ಮಡಿಕೇರಿ, ಜು. 31: ಸರಕಾರದ ಹೊಸ ಆದೇಶದಂತೆ ರಾಜ್ಯಾದ್ಯಂತ ಅನ್‍ಲಾಕ್-3 ಮಾರ್ಗಸೂಚಿ /ಆದೇಶವನ್ನು ಪ್ರಕಟಿಸಲಾಗಿದೆ. ಈ ಕುರಿತಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಇಂದು ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದು, ಹೊಸ ಮಾರ್ಗಸೂಚಿ ಆಗಸ್ಟ್ 1ರಿಂದ (ಇಂದಿನಿಂದ) ತಾ. 31ರವರೆಗೆ ಜಾರಿಯಲ್ಲಿರಲಿದೆ. ಜು. 31ರವರೆಗೆ ಅನ್‍ಲಾಕ್ -2 ಆದೇಶ ಜಾರಿಯಲ್ಲಿತ್ತು. ಹೊಸ ಮಾರ್ಗ ಸೂಚಿಯ ಕುರಿತಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸರಕಾರದ ನಿರ್ದೇಶನದಂತೆ ಹೊಸದಾಗಿ ಪ್ರಕಟಣೆ ನೀಡಿದ್ದು, ಇದರಂತೆ ಕೆಲವೊಂದು ಚಟುವಟಿಕೆ ಗಳನ್ನು ಇದೀಗ ಮುಕ್ತಗೊಳಿಸ ಲಾಗಿದ್ದು, ಇದನ್ನು ನಿಯಮಾನುಸಾರ ಅನುಸರಿಸಲು ಅವಕಾಶ ನೀಡಲಾಗಿದೆ. ಆದರೂ ಈ ಹಿಂದಿನಂತೆ ಕೆಲವೊಂದು ನಿರ್ಬಂಧಗಳು ಮುಂದುವರಿಯಲಿವೆ. ಯಾವುದಕ್ಕೆ ಅವಕಾಶ...ಯಾವುದಕ್ಕೆ ಇಲ್ಲ* ಜಿಲ್ಲೆಯಲ್ಲಿ ಕಂಟೈನ್‍ಮೆಂಟ್ ವಲಯಗಳ ಹೊರಭಾಗದಲ್ಲಿ ಈ ಕೆಳಕಂಡ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದಂತೆ ಅನುಮತಿಸಲಾದ ಎಲ್ಲಾ ಚಟುವಟಿಕೆ ಗಳನ್ನು ನಿಯಮಾನುಸಾರ ನಡೆಸಬಹುದಾಗಿದೆ.

* ಶಾಲೆ, ಕಾಲೇಜು, ಶೈಕ್ಷಣಿಕ, ತರಬೇತಿ,

(ಮೊದಲ ಪುಟದಿಂದ) ಕೋಚಿಂಗ್ ಕೇಂದ್ರಗಳ ಚಟುವಟಿಕೆಗಳು ದಿನಾಂಕ 31.08.2020ರ ವರೆಗೆ ಇರುವುದಿಲ್ಲ. ಆದಾಗ್ಯೂ, ಆನ್‍ಲೈನ್ / ದೂರ ಶಿಕ್ಷಣ ನಡೆಸಬಹುದಾಗಿದೆ.

* ಸಿನಿಮಾ ಹಾಲ್, ಈಜು ಕೊಳ, ಮನೋರಂಜನಾ ಪಾರ್ಕ್, ಥಿಯೇಟರ್‍ಗಳು, ಬಾರ್ ಮತ್ತು ಆಡಿಟೋರಿಯಂ, ಅಸೆಂಬ್ಲಿ ಹಾಲ್ ಮತ್ತು ಇಂತಹ ಸ್ಥಳಗಳಲ್ಲಿ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ.

* ಯೋಗ ಕೇಂದ್ರಗಳು ಮತ್ತು ಜಿಮ್ನಾಸಿಯಂ ಕೇಂದ್ರಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ಎಸ್‍ಓಪಿ ಸ್ವೀಕೃತವಾದ ನಂತರ ನಡೆಸಬಹುದಾಗಿದೆ.

* ಎಲ್ಲಾ ಸಾಮಾಜಿಕ / ರಾಜಕೀಯ / ಕ್ರೀಡೆ / ಮನೋರಂಜನೆ / ಶೈಕ್ಷಣಿಕ / ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ಮತ್ತು ಇತರ ಹೆಚ್ಚು ಸಂಖ್ಯೆಯ ಒಗ್ಗೂಡುವಿಕೆ ಮುಂತಾದ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ.

ಮೇಲ್ಕಂಡಂತೆ ಭಾಗಶಃ ಮಾರ್ಪಾಡಿನ ಹೊರತಾಗಿ ಉಳಿದಂತೆ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.