ಮಡಿಕೇರಿ, ಜು. 29: ಜಿಲ್ಲಾ ಕೋವಿಡ್ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಈ ಹಿಂದೆ 20 ಹಾಸಿಗೆ ಸಾಮಥ್ರ್ಯವಿದ್ದದ್ದು ಮುಂಜಾಗ್ರತಾ ಕ್ರಮವಾಗಿ ಇದನ್ನು 56ಕ್ಕೆ ಏರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಸೋಂಕಿತರ ಸಂಖ್ಯೆ ಏರುತ್ತಿದ್ದು, ಕೋವಿಡ್ ಸಂಬಂಧಿತ ತುರ್ತು ಕ್ರಮಕ್ಕಾಗಿ ಹೆಚ್ಚುವರಿ ಸಿಬ್ಬಂದಿಯನ್ನು ಕೂಡ ಗುರುತಿಸಿ ತರಬೇತಿ ನೀಡಲಾಗುತ್ತಿರುವುದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಐಸಿಯು ವಿಭಾಗವನ್ನು ಆನಸ್ತೇಶಿಯಾ ವಿಭಾಗದಿಂದ ನಿಭಾಯಿಸಲಾಗುತ್ತಿದ್ದು, ಈ ವಿಭಾಗದ ಶುಶ್ರೂಷಕಿಯರಿಗೆ ಕೋವಿಡ್ ಸಂಬಂಧ ತರಬೇತಿ ನೀಡುತ್ತಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಇದುವರೆಗೆ ಕೋವಿಡ್ ಸಂಬಂಧ ಐಸಿಯುನಲ್ಲಿ 30 ಮಂದಿಗೆ ಚಿಕಿತ್ಸೆ ನೀಡಲಾಗಿದ್ದು, 2 ಮಂದಿ ಮೃತಪಟ್ಟಿದ್ದು, 23 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ ಹಾಗೂ ಪ್ರಸ್ತುತ 5 ಮಂದಿ ಇನ್ನು ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ.