮುಕ್ತವಾಗಿ ನೆನಪಿಸಿಕೊಂಡನು. ಚಂದ್ರವರ್ಮನು ಉತ್ತಮ ರಾಜನೆಂದು ಪ್ರಶಂಸೆ ವ್ಯಕ್ತಪಡಿಸಿದನು. ತುಂಬಿದ ರಾಜಸಭೆಯಲ್ಲಿ ವಿದರ್ಭ ಮಹಾರಾಜ ಹೀಗೆ ಹೇಳುತ್ತಾನೆ:-ಚಂದ್ರವರ್ಮನು ಮಹಾಪುಣ್ಯಶಾಲಿಯಾಗಿದ್ದಾನೆ. ಶ್ರೇಷ್ಠರಾದ ಅರಸರಿಗೆ ಶಿರೋಭೂಷಣನಾಗಿದ್ದಾನೆ. ಪ್ರಕಾಶಮಯವಾದ ಮಾತ್ಸ್ಯ ವಂಶಕ್ಕೆ ಚಂದ್ರಪ್ರಾಯನಾಗಿದ್ದಾನೆ. ಅನೇಕ ಪುಣ್ಯ ಕ್ರಿಯಾಕಲಾಪಗಳನ್ನು ನಡೆಸಿದ್ದಾನೆ. ದೇವತೆಗಳಿಗೂ ದುರ್ಲಭವೆನಿಸಿದ ಪಾರ್ವತೀ ದೇವೀಯ ನೇರ ಕೃಪಾ ಕಟಾಕ್ಷಕ್ಕೆ ಪಾತ್ರನಾಗಿದ್ದಾನೆ. ಸತ್ಯ, ಕಾಂತಿ, ಲಕ್ಷ್ಮಿಯ ನೆಲಸುವಿಕೆಯಿಂದ ರಾಜ್ಯಭಾರ ನಿರ್ವಹಿಸುತ್ತಿದ್ದಾನೆ. ಉತ್ತಮೋತ್ತಮ ಗುಣಗಳಿಗೆ ಆಶ್ರಯದಾತನಾಗಿದ್ದಾನೆ ಎಂದು ವಿದರ್ಭ ರಾಜನು ತನ್ನ ಮುಕ್ತ ಅಭಿಪ್ರಾಯ ಪ್ರಕಟಿಸಿದನು.

ಬಳಿಕ ಕನ್ಯಾ ಸಂಧಾನಕ್ಕೆ ಚಂದ್ರವರ್ಮನ ಕಡೆಯಿಂದ ಬಂದವರಿಗೆ ಊಟೋಪಚಾರಗಳನ್ನು ನೆರವೇರಿಸಿದನು. ಜೊತೆಗೆ ಅವರುಗಳಿಗೆ ಗೌರವ ಪೂರ್ವಕವಾಗಿ ಬಟ್ಟ್ಟೆ ಒಡವೆಗಳನ್ನು ಕೂಡ ನೀಡಿ ಸತ್ಕರಿಸಿದನು. ಚಂದ್ರವರ್ಮನು ತನ್ನ ಹನ್ನೊಂದು ಮಂದಿ ಪುತ್ರರಿಗೆ ಸಂತಾನ ಪ್ರಾಪ್ತಿಗೋಸ್ಕರ ಬಯಸಿದ ನೂರು ಮಂದಿ ಕನ್ಯೆಯರ ಸಹಿತ ತಾನೇ ಕರೆದುಕೊಡು ಬರುವದಾಗಿ ವಿದರ್ಭ ರಾಜನು ಆ ಪ್ರತಿನಿಧಿಗಳಿಗೆ ತಿಳಿಸಿದನು. ಚಂದ್ರವರ್ಮನ ಪ್ರತಿನಿಧಿ ಗಳನ್ನು ಅವರ ದೇಶಕ್ಕೆ ಹಿಂತಿರುಗುವಂತೆ ಹೇಳಿ ಕಳುಹಿಸಿಕೊಟ್ಟನು.

ಬಳಿಕ ವಿದರ್ಭ ರಾಜನು ಚಂದ್ರವರ್ಮನನ್ನು ನೋಡುವ ಇಚ್ಛೆಯಿಂದ ತಯಾರಿ ನಡೆಸಿದನು. ವಿದರ್ಭನು ಸರ್ವ ಜನರ ಮನಸ್ಸನ್ನು ಸೆಳೆಯುವ ಸರ್ವಾಲಂಕಾರ ಭೂಷಿತೆಯರಾದ ನೂರಾರು ಸೌಂದರ್ಯವತಿ ಸ್ತ್ರೀಯರಿಂದ ಸುತ್ತುವರಿಯಲಟ್ಟಿ ದ್ದನು. ಆತನು ಅನೇಕ ಆದಿಮ ಸಂಜಾತರಾದ ಮಹಿಳೆಯ ರನ್ನು ವಿವಾಹವಾಗಿದ್ದನು. ಅರಮನೆಯಲ್ಲಿಯೇ ನೆಲೆಗೊಂಡಿದ್ದ ಅವರೆಲ್ಲರಿಗೂ ನೂರು ಪುತ್ರಿಯರು ಜನಿಸಿದ್ದರು. ಈ ನೂರು ಮಂದಿ ಆದಿಮ ಸಂಜಾತ ಪುತ್ರಿಯರಾದ ಯುವತಿಯರ ಸಹಿತನಾಗಿ ಚಂದ್ರವರ್ಮನ ರಾಜ್ಯಕ್ಕೆ ಪ್ರಯಾಣ ಬೆಳೆಸಿದನು. ದೇದೀಪ್ಯಮಾನವಾದ ಆನೆ, ಕುದುರೆ, ಕಾಲಾಳುಗಳ ಸೈನ್ಯ ಸಹಿತನಾಗಿ ತೆರಳಿದನು. ಸುವರ್ಣಮಯವಾದ ರಥವನ್ನೇರಿ ಚಂದ್ರವರ್ಮನಿಂದ ರಕ್ಷಿತವಾದ ಮಾತ್ಸ್ಯದೇಶಕ್ಕೆ ಜಾಗ್ರತೆಯಾಗಿ ಬಂದು ತಲುಪಿದನು. ಚಂದ್ರವರ್ಮನು ವಿದರ್ಭ ರಾಜನಿಗೆ ಭವ್ಯವಾದ ಸ್ವಾಗತವಿತ್ತನು. ಬಳಿಕ ವಿದರ್ಭನು ಚಂದ್ರವರ್ಮ ನಿಗೆ ನೂರು ಮಂದಿ ಸುಂದರಿಯರಾದ ಕನ್ನಿಕೆಯರನ್ನು ಕಾಣಿಕೆಯಾಗಿ ನೀಡಿದನು. ಇದರಿಂದ ಚಂದ್ರವರ್ಮನು ಅತಿ ಸುಪ್ರೀತನಾದನು. ಸಂತುಷ್ಟನಾದ, ಪ್ರತಾಪಶಾಲಿಯಾದ ಚಂದ್ರವರ್ಮನು ವಜ್ರ-ವೈಢೂರ್ಯಗಳಿಂದ ಕೆತ್ತಲ್ಪಟ್ಟ ಅಮೂಲ್ಯವಾದ ಒಡವೆಗಳನ್ನು ವಿದರ್ಭ ರಾಜನಿಗೆ ಪ್ರತಿ ಕಾಣಿಕೆಯಾಗಿತ್ತನು. ವೈವಿಧ್ಯಮಯ ವಿನ್ಯಾಸಗಳುಳ್ಳ ಉಂಗುರಗಳನ್ನು ಬಳವಳಿಯಾಗಿ ನೀಡಿದನು. ಕಪ್ಪು-ಬಿಳುಪು ಪಟ್ಟೆ ವಸ್ತ್ರಗಳನ್ನು ನೀಡಿದನು. ಜೊತೆಗೆ ಅತಿ ಶ್ರೇಷ್ಠವಾದ ಹಾರಗಳನ್ನಿತ್ತು ಆದರ ಪೂರ್ವಕ ಮಾತುಗಳಿಂದ ಸತ್ಕರಿಸಿದನು. ವಿದರ್ಭನಿಗೆ ಪರಿವಾರ ಸಹಿತ ಉಳಿದು ಕೊಳ್ಳಲು ಸರ್ವಾನುಕೂಲ ವ್ಯವಸ್ಥೆ ಕಲ್ಪಿಸಿದನು. ವಿದರ್ಭ ರಾಜನ ಸಮ್ಮುಖದಲ್ಲಿಯೇ ಆತನ ಪುತ್ರಿಯ ರೊಂದಿಗೆ ತನ್ನ 11 ಮಂದಿ ಪುತ್ರರಿಗೆ ವಿವಾಹ ವೇರ್ಪಡಿಸಿದನು.