*ಸಿದ್ದಾಪುರ, ಜು.27 : ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ಅಭ್ಯತ್ ಮಂಗಲ ಹಾಗೂ ನೆಲ್ಯಹುದಿಕೇರಿ ಗ್ರಾಮಸ್ಥರು ಕರೆದಿದ್ದ ಸಭೆಗೆ ಅರಣ್ಯಾಧಿಕಾರಿಗಳು ಗೈರು ಹಾಜರಾಗುವ ಮೂಲಕ ಅಸಮಾಧಾನಕ್ಕೆ ಕಾರಣರಾದರು.

ಅಭ್ಯತ್ ಮಂಗಲ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಪಾಲಚಂಡ ಅಚ್ಚಯ್ಯ ಅವರ ಅಧ್ಯಕ್ಷತೆಯಲ್ಲಿ ಗ್ರಾಮಸ್ಥರ ಹಾಗೂ ಬೆಳೆಗಾರರ ಸಭೆ ನಡೆಯಿತು. ಅರಣ್ಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿರುವುದಾಗಿ ತಿಳಿಸಲಾಗಿತ್ತಾದರೂ ಇಂದು ಬೆಳಗ್ಗೆ ಸಭೆ ಆರಂಭಗೊಂಡರೂ ಅಧಿಕಾರಿಗಳ ಆಗಮನವೇ ಆಗಲಿಲ್ಲ. ಇದರಿಂದ ಅಸಮಾಧಾನ ವ್ಯಕ್ತಪಡಿಸಿದ ಬೆಳೆಗಾರರು ಸಭೆಯಲ್ಲಿ ಅರಣ್ಯ ಇಲಾಖೆಯ ನಿರ್ಲಕ್ಷ್ಯವನ್ನು ಖಂಡಿಸಿದರು.

ಬೆಳೆಗಾರರು ಹಾಗೂ ರೈತರು ಕಾಡಾನೆಗಳ ದಾಳಿಯಿಂದ ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸುತ್ತಿದ್ದಾರೆ. ವನ್ಯಜೀವಿಗಳ ಹಾವಳಿ ಮಿತಿ ಮೀರುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಮ್ಮ ಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ ಗ್ರಾಮಸ್ಥರು ಅರಣ್ಯ ಇಲಾಖೆ ತಕ್ಷಣ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಕೈಗೊಳ್ಳಬೇಕು ಮತ್ತು ಬೆಟ್ಟದಕಾಡು- ನೆಲ್ಯಹುದಿಕೇರಿ ಹಾಗೂ ಬರಡಿ- ನಲ್ವತ್ತೆಕ್ಕರೆ ಭಾಗದಲ್ಲಿ ಸೋಲಾರ್ ಬೇಲಿ ಅಳವಡಿಸಬೇಕೆಂದು ಒತ್ತಾಯಿಸಿದರು.

ಕಾಡಾನೆ ದಾಳಿಯಿಂದಾದ ನಷ್ಟವನ್ನು ಸರ್ಕಾರ ಭರಿಸಬೇಕೆಂದು ಆಗ್ರಹಿಸಿದ ಗ್ರಾಮಸ್ಥರು; ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದರೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಂತರ ಗ್ರಾಮದ ಪ್ರಮುಖರ ನಿಯೋಗ ಪಾಲಚಂಡ ಅಚ್ಚಯ್ಯ ಅವರ ನೇತೃತ್ವದಲ್ಲಿ ಕುಶಾಲನಗರ ಅರಣ್ಯ ಕಚೇರಿಗೆ ತೆರಳಿ ಮನವಿ ಸಲ್ಲಿಸಿತು. ಗ್ರಾಮಸ್ಥರ ಸಭೆಗೆ ಗೈರು ಹಾಜರಾದ ಬಗ್ಗೆ ಅಧಿಕಾರಿ ಅನನ್ಯ ಕುಮಾರ್ ವಿರುದ್ಧ ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಸಮಜಾಯಿಷಿಕೆ ನೀಡಿದ ಅಧಿಕಾರಿಗಳು ಕೊರೊನಾ ಮಾರ್ಗಸೂಚಿಯ ಪ್ರಕಾರ ಸಭೆ ನಡೆಸಲು ಮತ್ತು ಪಾಲ್ಗೊಳ್ಳಲು ಜಿಲ್ಲಾಧಿಕಾರಿಗಳ ಅನುಮತಿಯ ಅಗತ್ಯವಿದೆ. ದಿಢೀರ್ ಆಗಿ ಸಭೆ ಕರೆದ ಕಾರಣ ಅನುಮತಿ ಸಾಧ್ಯವಾಗಲಿಲ್ಲವೆಂದು ತಿಳಿಸಿದರು.

ನಂತರ ಮಡಿಕೇರಿ ವಿಭಾಗದ ಅರಣ್ಯ ಅಧಿಕಾರಿಗಳೊಂದಿಗೆ ಮೊಬೈಲ್‍ನಲ್ಲಿ ಚರ್ಚಿಸಿದ ಅನನ್ಯ ಕುಮಾರ್, ಮುಂದಿನ ವರ್ಷ ಸೋಲಾರ್ ಬೇಲಿ ನಿರ್ಮಿಸುವ ಭರವಸೆ ನೀಡಿದರು. ಆನೆಗಳನ್ನು ಕಾಡಿ ಗಟ್ಟುವ ಕಾರ್ಯಾಚರಣೆ ಕೈಗೊಳ್ಳು ವುದಾಗಿ ತಿಳಿಸಿದರು. ಕ್ರಮಬದ್ಧವಾಗಿ ಅರ್ಜಿ ಸಲ್ಲಿಸಿದರೆ ಕಾಡಾನೆ ದಾಳಿಯಿಂದಾದ ನಷ್ಟಕ್ಕೆ ಸರ್ಕಾರದಿಂದ ಪರಿಹಾ ದೊರೆಯಲಿದೆ ಎಂದರು.

ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಹೊಸಮನೆ ವಸಂತ, ಪ್ರಮುಖರಾದ ತೆರಂಬಳ್ಳಿ ದುರ್ಗೇಶ್, ಕೆ.ಪಿ.ರಾಚಪ್ಪ, ಎನ್.ಎಂ.ಶಿವಕುಮಾರ್, ಅಂಚೆಮನೆ ಗಣಪತಿ, ಕುಟ್ಟಪ್ಪ, ಆದರ್ಶ, ಸುಧಾಕರ, ತೋಟಂಬೈಲು ತಿಮ್ಮಯ್ಯ, ಕರ್ಣಯ್ಯನ ವಿಶ್ವನಾಥ್, ಟಿ.ಎಸ್.ಆಲಿ ನಿಯೋಗದಲ್ಲಿದ್ದರು. ಅರಣ್ಯ ಅಧಿಕಾರಿಗಳಾದ ಸುಬ್ರಾಯ ಹಾಗೂ ವಿಲಾಸ್ ಗೌಡ ಹಾಜರಿದ್ದರು.

-ಸುಧಿ