ಸಂಪಾಜೆ, ಆ. 1: ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟವಾಗಿರುವ ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷಾ ಫಲಿತಾಂಶ ಬಂದ ಬಳಿಕ ಉತ್ತೀರ್ಣ ರಾದವರೆಲ್ಲರೂ ತಮ್ಮ ಭವಿಷ್ಯದ ವ್ಯಾಸಂಗದ ಚಿಂತನೆಯಲ್ಲಿ ತಲ್ಲೀನರಾಗಿರುತ್ತಾರೆ. ಅಗ್ರ ಶ್ರೇಣಿಯಲ್ಲಿ ಸಾಧನೆ ಮಾಡಿದವರಂತೂ ತಮ್ಮ ಮುಂದಿನ ಆಯ್ಕೆಯ ಬಗ್ಗೆ ಕನಸು ಕಾಣುತ್ತಿರುತ್ತಾರೆ. ಪಿಯುಸಿ ಮುಗಿಸಿ ದವರಂತೂ ಸಿಇಟಿ, ವೃತ್ತಿಪರ ಶಿಕ್ಷಣದತ್ತ ಮುಖ ಮಾಡಿರುತ್ತಾರೆ. ಆದರೆ, ಇಲ್ಲಿ ಅಗ್ರ ಶ್ರೇಣಿಯೊಂದಿಗೆ ಜಿಲ್ಲೆಯಲ್ಲಿ ಸಾಧನೆ ತೋರಿ ಪುಟ್ಟ ಗ್ರಾಮಕ್ಕೆ ಕೀರ್ತಿ ತಂದ ಸಾಧಕಿ ಯೋರ್ವಳು ತನ್ನ ಮುಂದಿನ ಭವಿಷ್ಯದ ನಿರೀಕ್ಷೆಯಲ್ಲಿದ್ದಾಳೆ. ವಿದ್ಯಾಭ್ಯಾಸ ಮುಂದುವರಿಸಿ ಪದವಿ ಪಡೆದು ಭವಿಷ್ಯ ಕಟ್ಟಿಕೊಳ್ಳುವ ಕನಸನ್ನು ಹೊತ್ತಿರುವ ಈಕೆಯ ಓದಿಗೆ ಬಡತನ ಅಡ್ಡಿಯಾಗಿದೆ. ಜೀವನ ನಿರ್ವಹಣೆ, ತಾಯಿ, ಸಹೋದರಿ ಹಾಗೂ ವಯಸ್ಸಾದ ಅಜ್ಜಿಯ ಜವಾಬ್ದಾರಿ ಯನ್ನು ಹೆಗಲ ಮೇಲೇರಿಸಿಕೊಂಡು ಕೂಲಿ ಕೆಲಸದತ್ತ ಮುಖ ಮಾಡಿರುವ ಈ ಸಾಧಕಿ ಬಡತನದ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾಳೆ. ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸಂಪಾಜೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹೆಚ್.ಸಿ. ಗೀತಾ ಕಲಾ ವಿಭಾಗದಲ್ಲಿ 600ಕ್ಕೆ 558 ಅಂಕ ಗಳಿಸಿ ಶೇ. 93 ಫಲಿತಾಂಶದೊಂದಿಗೆ ಕೊಡಗು ಜಿಲ್ಲೆಗೆ ತೃತೀಯ ಸ್ಥಾನಗಳಿಸಿದ್ದಾಳೆ. ಸಂಪಾಜೆ ಕಾಲೇಜಿಗೆ ಪ್ರಥಮಳಾಗಿ ಹೊರಹೊಮ್ಮಿದ್ದಾಳೆ. ಈಕೆಯ ಸಣ್ಣ ವಯಸ್ಸಿನಲ್ಲಿಯೇ ತಂದೆ
(ದಿ. ಶೇಖರ)ಯನ್ನು ಕಳೆದುಕೊಂಡು ತಾಯಿ ಜಾನಕಿಯ ಆಸರೆಯಲ್ಲಿ ಸಹೋದರಿ ಅಂಜಲಿ ಹಾಗೂ ಅಜ್ಜಿ ಸುಶೀಲರೊಂದಿಗೆ ಪುಟ್ಟದಾದ ಮನೆಯಲ್ಲಿ ವಾಸವಿದ್ದಾಳೆ. ತಾಯಿ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದರು. ತಂಗಿ ಅಂಜಲಿ ಅರ್ಧಕ್ಕೆ ಓದಿಗೆ ಕೊನೆ ಹಾಡಿ ತೋಟ ಕೆಲಸದತ್ತ ಹೆಜ್ಜೆ ಹಾಕಿದಳು. ಆದರೆ ಓದಿನಲ್ಲಿ ಮುಂದಿದ್ದ ಗೀತಾಳಿಗೆ ಸಂಕಷ್ಟದ ನಡುವೆ ಶಿಕ್ಷಣದಲ್ಲಿ ಆಸಕ್ತಿಯಿತ್ತಾದರೂ ಮುಂದೆ ಹೇಗೆ ಎಂಬ ಚಿಂತೆ ಕಾಡತೊಡಗಿತ್ತು. ಆ ಸಂದರ್ಭದಲ್ಲಿ ಕುಟುಂಬಸ್ಥರು, ಕಾಲೇಜಿನ ಉಪನ್ಯಾಸಕರು ಸಹಾಯ ಮಾಡಿದ್ದರಿಂದ ಓದು ಮುಂದುವರಿಸಿದಳು. ಜೊತೆಗೆ ಈಕೆಯೂ ರಜಾ ದಿನಗಳಲ್ಲಿ ದಿನಗೂಲಿ ಕೆಲಸಕ್ಕೆ ಹೋಗಿ ಪೋಷಕರ ಹೊರೆಯನ್ನು ಕೊಂಚ ಇಳಿಸಿಕೊಂಡಿದ್ದಾಳೆ.
ಅಜ್ಜಿಯ ಆಶ್ರಯ : ತೀರಾ ಬಡತನದಲ್ಲಿರುವ ಗೀತಾಳ ಕುಟುಂಬದ ಜೀವನ ಆಕೆಯ ಅಜ್ಜಿಯ ರೂ. 600 ವಿಧವಾ ವೇತನ ಹಾಗೂ ತಾಯಿ,
(ಮೊದಲ ಪುಟದಿಂದ) ಸಹೋದರಿಯ ಕೂಲಿ ಕೆಲಸದ ಸಂಬಳದಿಂದಲೇ ನಡೆಯುತ್ತಿದೆ. ಇದೀಗ ಕೆಲಸವೂ ಸರಿಯಾಗಿ ಸಿಗುತ್ತಿಲ್ಲದ ಕಾರಣ ಅಜ್ಜಿಯ ಪಿಂಚಣಿ ಹಣವೇ ಮೂಲಾಧಾರವಾಗಿದೆ. ಹಾಗಾಗಿ ಮುಂದಿನ ಭವಿಷ್ಯದ ಕನಸಿನೊಂದಿಗೆ ಗೀತಾಳು ಕೆಲಸಕ್ಕೆ ಹೋಗುತ್ತಿದ್ದಾಳೆ. ಕನಿಷ್ಟ ತನ್ನ ವೆಚ್ಚವನ್ನಾದರೂ ಭರಿಸಿಕೊಳ್ಳುವ ಇರಾದೆಯೊಂದಿಗೆ.
ಎಸ್‍ಎಸ್‍ಎಲ್‍ಸಿಯಲ್ಲೂ ಮುಂದು
ಗೀತಾ ಸಂಪಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಸರಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾಳೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲೂ ಈಕೆ 545 ಅಂಕ ಗಳಿಸುವದರೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಶಾಲೆಗೆ, ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ.
ಆದರೆ, ಈಗ ಮುಂದಿನ ವ್ಯಾಸಂಗ ಹಾಗೂ ಭವಿಷ್ಯದ ಚಿಂತೆ ಕಾಡಲಾರಂಭಿಸಿದೆ. ಅಜ್ಜಿಗೆ ವಯಸ್ಸಾಗಿದೆ, ತಾಯಿ ಕೂಡ ವೃದ್ಧಾಪ್ಯದತ್ತ ಕಾಲಿಡುತ್ತಿದ್ದಾರೆ, ಜೊತೆಗೆ ಸಹೋದರಿಯಿದ್ದು, ಆಕೆಯೂ ಪ್ರೌಢವಸ್ಥೆಯಲ್ಲಿದ್ದು, ಆಕೆಯ ಭವಿಷ್ಯವೂ ಈ ಮುಗ್ಧೆಯ ಹೆಗಲ ಮೇಲಿದೆ.
ಸಹೃದಯರ ಸ್ಪಂದನ ಬೇಕಿದೆ
‘ಸಾಧಕರಿಗೆ ಬಡತನವೇ ಮೊದಲ ಶತ್ರು’ ಎಂಬ ಮಾತಿನಂತೆ ಈಕೆಯ ಬಾಳಿನಲ್ಲೂ ಬಡತನ ಕಾಡುತ್ತಿದೆ. ಮುಂದಿನ ವ್ಯಾಸಂಗ, ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಈಕೆಗೆ ಸಹೃದಯರ, ದಾನಿಗಳ ಸ್ಪಂದನದ, ನೆರವಿನ ಅಗತ್ಯವಿದೆ.
ಮರದ ಕೊರಡನ್ನು, ಕಗ್ಗಲ್ಲನ್ನೂ ಕೆತ್ತಿ ಸುಂದರ ಶಿಲ್ಪವಾಗಿಸುವ ರೀತಿಯಲ್ಲಿ ಬಡತನದಲ್ಲಿ ಕೈತೊಳೆಯುತ್ತಿರುವ ಈ ಬಾಲಕಿಗೆ ನೆರವಿನ ಹಸ್ತ ಚಾಚಿದರೆ ಭವಿಷ್ಯದಲ್ಲಿ ಓರ್ವ ಉತ್ತಮ ಸಾಧಕಿಯನ್ನು ರೂಪಿಸ ಬಹುದೇನೋ? ಈಕೆಗೆ ಸಹಾಯ ಮಾಡಲಿಚ್ಚಿಸುವವರು ಈಕೆಯ ಬ್ಯಾಂಕ್ ಖಾತೆಗೆ ನೆರವು ನೀಡ ಬಹುದಾಗಿದೆ. ಅಥವಾ ವೈಯಕ್ತಿಕ ವಾಗಿಯೂ ಸಹಾಯ ಮಾಡ ಬಹುದಾಗಿದೆ. ಬ್ಯಾಂಕ್ ಖಾತೆ ವಿವರ ಗೀತಾ ಹೆಚ್.ಸಿ., ತಾಯಿ ಜಾನಕಿ, ಖಾತೆ ಸಂಖ್ಯೆ 0643101045783 ಐಎಫ್‍ಸಿ ಕೋಡ್ ಅಓಖಃ0000643 ಕೆನರಾ ಬ್ಯಾಂಕ್, ಕಲ್ಲುಗುಂಡಿ ಶಾಖೆ ದ.ಕ.
- ಕುಡೆಕಲ್ ಸಂತೋಷ್, ಶಭರೀಶ್ ಕುದ್ಕುಳಿ