ಮಡಿಕೇರಿ, ಜು. 27: ಕೊಡಗು ಜಿಲ್ಲೆಯಲ್ಲಿ ಜಾಗತಿಕ ಕೊರೊನಾ ಸೋಂಕು ತಡೆಗಟ್ಟುವದರೊಂದಿಗೆ, ಮಳೆಗಾಲದ ಪ್ರಾಕೃತಿಕ ಸನ್ನಿವೇಶ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಿದ್ದು, ಆರ್ಥಿಕವಾಗಿ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ರೂ. 57.40 ಕೋಟಿ ಹಣದೊಂದಿಗೆ ಪರಿಸ್ಥಿತಿ ನಿಭಾಯಿಸುವಲ್ಲಿ ಯಾವದೇ ಸಮಸ್ಯೆ ಇಲ್ಲವೆಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಸಮರ್ಥನೆ ನೀಡಿದ್ದಾರೆ. ರಾಜ್ಯ ಸರಕಾರದ ಸಾಧನಾ ಕಾರ್ಯಕ್ರಮ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಮೇಲಿನಂತೆ ಪ್ರತಿಕ್ರಿಯಿಸಿದರು.

ಮಹತ್ತರ ಸಾಧನೆ : ಈಗಾಗಲೇ ಸಂತ್ರಸ್ತರಿಗಾಗಿ ಕರ್ಣಂಗೇರಿಯಲ್ಲಿ 35, ಜಂಬೂರಿನಲ್ಲಿ 383, ಮದೆ ವ್ಯಾಪ್ತಿಯಲ್ಲಿ 80 ಮನೆಗಳನ್ನು ಸರಕಾರದಿಂದ ತಲಾ ರೂ. 9.85 ಲಕ್ಷದಲ್ಲಿ ನಿರ್ಮಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಿರುವದು ರಾಜ್ಯಸರಕಾರದ ಮಹತ್ತರ ಸಾಧನೆಯೆಂದು ಅವರು ವ್ಯಾಖ್ಯಾನಿಸಿದರು. ಮುಂದುವರಿದು ಬಿಳಿಗೇರಿಯಲ್ಲಿ 82, ಗಾಳಿಬೀಡು ಬಳಿ 140, ಕೆ. ನಿಡುಗಣೆಯಲ್ಲಿ 80 ಮನೆಗಳ ನಿರ್ಮಾಣ ಪ್ರಗತಿಯಲ್ಲಿದ್ದು, 2019ರ ನೆರೆ ಸಂತ್ರಸ್ತರಿಗೆ ಪುನರ್ವಸತಿಗಾಗಿ 2333 ಕುಟುಂಬಗಳಿಗೆ ತಲಾ ರೂ. 5 ಲಕ್ಷದಂತೆ ವಸತಿಗಾಗಿ ಹಂತ ಹಂತವಾಗಿ ಹಣ ಕಲ್ಪಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

ಗ್ರಾಮೀಣ ರಸ್ತೆಗೆ ರೂ. 100 ಕೋಟಿ : ಪ್ರಕೃತಿ ವಿಕೋಪ ಪರಿಹಾರವಾಗಿ ಗ್ರಾಮೀಣ ರಸ್ತೆ, ಸೇತುವೆ, ಮೋರಿಗಳ ದುರಸ್ಥಿಗಾಗಿ ರೂ. 100 ಕೋಟಿ ಕಲ್ಪಿಸಲಾಗಿದೆ, ತುರ್ತು ಪ್ರಕೃತಿ ವಿಕೋಪ ತಡೆಗಾಗಿ ಜಿಲ್ಲೆಯ 104 ಗ್ರಾ.ಪಂ.ಗಳಿಗೆ ತಲಾ ರೂ. 50 ಸಾವಿರ, ಪಟ್ಟಣ ಪಂಚಾಯಿತಿಗಳಿಗೆ ರೂ. 1 ಲಕ್ಷ, ನಗರಸಭೆಗೆ ರೂ. 3 ಲಕ್ಷದಂತೆ ಒಟ್ಟು 57 ಲಕ್ಷವನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ ಎಂದರು.

ಕೊರೊನಾ ನಿಯಂತ್ರಣ : ಕೊರೊನಾ ತಡೆಗಟ್ಟಲು ಗಡಿಬಂದ್ ಸೇರಿದಂತೆ ಎಲ್ಲಾ ಮುಂಜಾಗ್ರತಾ ಕ್ರಮದೊಂದಿಗೆ ಹೊರ ಜಿಲ್ಲೆಯ 1977 ಕಾರ್ಮಿಕರು, 4558 ಹೊರ ರಾಜ್ಯದ ಕಾರ್ಮಿಕರು ಸಹಿತ ಒಟ್ಟು 6535 ಮಂದಿಗೆ ಅಗತ್ಯ ನೆರವು ಕಲ್ಪಿಸಿದೆ. ಜಿಲ್ಲಾ ವೈದ್ಯಕೀಯ ಕೋವಿಡ್ ನಿಯಂತ್ರಣ ಆಸ್ಪತ್ರೆಯೊಂದಿಗೆ, ಖಾಸಗಿ ಅಶ್ವಿನಿ ಆಸ್ಪತ್ರೆಯನ್ನು ಇತರ ಚಿಕಿತ್ಸೆಗಾಗಿ ಪರಿವರ್ತಿಸಿಕೊಂಡಿದ್ದು, ತಾಲೂಕು ಕೇಂದ್ರಗಳಲ್ಲಿ ಕೂಡ ಪ್ರಯೋಗಾಲಯ ಹೊಂದಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ರೈತರಿಗೆ ಅನುಕೂಲ : ರಾಜ್ಯ ಸರಕಾರ ರೈತಪರ ಕಾಳಜಿಯೊಂದಿಗೆ ಎಪಿಎಂಸಿ ಕಾಯ್ದೆ ಮತ್ತು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಕಷ್ಟಕಾಲದಲ್ಲಿ ವಿಪಕ್ಷಗಳು ಜನರನ್ನು ದಾರಿ ತಪ್ಪಿಸುವದರೊಂದಿಗೆ ‘ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿರುವಂತಿದೆ’ ಎಂದು ಮಾಧ್ಯಮದವರ ಪ್ರಶ್ನೆಗೆ ಸಚಿವರು ಹರಿಹಾಯ್ದರು.

ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿರುವ ಆರ್ಥಿಕ ನೆರವು, ಕೃಷಿಗೆ ಬೆಂಬಲ, ತೋಟಗಾರಿಕೆ ಬೆಳೆಗಳಿಗೆ ವಿಮೆ ಪರಿಹಾರ, ಸ್ವಸಹಾಯ ಮತ್ತು ಸಹಕಾರ ಕ್ಷೇತ್ರಗಳಿಂದ ಶೂನ್ಯಬಡ್ಡಿಯಲ್ಲಿ ಸಾಲ ಯೋಜನೆ ಸರಕಾರದ ಜನಪರ ಕಾಳಜಿಗೆ ಸಾಕ್ಷಿಯೆಂದು ಸೋಮಣ್ಣ ವಿವರಿಸಿದರು.

ಗೋಷ್ಠಿಯಲ್ಲಿ ಶಾಸಕರುಗಳಾದ ಎಂ.ಪಿ. ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ಸಂಸದ ಪ್ರತಾಪ್ ಸಿಂಹ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಲಕ್ಷ್ಮೀಪ್ರಿಯ, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಮೊದಲಾದವರು ಹಾಜರಿದ್ದರು.