ಬಾಳಲೆ, ಜು. 31: ನಿಟ್ಟೂರು ಗ್ರಾಮದ ವಡ್ಡರಮಾಡು ಹೊಸ ಕಾಲೋನಿ ಪ್ರದೇಶವನ್ನು ಕಳೆದ 10 ದಿನಗಳಿಂದ ಒಬ್ಬರಿಗೆ ಕೊರೊನಾ ಸೋಂಕಿರುವ ಹಿನ್ನೆಲೆಯಲ್ಲಿ ಸೀಲ್‍ಡೌನ್ ಮಾಡಲಾಗಿತ್ತು.
ಆದರೆ ಇಂದು 4 ಪ್ರಕರಣ ಮತ್ತೆ ಬೆಳಕಿಗೆ ಬಂದಿದ್ದು, ಸೀಲ್‍ಡೌನ್ ಅವಧಿ ಮತ್ತೆ ವಿಸ್ತರಣೆ ಮಾಡಲಾಗಿದೆ. 23 ಕುಟುಂಬದ 98 ಮಂದಿ ಕೂಲಿ ಕಾರ್ಮಿಕರಾಗಿದ್ದು ಇವರಿಗೆ ದೈನಂದಿನ ಖರ್ಚು ವೆಚ್ಚಗಳನ್ನು ಭರಿಸಲು ಕಷ್ಟವಾಗುತ್ತಿದೆ ಕೆಲವು ಸಂಘ ಸಂಸ್ಥೆಗಳು ಆಹಾರ ಕಿಟ್ ನೀಡಿವೆಯಾದರೂ ಅವಧಿ ವಿಸ್ತರಣೆಯಾಗಿರುವುದರಿಂದ ಇವು ಸಾಕಾಗುತ್ತಿಲ್ಲ. ಈ ನಿಟ್ಟಿನಲ್ಲಿ 14 ದಿನಗಳಿಗೂ ಹೆಚ್ಚು ವಿಸ್ತರಣೆಯಾದ ಸೀಲ್‍ಡೌನ್ ಪ್ರದೇಶಗಳಿಗೆ ಜಿಲ್ಲಾಡಳಿತ ಆಹಾರ ಧಾನ್ಯ ಮತ್ತು ತರಕಾರಿ ನೀಡುವುದು ಸೂಕ್ತ ಇಲ್ಲದಿದ್ದರೆ ಹೊಟ್ಟೆ ಪಾಡಿಗಾಗಿ ಜನರು ಅಲ್ಲಲ್ಲಿ ಕೂಲಿ ಕೆಲಸಕ್ಕೆ ಕದ್ದು ಮುಚ್ಚಿ ಹೋಗುವ ಸಾದ್ಯತೆ ಇದೆ, ಇಲ್ಲಿನ ಜನರಿಗೆ ಕೊರೊನಾ ಬಗ್ಗೆ ಧ್ವನಿವರ್ಧಕಗಳ ಮೂಲಕ ಅರಿವು ಮೂಡಿಸುವ ಕಾರ್ಯ ನಡೆಯಬೇಕು. ಸಂಘ ಸಂಸ್ಥೆಗಳು ನೆರವು ನೀಡುವಂತೆಯೂ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇಚಂಡ ವಾಸು ಸೋಮಯ್ಯ ಮನವಿ ಮಾಡಿದ್ದಾರೆ.
ಕಾಲೋನಿಯವರಾದ ಆರೋಗ್ಯ ಇಲಾಖೆ ಆ್ಯಂಬುಲೆನ್ಸ್ ಚಾಲಕ ತನ್ನ ಸಂಬಂಧಿಯೊಬ್ಬರಿಗೆ ಸೋಂಕು ತಗಲಿದ ಮಾಹಿತಿ ಇದ್ದರೂ ಇವರನ್ನು ದ್ವಿಚಕ್ರ ವಾಹನದಲ್ಲಿ ಗೋಣಿಕೊಪ್ಪ ಕಡೆ ಕರೆದುಕೊಂಡು ಹೋಗಿ ಬಂದಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಇವರಿಂದ ಮತ್ತೆ ಕೆಲವರಿಗೆ ಹರಡುವ ಭೀತಿ ಇದೆ. ಮುಂಜಾಗ್ರತಾ ಕ್ರಮವಾಗಿ ಇವರನ್ನು ಕ್ವಾರಂಟೈನ್‍ಗೆ ಒಳಪಡಿಸಿ ಅಥವಾ ಗ್ರಾಮಕ್ಕೆ ಬಾರದಂತೆ ನೋಡಿಕೊಳ್ಳಲು ಸ್ಥಳಕ್ಕೆ ಆಗಮಿಸಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನಮೋಹನ್ ಅವರನ್ನು ಆಗ್ರಹಿಸಿದರು. ಆರೋಗ್ಯ ಅಧಿಕಾರಿಗಳ ಗಮನಕ್ಕೆ ತರವುದಾಗಿ ಅವರು ತಿಳಿಸಿದರು.
ಜನರ ಸುರಕ್ಷತೆಯ ದೃಷ್ಟಿಯಿಂದ ಕಾಫಿ ತೋಟ ಮಾಲೀಕರು ಈ ಭಾಗದ ಯಾರೊಬ್ಬರನ್ನು ತಾತ್ಕಾಲಿಕವಾಗಿ ತೋಟ ಕೆಲಸಕ್ಕೆ ಕರೆಸಿಕೊಳ್ಳ ಬೇಡಿ ಅಲ್ಲದೆ ಜಿಲ್ಲಾಡಳಿತ ನಿಬರ್ಂಧ ಸಡಿಲ ಮಾಡುವವರೆಗೂ ಯಾರೂ ಇತ್ತ ಸುಳಿದಾಡಬೇಡಿಯೆಂದು ಇಗ್ಗುತ್ತಪ್ಪ ಸಂಘದ ಅಧ್ಯಕ್ಷ ಕಾಟಿಮಾಡ ಶಿವಪ್ಪ ಮತ್ತು ಕಾರ್ಯದರ್ಶಿ ಮುಕ್ಕಾಟಿರ ಸೋಮಯ್ಯ ಮನವಿ ಮಾಡಿಕೊಂಡಿದ್ದಾರೆ.