ಅಂಬಾಲಾ, ಜು. 29: ತೀವ್ರ ನಿರೀಕ್ಷೆ ಹುಟ್ಟಿಸಿರುವ ಫ್ರಾನ್ಸ್ ನಿರ್ಮಿತ ರಾಫೆಲ್ ಯುದ್ಧ ವಿಮಾನ ಹರ್ಯಾಣ ಅಂಬಾಲಾ ವಾಯುನೆಲೆಗೆ ಆಗಮಿಸಿದ್ದು, ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮ್ಸಾರ್Àಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಬರಮಾಡಿಕೊಂಡಿದ್ದಾರೆ. ಫ್ರಾನ್ಸ್‍ನಿಂದ ಹೊರಟಿದ್ದ ಮೊದಲ ಹಂತದ ಐದು ರಾಫೆಲ್ ಯುದ್ಧ ವಿಮಾನಗಳು ಇಂದು ಮಧ್ಯಾಹ್ನ ಅಂಬಾಲ ವಾಯುನೆಲೆಗೆ ಬಂದಿಳಿದಿವೆ. ಫ್ರಾನ್ಸ್ ಮೂಲದ ಡಸಾಲ್ಟ್ ಕಂಪೆನಿ ನಿರ್ಮಿತ 5 ರಾಫೆಲ್ ಫೈಟರ್ ಜೆಟ್ ವಿಮಾನಗಳು ಇದಾಗಿದ್ದು, ಈ ಐದು ಯುದ್ಧ ವಿಮಾನಗಳ ಪೈಕಿ ಎರಡು ವಿಮಾನಗಳು 2 ಸೀಟರ್ ತರಬೇತಿ ವಿಮಾನಗಳಾಗಿದ್ದು, 3 ಸಿಂಗಲ್ ಸೀಟರ್ ಫೈಟರ್ ಜೆಟ್‍ಗಳಾಗಿವೆ. ಫ್ರೆಂಚ್ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಏವಿಯೇಶನ್ ಕಾರ್ಖಾನೆ ನಿರ್ಮಿಸಿದ ರಫೆಲ್ ಫೈಟರ್ ಜೆಟ್‍ಗಳು ದಕ್ಷಿಣ ಫ್ರಾನ್ಸ್‍ನ ಬೋರ್ಡಾಕ್ಸ್ ನಗರದ ಮೆರಿಗ್ನಾಕ್ ವಾಯು ನೆಲೆಯಿಂದ ತಾ. 27 ರಂದು ಭಾರತದತ್ತ ಮುಖ ಮಾಡಿದ್ದವು. ಬಳಿಕ 7 ತಾಸಿನ ಪ್ರಯಾಣ ಮುಗಿಸಿ, ಮಂಗಳವಾರ ಯುಎಇಯ ಅಲ್ ದಫ್ರಾ ನೆಲೆಯಲ್ಲಿ ಸುರಕ್ಷಿತವಾಗಿ ಇಳಿದಿದ್ದವು. ಬಳಿಕ ಇಂದು ಬೆಳಿಗ್ಗೆ 11.44ರ ಹೊತ್ತಿನಲ್ಲಿ ಮತ್ತೆ ಟೇಕ್‍ಆಫ್ ಆದ ಯುದ್ಧ ವಿಮಾನಗಳು ಭಾರತದತ್ತ ಮುಖ ಮಾಡಿದ್ದವು. ಇದೀಗ ಹರ್ಯಾಣ ಅಂಬಾಲಾ ಏರ್‍ಬೇಸ್‍ಗೆ ಬಂದಿಳಿದಿವೆ. ಅಂಬಾಲಾ ವಾಯು ನೆಲೆಯಲ್ಲಿ ಬಂದಿಳಿದ ರಾಫೆಲ್ ಯುದ್ಧ ವಿಮಾನಗಳನ್ನು ಭಾರತೀಯ ಸೇನೆ ವಾಟರ್ ಸೆಲ್ಯೂಟ್ ಮಾಡುವ ಮೂಲಕ ಸ್ವಾಗತ ಕೋರಿತು. ವಾಯು ನೆಲೆಯಲ್ಲಿದ್ದ ಎರಡು ವಾಟರ್ ಜೆಟ್ ವಾಹನಗಳು ವಿಮಾನಗಳ ಮೇಲೆ ನೀರನ್ನು ಸುರಿಯುವ ಮೂಲಕ ವಿಧ್ಯುಕ್ತವಾಗಿ ವಿಮಾನಗಳನ್ನು ಬರ ಮಾಡಿಕೊಂಡವು.

ಪಠ್ಯಾಂಶಗಳನ್ನು ಅಂತಿಮಗೊಳಿಸಿಲ್ಲ

ಬೆಂಗಳೂರು, ಜು. 29: ಕೋವಿಡ್-19 ಹಿನ್ನೆಲೆ ಶಿಕ್ಷಣ ಇಲಾಖೆ ಒಂದರಿಂದ ಹತ್ತನೇ ತರಗತಿವರೆಗೆ ಎಲ್ಲ ವಿಷಯಗಳ ವೈಜ್ಞಾನಿಕ ಪಠ್ಯ ಕಡಿತಕ್ಕೆ ಮುಂದಾಗಿದ್ದು, ಇನ್ನೂ ಶೈಕ್ಷಣಿಕ ವರ್ಷದ ಅವಧಿ ನಿಗದಿಯಾಗದ ಹಿನ್ನೆಲೆ ಪಠ್ಯಾಂಶಗಳನ್ನು ಅಂತಿಮಗೊಳಿಸಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ. 1ನೇ ತರಗತಿಯಿಂದ 10ನೇ ತರಗತಿವರೆಗೆ ಪಠ್ಯಕ್ರಮದಲ್ಲಿ ಶೇ. 30 ರಷ್ಟು ಕಡಿತಗೊಳಿಸುವ ಪ್ರಸ್ತಾವನೆ ಇಲ್ಲ. ಪಠ್ಯದಲ್ಲಿ ಜೀಸರ್, ಪ್ರವಾದಿ ಮೊಹಮದ್, ಹೈದರಾಲಿ, ಟಿಪ್ಪು ಸುಲ್ತಾನ್, ರಾಣಿ ಅಬ್ಬಕ್ಕ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಪಠ್ಯಗಳನ್ನು ಕಡಿತ ಮಾಡಿಲ್ಲ. 2020-21ನೇ ಸಾಲಿನ ಶೈಕ್ಷಣಿಕ ಪಠ್ಯಕ್ರಮಗಳ ತಯಾರಿಯ ಕರಡು ಪ್ರತಿ ಇದಾಗಿದ್ದು, ಇದಿನ್ನೂ ಅಂತಿಮ ಗೊಳಿಸಿಲ್ಲ. ಹೀಗಾಗಿ ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲವೆಂದು ವಿವರಿಸಿದರು. ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಹಾಗೂ ವಿಪಕ್ಷ ನಾಯಕರ ಟ್ವೀಟ್‍ಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಶೈಕ್ಷಣಿಕ ವರ್ಷ ಪ್ರಾರಂಭವಾಗದಿರುವುದರಿಂದ ನಮಗೆ ಎಷ್ಟು ದಿನಗಳು ದೊರೆಯುತ್ತವೆಂಬುದು ಇನ್ನೂ ಅಸ್ಪಷ್ಟವಾಗಿರುವುದರಿಂದ ಸಿಲೆಬಸ್‍ನ್ನು ಅಂತಿಮಗೊಳಿಸಿಲ್ಲ. ಮುಂದಿನ ದಿನಗಳಲ್ಲಿ ಲಭ್ಯ ಅವಧಿಯ ಆಧಾರದ ಮೇಲೆ ನಿರ್ಧರಿಸಲಾಗುವುದು. ಪಠ್ಯ ಕಡಿತವು ವೈಜ್ಞಾನಿಕವಾಗಿರಲಿದ್ದು, ಯಾವುದೇ ಪಠ್ಯವನ್ನು ಅನಗತ್ಯವಾಗಿ ಕಡಿತ ಮಾಡುವುದಿಲ್ಲ. ಹಾಗಾಗಿ ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲ ಎಂದು ಹೇಳಿದ್ದಾರೆ.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ

ನವದೆಹಲಿ, ಜು. 29: ಶಾಲಾ ದಾಖಲಾತಿ ಹೆಚ್ಚಳ ಸೇರಿದಂತೆ ಉನ್ನತ ಶಿಕ್ಷಣದಲ್ಲಿ ಪ್ರಮುಖ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ರೂಪಿಸಿರುವ ಬಹುನಿರೀಕ್ಷಿತ ನೂತನ ರಾಷ್ಟ್ರೀಯ ಶಿಕ್ಷಣ ನೀತಿ- 2020ಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಕ್ರಿಯಾಲ್ ನಿಶಾಂಕ್ ಕೂಡ ಉಪಸ್ಥಿತರಿದ್ದರು. ಸಚಿವ ಸಂಪುಟ ತೀರ್ಮಾನಗಳ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದ ಉನ್ನತ ಶಿಕ್ಷಣ ಕಾರ್ಯದರ್ಶಿ ಅಮಿತ್ ಖರೆ, ರಾಷ್ಟ್ರೀಯ ಶಿಕ್ಷಣ ನೀತಿ ಬಹು-ವಿಷಯಗಳ ಶಿಕ್ಷಣವನ್ನು ಉತ್ತೇಜಿಸುತ್ತದೆ ಮತ್ತು ಐದು ವರ್ಷದ ಪದವಿ / ಸ್ನಾತಕೋತ್ತರ ಕೋರ್ಸ್ ಅನ್ನು ಸಂಯೋಜಿಸುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ಇ-ಕೋರ್ಸ್‍ಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಅಭಿವೃದ್ಧಿಪಡಿಸಲಾಗುವುದು, ವರ್ಚುಯಲ್ ಪ್ರಯೋಗಾಲಯಗಳ ಅಭಿವೃದ್ಧಿ ಮತ್ತು ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆ (ಎನ್‍ಇಟಿಎಫ್) ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ. ಗಮನಾರ್ಹವಾಗಿ, ಹೊಸ ಶಿಕ್ಷಣ ನೀತಿಯ ರಚಿಸುವುದು ಮತ್ತು ಅದನ್ನು ಅಂತಿಮಗೊಳಿಸುವ ಪ್ರಕ್ರಿಯೆಗೆ ಹಿಂದಿನ ಮೋದಿ ಸರ್ಕಾರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಚಾಲನೆ ನೀಡಿದ್ದರು. ಈ ನೀತಿಯನ್ನು ಅಂತಿಮಗೊಳಿಸಿ, ಅನುಮೋದನೆ ಪಡೆಯಲು ಆರು ವರ್ಷಗಳು ಬೇಕಾಯಿತು. ಮೊದಲು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಹೊಸ ಶಿಕ್ಷಣ ನೀತಿ ರೂಪಿಸಿದ್ದರು.

ರಾಫೆಲ್ ವಿಮಾನ ಚಲಾಯಿಸಿದ ಕನ್ನಡಿಗ

ವಿಜಯಪುರ, ಜು. 29: ಫ್ರಾನ್ಸ್‍ನಿಂದ ಭಾರತಕ್ಕೆ ಆಗಮಿಸಿರುವ ಐದು ರಾಫೆಲ್ ಯುದ್ಧ ವಿಮಾನಗಳ ಪೈಕಿ ಒಂದು ಯುದ್ಧ ವಿಮಾನವನ್ನು ಚಲಾಯಿಸಿಕೊಂಡು ಬಂದಿದ್ದು ಓರ್ವ ಹೆಮ್ಮೆಯ ಕನ್ನಡಿಗ. ತೀವ್ರ ಕುತೂಹಲ ಕೆರಳಿಸಿದ್ದ ರಾಫೆಲ್ ಯುದ್ಧ ವಿಮಾನದ ಆಗಮನ ಪೂರ್ಣವಾಗಿದ್ದು, ಈ ಐದು ಯುದ್ಧ ವಿಮಾನಗಳ ಪೈಲಟ್‍ಗಳ ತಂಡದಲ್ಲಿ ಕರ್ನಾಟಕ ಮೂಲದ ಓರ್ವ ಪೈಲಟ್ ಕೂಡ ಇದ್ದಾರೆ. ಕರ್ನಾಟಕದ ವಿಜಯಪುರ ಮೂಲದ ಸೈನಿಕರೊಬ್ಬರು ಭಾರತಕ್ಕೆ ರಾಫೆಲ್ ಯುದ್ಧ ವಿಮಾನವನ್ನು ಚಲಾಯಿಸಿಕೊಂಡು ಬಂದಿದ್ದಾರೆ. ವಿಜಯಪುರ ಸೈನಿಕ ಶಾಲೆಯಲ್ಲಿ ಅಭ್ಯಾಸ ಪಡೆದ 35 ವರ್ಷದ ವಿಂಗ್ ಕಮಾಂಡರ್ ಅರುಣ್‍ಕುಮಾರ್ ಅವರು ರಾಫೆಲ್ ಯುದ್ಧ ವಿಮಾನ ವನ್ನು ಭಾರತಕ್ಕೆ ಚಲಾಯಿಸಿಕೊಂಡು ಬಂದಿದ್ದಾರೆ. ಅರುಣ್‍ಕುಮಾರ್ 1995 ರಿಂದ 2001 ರವರೆಗೆ ವಿಜಯಪುರದ ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.

ಧೂಮಪಾನದಿಂದ ಕೊರೊನಾ ಬರುತ್ತೆ !

ನವದೆಹಲಿ, ಜು. 29: ಧೂಮಪಾನ ವ್ಯಸನಿಗಳು ಕೋವಿಡ್-19 ರೋಗಕ್ಕೆ ತುತ್ತಾಗುವ ಅಪಾಯ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವಾಲಯ ಎಚ್ಚರಿಸಿದೆ. ತಂಬಾಕು ಪದಾರ್ಥಗಳ ಸೇವನೆಯಿಂದಾಗಿ ಶ್ವಾಸಕೋಶಕ್ಕೆ ಸಂಬಂಧಿಸಿದ ಸೋಂಕುಗಳು ಹೆಚ್ಚಾಗಲಿದ್ದು, ಕೋವಿಡ್-19ಗೆ ತುತ್ತಾಗುವ ಸಾಧ್ಯತೆಗಳೂ ಹೆಚ್ಚಿರುತ್ತವೆ. ಆರೋಗ್ಯ ಸಚಿವಾಲಯ ಪ್ರಕಟಿಸಿರುವ ಕೋವಿಡ್-19 ಸಾಂಕ್ರಾಮಿಕ ಹಾಗೂ ಭಾರತದಲ್ಲಿ ತಂಬಾಕು ಸೇವನೆ ಎಂಬ ಡಾಕ್ಯುಮೆಂಟ್‍ನಲ್ಲಿ ತಜ್ಞರು ಹೇಳಿರುವ ಪ್ರಕಾರ ತಂಬಾಕು ಸೇವನೆಯಿಂದಾಗಿ ಶ್ವಾಸಕೋಶ ಹಾಳಾಗಿರುತ್ತದೆ, ಇಂತಹ ವ್ಯಕ್ತಿಗಳಿಗೆ ಕೋವಿಡ್-19 ಸೋಂಕು ಸುಲಭವಾಗಿ ತಗುಲುತ್ತದೆ. ತಂಬಾಕು ಸೇವನೆ, ಧೂಮಪಾನದಿಂದಾಗಿ ಸಾಂಕ್ರಾಮಿಕವಲ್ಲದ ಶ್ವಾಸಕೋಶದ ಸಮಸ್ಯೆಗಳು (ಎನ್‍ಸಿಡಿ) ಹೆಚ್ಚಾಗಲಿದ್ದು ಎನ್‍ಸಿಡಿಯಿಂದಾಗಿ ಭಾರತದಲ್ಲಿ ಶೇ. 63 ಸಾವುಗಳು ಇವುಗಳಿಂದಲೇ ಸಂಭವಿಸುತ್ತಿವೆ. ಕೋವಿಡ್-19 ಸೋಂಕು ತಗುಲಿದರೆ ಈ ರೀತಿಯ ಎನ್ ಸಿಡಿ ರೋಗಗಳು ವ್ಯಕ್ತಿಯಲ್ಲಿ ಮತ್ತಷ್ಟು ಉಲ್ಬಣವಾಗುತ್ತವೆ ಎಂದು ಆರೋಗ್ಯ ಸಚಿವಾಲಯ ಎಚ್ಚರಿಸಿದೆ.

ಅಯೋಧ್ಯೆ ಮೇಲೆ ದಾಳಿಗೆ ಸಂಚು

ನವದೆಹಲಿ, ಜು. 29: ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಆಗಸ್ಟ್ 5 ರಂದು ನಡೆಯಲಿರುವ ಶಿಲಾನ್ಯಾಸದ ಕಾರ್ಯಕ್ರಮದ ವೇಳೆ ದಾಳಿ ನಡೆಸಲು ಉಗ್ರರು ಸಂಚು ನಡೆಸಿದ್ದು ಉಗ್ರರಿಗೆ ಐಎಸ್‍ಐ ತರಬೇತಿ ನೀಡುತ್ತಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. ಅಯೋಧ್ಯೆ ಇಲ್ಲದೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಕೂಡ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಸಂಚು ರೂಪಿಸಲಾಗಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‍ಐ) ನೆರವಿನೊಂದಿಗೆ ಭಾರತದಲ್ಲಿ ವಿಧ್ವಂಸಕ ಸೃಷ್ಟಿಸಲು ಸಂಚು ರೆಡಿಯಾಗಿದೆ ಎಂದು ಗುಪ್ತಚರ ಇಲಾಖೆ ಕೇಂದ್ರಕ್ಕೆ ಮಾಹಿತಿ ನೀಡಿದೆ.