ಕೂಡಿಗೆ, ಆ.1: ಹಾರಂಗಿ ಅಣೆಕಟ್ಟೆ ಭರ್ತಿಯಾದಾಗ ಹೆಚ್ಚುವರಿ ನೀರನ್ನು ನದಿಗೆ ಹರಿಸಿದ ಸಂದರ್ಭದಲ್ಲಿ ಅಣೆಕಟ್ಟೆಯ ಮುಂಭಾಗದಲ್ಲಿರುವ ಸಣ್ಣ ಸೇತುವೆಯು ಪೂರ್ಣವಾಗಿ ಮುಚ್ಚಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಎಡ ಭಾಗದ ಹತ್ತು ಗ್ರಾಮಗಳಿಗೆ ತೆರಳಲು ಸಾಧ್ಯವಾಗು ತ್ತಿರಲಿಲ್ಲ. ಇದರಿಂದಾಗಿ ಈ ವ್ಯಾಪ್ತಿಯ ಗ್ರಾಮಸ್ಥರಿಗೆ ಬಹಳಷ್ಟು ತೊಂದರೆ ಆಗುತ್ತಿದ್ದವು. ಹಾಗಾಗಿ ಈ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಗ್ರಾಮಸ್ಥರು ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಸಲ್ಲಿಸಿದರು.

ಮನವಿಗೆ ಸ್ಪಂದಿಸಿದ ಶಾಸಕರು ಕಾವೇರಿ ನೀರಾವರಿ ನಿಗಮದ ಹಾರಂಗಿ ವಿಭಾಗದ ಅಭಿಯಂತರರಿಗೆ ಶಾಶ್ವತ ಸೇತುವೆ ನಿರ್ಮಾಣ ಮಾಡಲು ಪ್ರಸ್ತಾವನೆಯ ಜೊತೆಗೆ ಕ್ರಿಯಾ ಯೋಜನೆಯನ್ನು ತಯಾರಿಸಲು ಸೂಚನೆ ನೀಡಿದರು.

ನೀರಾವರಿ ಸಚಿವರೊಂದಿಗೆ ಚರ್ಚಿಸಿ ಮುಂದಿನ ಅಧಿವೇಶನದಲ್ಲಿ ವಿಷಯ ಪ್ರಸ್ತಾವನೆ ಮಾಡಿ ಸೇತುವೆಗೆ ಬೇಕಾಗುವ ಹಣ ಬಿಡುಗಡೆ ಮಾಡುವ ಭರವಸೆ ನೀಡಿದರು. ಈ ಸಂದರ್ಭ ನೀರಾವರಿ ಇಲಾಖೆಯ ಅಭಿಯಂತರ ಚನ್ನಕೇಶವ, ಕಾರ್ಯಪಾಲಕ ಅಭಿಯಂತರ ರಾಜೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್, ಅಭಿಯಂತರ ನಾಗರಾಜ್ ಕಿರಣ್, ಕೂಡು ಮಂಗಳೂರು ಗ್ರಾ.ಪಂ. ಸದಸ್ಯ ಬಾಸ್ಕರ್ ನಾಯಕ್, ಅಕ್ರಮ ಸಕ್ರಮ ಸಮಿತಿಯ ಸದಸ್ಯ ಭರತ್ ಮಾಚಯ್ಯ, ಗ್ರಾಮಸ್ಥರು ಇದ್ದರು.