ಕುಶಾಲನಗರ, ಜು. 29: ಕಾರ್ಮಿಕರನ್ನು ಕಡೆಗಣಿಸಿ ಕೈಗಾರಿಕೆ ಹಾಗೂ ಕಾರ್ಮಿಕ ಕಾನೂನುಗಳನ್ನು ಮಾಲೀಕರ ಪರವಾಗಿ ತಿದ್ದುಪಡಿ ಮಾಡಲಾಗಿದೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕುಶಾಲನಗರದಲ್ಲಿ ಸರಕಾರದ ಆದೇಶಗಳ ಪ್ರತಿಗಳನ್ನು ಸುಟ್ಟು ಪ್ರತಿಭಟನೆ ನಡೆಸಿತು.
ಕುಶಾಲನಗರ ನಾಡಕಚೆÉೀರಿ ಮುಂಭಾಗ ಸೇರಿದ ಸಮಿತಿ ಪ್ರಮುಖರು ರಾಜ್ಯ ಸರಕಾರ 2020-21ನೇ ಸಾಲಿನ ಕಾರ್ಮಿಕರ ವ್ಯತ್ಯಸ್ಥ ತುಟ್ಟಿ ಭತ್ಯೆ ತಡೆಹಿಡಿದು ಕೈಗೊಂಡಿರುವ ತೀರ್ಮಾನ ಖಂಡನೀಯ. ಈ ಮೂಲಕ ಕಾರ್ಮಿಕರ ಹಕ್ಕುಗಳನ್ನು ರಾಜ್ಯ ಸರಕಾರ ಮೊಟಕುಗೊಳಿಸಿ ದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ರಿಯಾ ಸಮಿತಿ ಪ್ರಮುಖರಾದ ಪಿ.ಆರ್.ಭರತ್, ಎಚ್.ಎಂ.ಸಣ್ಣಯ್ಯ, ಎನ್.ಎಂ.ಮುತ್ತಪ್ಪ ಮತ್ತಿತರರ ನೇತೃತ್ವದಲ್ಲಿ ನಾಡಕಚೇರಿ ಮುಂಭಾಗ ಸೇರಿದ ಕ್ರಿಯಾ ಸಮಿತಿ ಸದಸ್ಯರು ಸರಕಾರಕ್ಕೆ ಧಿಕ್ಕಾರ ಕೂಗಿದರು. ನಂತರ ಕಂದಾಯ ಅಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭ ಸಂಘಟನೆಗಳ ಪ್ರಮುಖರಾದ ಕೆ.ಎನ್.ಹರೀಶ್ಚಂದ್ರ, ಬಿ.ಆರ್. ನಾರಾಯಣ, ತ್ರಿನೇಶ್, ಕಾವೇರಿ, ಪಿ.ಉಮೇಶ್ ಮತ್ತಿತರರು ಇದ್ದರು.