ಸೋಮವಾರಪೇಟೆ,ಜು.27: ರಸ್ತೆ ಬದಿಯಿದ್ದ ವಿದ್ಯುತ್ ಕಂಬಕ್ಕೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿಯೋರ್ವ ದುರ್ಮರಣ ಕ್ಕೀಡಾಗಿರುವ ಘಟನೆ ಮಾದಾಪುರ-ಸೋಮವಾರಪೇಟೆ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಮಡಿಕೇರಿಯ ದಾಸವಾಳ ರಸ್ತೆ ನಿವಾಸಿ, ಡಿ.ಸಿ. ಸುರೇಶ್ ರೈ, ರಾಣಿ ದಂಪತಿಯ ಪುತ್ರ, ಮೂರ್ನಾಡಿನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣನಾಗಿದ್ದ ಗೌತಮ್ (18) ಎಂಬಾತನೇ ಮೃತಪಟ್ಟ ದುರ್ದೈವಿ. ಇಂದು ಬೆಳಿಗ್ಗೆ ತನ್ನ ಸ್ನೇಹಿತರೊಂದಿಗೆ ಮಾದಾಪುರ ಸಮೀಪದ ಕೋಟೆಬೆಟ್ಟಕ್ಕೆಂದು ತೆರಳಿ ವಾಪಸ್ ಆಗುತ್ತಿದ್ದ ಸಂದರ್ಭ, ಮಾದಾಪುರದ ಪಶುವೈದ್ಯಕೀಯ ಇಲಾಖಾ ಕಚೇರಿ ಎದುರಿನ ರಾಜ್ಯ ಹೆದ್ದಾರಿ ತಿರುವಿನಲ್ಲಿ ದುರ್ಘಟನೆ ಸಂಭವಿಸಿದೆ.
ಕಾಲೇಜು ವಿದ್ಯಾರ್ಥಿಗಳಾದ ಕಾಂತೂರು ಮೂರ್ನಾಡು ಗ್ರಾಮದ ಹರ್ಷ, ಶರತ್, ಹೃತೀಕ್, ಮಡಿಕೇರಿಯ ಗೌತಮ್ ಅವರುಗಳು ಎರಡು ದ್ವಿಚಕ್ರ ವಾಹನದಲ್ಲಿ ಕೋಟೆಬೆಟ್ಟಕ್ಕೆ ತೆರಳಿದ್ದು, ಬೆಟ್ಟವೇರಲು ನಿಷೇಧವಿರುವದರಿಂದ ಗೌತಮ್ ಹಾಗೂ ಹರ್ಷ ಬೈಕ್ನಲ್ಲಿ ವಾಪಸ್ ಮಡಿಕೇರಿಗೆ ತೆರಳುವ ಸಂದರ್ಭ ಅವಘಡ ಸಂಭವಿಸಿದೆ.
ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗಿದ್ದು, ಗೌತಮ್ ಚಾಲಿಸುತ್ತಿದ್ದ ಬೈಕ್, ಮಾದಾಪುರ ಪಶುವೈದ್ಯ ಆಸ್ಪತ್ರೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದಿದೆ.
ಪರಿಣಾಮ ಹಿಂಬದಿ ಸವಾರ ಹರ್ಷನ ಕಿವಿ ಹಾಗೂ ಕೈಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಚಾಲಕ ಗೌತಮ್ನ ತಲೆ ಹಾಗೂ ಎದೆ ಭಾಗಕ್ಕೆ ಗಂಭೀರ ಪ್ರಮಾಣದ ಗಾಯಗಳಾಗಿದ್ದು, ಜೀವನ್ಮರಣ ಸ್ಥಿತಿಗೆ ತಲುಪಿದ್ದಾನೆ. ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿ ಗೌತಮ್ನನ್ನು ಮಡಿಕೇರಿಯ ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭ ದಾರಿ ಮಧ್ಯೆ ಅಸುನೀಗಿದ್ದಾನೆ.
ಘಟನಾ ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್ ತೆರಳಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ. ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.