ಮುಂಬರುವ ಆಗಸ್ಟ್ 5ನೇ ತಾರೀಖಿನಂದು ಅಯೋಧ್ಯಾದಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಮಧ್ಯಾಹ್ನ 12.30 ಗಂಟೆಗೆ ಶಂಕು ಸ್ಥಾಪನೆ ನರವೇರಿಸಲು ಸಕಲ ಸಿದ್ಧತೆಗಳನ್ನೂ ನಡೆಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದು, ಈಗಾಗಲೇ ಭದ್ರತಾ ಪಡೆಗಳು ಬಿಗಿ ಭದ್ರತೆ ಏರ್ಪಡಿಸಿವೆ. ಈ ಕಾರ್ಯಕ್ರಮದ ನೇರ ಪ್ರಸಾರ ಮಾಡಲು ರಾಷ್ಟ್ರೀಯ, ಅಂತರರಾಷ್ಟ್ರೀಯ ದೃಶ್ಯ ಮಾಧ್ಯಮಗಳು ಕಾರ್ಯೋನ್ಮುಖವಾಗಿವೆ.

ಈ ನಡುವೆ ಭಾರತದ ವಿರುದ್ಧ ಸದಾ ಸಂಚು ನಡೆಸುತ್ತಲೇ ಬಂದಿರುವ ನಮ್ಮ ನೆರೆ ರಾಷ್ಟ್ರ ಪಾಕಿಸ್ಥಾನ ಕೂಡ ಆಗಸ್ಟ್ 5 ರಂದು ದೇಶಾದ್ಯಂತ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾಕತಾಳೀಯವೆಂಬಂತೆ ಜಮ್ಮ-ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ದಿನವೂ ಆಗಿದೆ. ಅಂದು ಇಡೀ ಪಾಕಿಸ್ಥಾನದಾದ್ಯಂತ ಕರಾಳ ದಿನವನ್ನಾಗಿ ಆಚರಿಸಲು ಪ್ರಧಾನಿ ಇಮ್ರಾನ್ ಖಾನ್ ಸರ್ಕಾರ ಮತ್ತು ಸರ್ಕಾರದಲ್ಲಿ ಬಿಗಿ ಹಿಡಿತ ಹೊಂದಿರುವ ಅಲ್ಲಿನ ಸೇನೆ ಯೋಜನೆಯನ್ನು ಹಾಕಿಕೊಂಡಿದೆ. ಈಗಾಗಲೇ ಪಾಕ್ ಸರ್ಕಾರವು ‘ಕಾಶ್ಮೀರದಲ್ಲಿ ಭಾರತೀಯರ ಕ್ರೂರತೆ ಮತ್ತು ಕಾಶ್ಮೀರಿಗಳ ಪ್ರತಿರೋಧ’ ಎಂಬ ಘೋಷಣೆ ಅಡಿಯಲ್ಲಿ ದೇಶಾದ್ಯಂತ ಕಪ್ಪು ಬಾವುಟ ಪ್ರತಿಭಟನೆಗಳನ್ನು ನಡೆಸಲು ಯೋಜಿಸಿದೆ.

ಇದಕ್ಕಾಗಿ ಪಾಕ್ ವಾರ್ತಾ ಮತ್ತು ಪ್ರಚಾರ ಇಲಾಖೆ ದೇಶದ ಪ್ರಮುಖ ಪತ್ರಿಕೆಗಳಲ್ಲಿ 2-3 ಪುಟದ ಜಾಹೀರಾತು ಬಿಡುಗಡೆ ಮಾಡಲಿದೆ. ಜತೆಗೇ ಪತ್ರಿಕೆಗಳೂ ವಿಶೇಷ ಸಂಚಿಕೆ ಹೊರತರಲಿವೆ ಎಂದು ತಿಳಿದು ಬಂದಿದೆ. ಅಂದು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ವಿದೇಶೀ ಪತ್ರಕರ್ತರನ್ನು ಕರೆದೊಯ್ದ ನಂತರ ಪಾಕ್ ಸರ್ಕಾರ ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕಂಟ್ರೀಸ್ ಮತ್ತು ವಿಶ್ವ ಮಾನವ ಹಕ್ಕುಗಳ ಸಂಘಟನೆಯ ಗಮನ ಸೆಳೆಯಲು ಸರಣಿ ಟ್ವೀಟ್‍ಗಳನ್ನು ಮಾಡಲಿದೆ. ನಂತರ ಟರ್ಕಿ, ಮಲೇಷ್ಯಾ ಮತ್ತು ಚೀನಾದ ಸರ್ಕಾರಗಳು ಹೇಳಿಕೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಲ್ಲದೆ ಪಾಕಿಸ್ಥಾನದ ಕುಖ್ಯಾತ ಗುಪ್ತಚರ ಸಂಸ್ಥೆ ಐಎಸ್‍ಐ ಪ್ರಾಯೋಜಿತ ಲಷ್ಕರ್ ಏ ತೊಯ್ಬಾ ಸ್ಥಳೀಯ ಕಾಶ್ಮೀರಿ ಯುವಕರನ್ನೇ ಬಳಸಿಕೊಂಡು ಅಯೋಧ್ಯಾ ನಗರದಲ್ಲಿ ಬಾಂಬ್ ದಾಳಿ ನಡೆಸಲು ಯೋಜನೆ ರೂಪಿಸಿದೆ. ಈಗಾಗಲೇ ಉಗ್ರ ಕೃತ್ಯ ನಡೆಸಲು ಕಾಶ್ಮೀರದ 5 ಯುವಕರ ತಂಡವನ್ನೂ ಸಿದ್ಧವಾಗಿ ಇರಿಸಲಾಗಿದೆ ಎಂದು ಕೇಂದ್ರ ಗುಪ್ತಚರ ಮೂಲಗಳು ತಿಳಿಸಿವೆ.

ಮೊದಲಿನಿಂದಲೂ ಭಯೋತ್ಪಾದಕರನ್ನು ಸಾಕಿಕೊಂಡು ಭಾರತದ ಮೇಲೆ ಛೂ ಬಿಡುತ್ತಿರುವ ಪಾಕಿಸ್ಥಾನದ ಕಪಟ ನಾಟಕ ನಮ್ಮ ಭದ್ರತಾ ಪಡೆಗಳಿಗೆ ತಿಳಿಯದ್ದೇನಲ್ಲ. ಅಂತರರಾಷ್ಟ್ರೀಯವಾಗಿ ಭಯೋತ್ಪಾದನೆಯನ್ನೇ ರಫ್ತು ಮಾಡುತ್ತಿರುವ ದೇಶ ಎಂಬ ಕುಖ್ಯಾತಿಗೆ ಒಳಗಾಗಿರುವ ಪಾಕಿಸ್ಥಾನ ಇಂದು ಭಾರತ ಮತ್ತು ಅಫ್ಘಾನಿಸ್ಥಾನದಲ್ಲಿ ಉಗ್ರ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತಿರುವುದು ಗುಟ್ಟಾಗೇನೂ ಉಳಿದಿಲ್ಲ. ಆದರೆ ಪಾಕಿಸ್ಥಾನ ಎಂದಿಗೂ ಬುದ್ಧಿ ಕಲಿಯುವುದಿಲ್ಲ.

- ಕೋವರ್‍ಕೊಲ್ಲಿ ಇಂದ್ರೇಶ್