ಮಡಿಕೇರಿ, ಜು. 29: ಸಹಕಾರ ನೋಂದಣಿ ಕಾಯ್ದೆಯಡಿಯಲ್ಲಿ ಎಲ್ಲ ಸಂಘ- ಸಂಸ್ಥೆಗಳು, ಕ್ಲಬ್‍ಗಳು, ವಿದ್ಯಾಸಂಸ್ಥೆಗಳು ತಮ್ಮ ವಾರ್ಷಿಕ ಲೆಕ್ಕಪತ್ರದೊಂದಿಗೆ ಬರುವ ಡಿಸೆಂಬರ್ ಒಳಗೆ, ನೋಂದಣಿ ನವೀಕರಿಸಿಕೊಳ್ಳುವಂತೆ ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.

ಪ್ರಸ್ತುತ ಕೋವಿಡ್-19 ಹಿನ್ನೆಲೆ ವಾರ್ಷಿಕ ಮಹಾಸಭೆಗಳನ್ನು ಆಯೋಜಿಸಲು ತೊಡಕು ಉಂಟಾಗಿರುವ ಕಾರಣ, ಬರುವ ಡಿ.31ರ ತನಕ ಸಮಯಾವಕಾಶ ವಿಸ್ತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 08272-228519 ಅಥವಾ 9880233270ದಲ್ಲಿ ಸಂಪರ್ಕಿಸಲು ಕೋರಿದೆ.

ಕೈಕೊಟ್ಟ ಮುಂಗಾರು: ಅರ್ಧಂಬರ್ಧ ನಡೆದ ನಾಟಿ ಕಾರ್ಯ

ಶನಿವಾರಸಂತೆ, ಜು. 29: ಪಟ್ಟಣ ಹಾಗೂ ಹೋಬಳಿಯಾದ್ಯಂತ ಬಿಸಿಲಿನ ವಾತಾವರಣ ದಕ್ಷಿಣ ಕೊಡಗು ಉತ್ತರ ಕೊಡಗಿನ ಕೆಲ ಭಾಗದಲ್ಲಿ ಮಳೆಯಾಗುತ್ತಿದ್ದರೂ, ಶನಿವಾರಸಂತೆ ಹೋಬಳಿಯಲ್ಲಿ ಮಳೆಯಾಗುತ್ತಿಲ್ಲ. 15 ದಿನಗಳಿಂದ ಮುಂಗಾರು ಮಳೆ ಕೈಕೊಟ್ಟಿದ್ದು, ಭತ್ತ ಬೆಳೆದ ಬಹುತೇಕ ರೈತರು ಕಂಗಾಲಾಗಿದ್ದಾರೆ. ಒಮ್ಮೊಮ್ಮೆ ಮಾತ್ರ ತುಂತುರು ಮಳೆಯ ಸಿಂಚನವಾಗುತ್ತಿದ್ದರೆ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಹೊಳೆ ಬತ್ತಿ ಹೋಗಿದ್ದು, ಕಾಜೂರು, ಕೂಜಗೇರಿ, ದುಂಡಳ್ಳಿ ಗ್ರಾಮಗಳ ಹಲವಾರು ರೈತರು ಉತ್ತಮ ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಕೆಲವು ಗದ್ದೆಗಳಲ್ಲಿ ಅರ್ಧಂಬರ್ಧ ನಾಟಿ ಕಾರ್ಯವಾಗಿದ್ದು, ಉಳಿದ ನಾಟಿ ಮಾಡುವ ಬಗ್ಗೆ ಗೊಂದಲದಲ್ಲಿದ್ದಾರೆ.

ಗದ್ದೆಗಳಲ್ಲಿ ನಾಟಿಗಾಗಿ ಸಿದ್ಧತೆ ಮಾಡಿಕೊಂಡಿದ್ದರೂ, ಮಳೆ ಸುರಿಯುತ್ತಿಲ್ಲ. ಭೂಮಿ ಸಾಕಷ್ಟು ಒದ್ದೆಯಾಗಿಲ್ಲ. ಹೊಳೆ, ಕೆರೆ, ಕೊಳವೆ ಬಾವಿಯಿಂದ ನೀರು ಹಾಯಿಸಿ ಮೋಟಾರ್ ಕೆಟ್ಟು ನಿಂತಿದೆ. ಒಣಗಿ ನಿಂತಿರುವ ಭೂಮಿಗೆ ನೀರು ಹಾಯಿಸಿ ನೇಗಿಲು, ಟ್ರ್ಯಾಕ್ಟರ್‍ನಲ್ಲಿ ಉಳುಮೆ ಮಾಡುವುದೂ ಕಷ್ಟವಾಗುತ್ತಿದೆ. ಗದ್ದೆಯಲ್ಲಿ ನೀರನ್ನು ಮೇಲೆ ಕೆಳಗೆ ಹಾಯಿಸಿ ನಾಟಿ ಕೆಲಸ ಮುಗಿಸುವುದು ಹೇಗೆ ಅನ್ನೋ ಚಿಂತೆಯಾಗಿದೆ ಎಂದು ರೈತ ಚಂದ್ರಣ್ಣ ಅಳಲು ತೋಡಿಕೊಂಡರು.

ಮಳೆÉ ಕೊರತೆಯ ಜತೆಗೆ ಈ ವಿಭಾಗದ ರೈತರು ಕಾರ್ಮಿಕರ ಕೊರತೆಯನ್ನೂ ಅನುಭವಿಸು ವಂತಾಗಿದೆ. ಬಿ.ಪಿ.ಎಲ್. ರೇಷನ್ ಕಾರ್ಡಿಗೆ ಉಚಿತವಾಗಿ ಅಕ್ಕಿ ಸಿಗುತ್ತಿರುವುದರಿಂದ ಹಾಗೂ ಕೊರೊನಾ ಸೋಂಕಿನ ಭೀತಿಯಿಂದ ಕಾರ್ಮಿಕರು ಗದ್ದೆ ತೋಟಗಳ ಕೆಲಸಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಕೆಲ ರೈತರು ಭತ್ತದ ವ್ಯವಸಾಯಕ್ಕೆ ತಿಲಾಂಜಲಿ ನೀಡಿ ಪರ್ಯಾಯ ಬೆಳೆಯಾಗಿ ಅಡಿಕೆ ಬೆಳೆಯುವ ಚಿಂತನೆ ನಡೆಸಿದ್ದಾರೆ.