ಗೋಣಿಕೊಪ್ಪ ವರದಿ, ಆ. 1: ಸೀಲ್‍ಡೌನ್ ವ್ಯಾಪ್ತಿಯಲ್ಲಿ ನಿಯಮ ಪಾಲನೆ ಸರಿಯಾಗಿ ಅನುಷ್ಠಾನ ಗೊಳಿಸಲು ಜಿಲ್ಲಾಧಿಕಾರಿ ಅವರು ವಿಶೇಷವಾಗಿ ಗಮನ ಹರಿಸಬೇಕು ಎಂದು ವೀರಾಜಪೇಟೆ ತಾಲೂಕು ಕಾಂಗ್ರೆಸ್ ಯುವಮೋರ್ಚಾ ಅಧ್ಯಕ್ಷ ಜಮ್ಮಡ ಕೆ. ಸೋಮಣ್ಣ ಒತ್ತಾಯಿಸಿದ್ದಾರೆ.

ಸೀಲ್‍ಡೌನ್ ವ್ಯಾಪ್ತಿಯಲ್ಲಿ ನಿಯಮಕ್ಕೆ ಸರಿಯಾಗಿ 100 ಮೀಟರ್ ಅಳತೆಯಲ್ಲಿ ನಿರ್ಬಂಧ ಮಾಡುತ್ತಿಲ್ಲ. ಇಂತಹ ಕಾರ್ಯಲೋಪ ನಡೆಯದಂತೆ ಕ್ರಮಕೈಗೊಳ್ಳಲು ಸೀಲ್‍ಡೌನ್ ಪ್ರದೇಶದಲ್ಲಿನ ಸೋಂಕು ಇರುವ ಮನೆ, ಕಟ್ಟಡಕ್ಕೆ ಮಾತ್ರ ನಿರ್ಬಂಧ ಹೇರುವುದು ಸೂಕ್ತ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾಕಷ್ಟು ಪ್ರದೇಶದಲ್ಲಿ 100 ಮೀಟರ್‍ಗೂ ಕಡಿಮೆ ನಿರ್ಬಂಧ ಮಾಡಲಾಗಿದೆ. ಒಂದೊಂದು ಕಡೆ ಕಟ್ಟಡಕ್ಕೆ ಮಾತ್ರ ಸೀಲ್ ಹಾಕಲಾಗಿದೆ. ಇದರಿಂದ ಜನರಲ್ಲಿ ಗೊಂದಲವಿದೆ. ಇದರ ನಿವಾರಣೆಗೆ ಜಿಲ್ಲಾಧಿಕಾರಿ ಮುಂದಾಗಬೇಕು ಎಂದರು.

ಒಂದು ಗ್ರಾಮದ ಒಂದು ಮನೆಯಲ್ಲಿ ಸೋಂಕಿತರಿದ್ದರೆ ಆ ಭಾಗದ ರಸ್ತೆ ಪೂರ್ತಿ ನಿರ್ಬಂಧ ಮಾಡುವುದರಿಂದ ಗೋಣಿಕೊಪ್ಪ ವ್ಯಾಪ್ತಿಯಲ್ಲಿ ತೊಂದರೆಯಾಗಿದೆ. ಸೋಂಕು ಇರುವ ಜಾಗದಿಂದ 2 ಕಿ. ಮೀ. ದೂರದ ಜನರಿಗೂ ಹೊರ ಬರಲು ಆಗುತ್ತಿಲ್ಲ. ಗೋಣಿಕೊಪ್ಪ 6ನೇ ವಿಭಾಗದಲ್ಲಿ ನಿರ್ಬಂಧ ಹೇರಿದ್ದಾಗ ಅಲ್ಲಿನ ನಿವಾಸಿಗಳಿಗೆ ಅಗತ್ಯ ವಸ್ತು ತಲುಪಿಸುವಲ್ಲಿ ಆಡಳಿತ ವಿಫಲವಾಗಿದೆ. ಒಂದಷ್ಟು ಸಂಘ-ಸಂಸ್ಥೆಗಳಿಂದ ವಿತರಣೆಯಾಗಿದೆ. ಆಹಾರಕ್ಕೆ ತೊಂದರೆ ಅನುಭವಿಸಿದವರು ಕೂಡ ಇದ್ದಾರೆ. ಇದು ಮುಂದುವರಿಯಬಾರದು ಎಂದು ಒತ್ತಾಯಿಸಿದರು.

ಗೊಷ್ಠಿಯಲ್ಲಿ ಉಪಾಧ್ಯಕ್ಷ ಲಾಲು ಸಾನಿಯಲ್, ಜಿಲ್ಲಾ ಸಮಿತಿ ಉಪಾಧ್ಯಕ್ಷ ರಶೀದ್, ಮುರುಗ, ಬಾಳಾಜಿ ಗ್ರಾಮದ ಸಂಚಾಲಕ ಕೊಣಿಯಂಡ ಮುತ್ತಣ್ಣ ಇದ್ದರು.