ಸಿದ್ದಾಪುರ, ಜು. 28: ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡು ಭಾಗದಲ್ಲಿ ಕಾಡಾನೆಗಳು ದಾಳಿ ನಡೆಸಿ ನಷ್ಟಪಡಿಸಿರುವ ಸ್ಥಳಕ್ಕೆ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಕೆಲವು ದಿನಗಳಿಂದ ನೆಲ್ಯಹುದಿಕೇರಿ ಹಾಗೂ ಬೆಟ್ಟದಕಾಡು ಭಾಗದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟು ಕಾಫಿ ತೋಟಗಳಲ್ಲಿ ಹಾಗೂ ಅಡಿಕೆ ತೋಟಗಳಲ್ಲಿ ದಾಂಧಲೆ ನಡೆಸುತ್ತಿದ್ದವು. ಕಳೆದೆರಡು ದಿನಗಳಿಂದ ನೆಲ್ಯಹುದಿಕೇರಿ ಬೆಟ್ಟದಕಾಡು ನಿವಾಸಿ ಕೆ.ಎಂ ಚಂದ್ರಶೇಖರ್ ಎಂಬವರ ಅಡಿಕೆ ತೋಟಕ್ಕೆ ಕಾಡಾನೆಗಳ ಹಿಂಡು ನುಗ್ಗಿ ದಾಂಧಲೆ ನಡೆಸಿ ಮುನ್ನೂರಕ್ಕೂ ಅಧಿಕ ಅಡಿಕೆ ಗಿಡಗಳನ್ನು ಧ್ವಂಸಗೊಳಿಸಿ ನಾಶಪಡಿಸಿವೆ. ಚಂದ್ರಶೇಖರ ಅರಣ್ಯ ಇಲಾಖಾ ಅಧಿಕಾರಿಗಳಿಗೆ ದೂರು ನೀಡಿದ ಮೇರೆಗೆ ಮಂಗಳವಾರದಂದು ಕುಶಾಲನಗರ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಎರಡು ದಿನ ಕಾರ್ಯಾಚರಣೆ

ಕಾಫಿ ತೋಟಗಳಲ್ಲಿ ಬೀಡುಬಿಟ್ಟಿ ರುವ ಕಾಡಾನೆಗಳ ಹಿಂಡುಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಬಗ್ಗೆ ಇತ್ತೀಚೆಗೆ ಗ್ರಾಮಸ್ಥರು ನೆಲ್ಯಹುದಿಕೇರಿಯಲ್ಲಿ ಸಭೆ ನಡೆಸಿ ಅರಣ್ಯ ಇಲಾಖೆಗೆ ಮನವಿ ಪತ್ರವನ್ನು ನೀಡಿದ್ದರು. ಕಾಡಾನೆಗಳನ್ನು ಕಾಡಿಗೆ ಅಟ್ಟಲು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿ ಆಗಸ್ಟ್ 1 ಹಾಗೂ 2 ರಂದು ಕಾರ್ಯಾಚರಣೆ ನಡೆಸಿ ಅರಣ್ಯಕ್ಕೆ ಅಟ್ಟುವ ಯೋಜನೆಯನ್ನು ಕೈಗೊಂಡಿ ದ್ದಾರೆ. ಈ ಬಗ್ಗೆ ಮೇಲಾಧಿಕಾರಿಗ ಳೊಂದಿಗೆ ಚರ್ಚಿಸಿ ಕಾರ್ಯಾಚರಣೆ ನಡೆಸಲು ತೀರ್ಮಾನಿಸಿದ್ದಾರೆ.