ಮಡಿಕೇರಿ, ಜು. 27: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವು ಒಂದು ವರ್ಷ ಪೂರೈಸಿದ ಸಾಧನಾ ಸಮಾರಂಭದಲ್ಲಿ, ‘ಆನ್‍ಲೈನ್’ ಮುಖಾಂತರ ಕರ್ನಾಟಕದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಪ್ರಸ್ತುತ ಪರಿಸ್ಥಿತಿಯಲ್ಲಿ ಕೊರೊನಾದೊಂದಿಗೆ ಬದುಕಲು ಕಲಿತುಕೊಳ್ಳಬೇಕೆಂದು ಕರೆ ನೀಡಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಆನ್‍ಲೈನ್ ಮೂಲಕ ಏಕಕಾಲಕ್ಕೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸರಕಾರದ ಸಾಧನೆ ಬಗ್ಗೆ ಆಯೋಜಿಸಿದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ರಾಜ್ಯದ ವಿವಿಧ ಜಿಲ್ಲೆಗಳ ನೆರೆ ಪರಿಹಾರ, ಕೃಷಿ ನಷ್ಟ ಪರಿಹಾರ, ಮನೆಕಳೆದುಕೊಂಡವರು, ಕೊರೊನಾ ಸೋಂಕಿನಿಂದ ಪಾರಾದವರು, ಕೃಷಿಕರು, ಕಟ್ಟಡ ಕಾರ್ಮಿಕರು, ನೇಕಾರರು, ಚಮ್ಮಾರರು, ಶೋಷಿತ ವರ್ಗದ ಆಯ್ದ ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸಿದ ಮುಖ್ಯಮಂತ್ರಿಗಳು ಸರಕಾರದಿಂದ ಅಗತ್ಯ ನೆರವಿನ ಭರವಸೆ ನೀಡಿದರು. ಅಲ್ಲದೆ, ಈಗಾಗಲೇ ಸರಕಾರ ಕಷ್ಟದಲ್ಲಿರುವವರಿಗೆ ಕಲ್ಪಿಸಿರುವ ರೂ. 5 ಸಾವಿರ ಪರಿಹಾರವನ್ನು ಇನ್ನಷ್ಟು ಅವದಿಗೆ ಮುಂದುವರೆಸ ಬೇಕೆಂಬ ಫಲಾನುಭವಿಯೊಬ್ಬರ ಬೇಡಿಕೆಗೆ, ರಾಜ್ಯದ ಆರ್ಥಿಕ ಸ್ಥಿತಿ ನೋಡಿಕೊಂಡು ನೆರವು ಕಲ್ಪಿಸುವದಾಗಿ ನುಡಿದರು. ಇನ್ನು ಜನರು ಈ ಕೊರೊನಾದೊಂದಿಗೆ ಹೊಂದಿಕೊಂಡು ಬದುಕುವದು ಅನಿವಾರ್ಯವೆಂದು ತಿಳಿಹೇಳಿದರು.

ಅಧಿಕಾರ ಅವಧಿ ಮೆಲುಕು : ಕಳೆದ ವರ್ಷದ ಮುಂಗಾರುವಿನಲ್ಲಿ ಪ್ರಾಕೃತಿಕ ವಿಕೋಪ ನಡುವೆ ಮುಖ್ಯಮಂತ್ರಿಗಳಾಗಿ ಮೂರ್ನಾಲ್ಕು ತಿಂಗಳು ಸಂಪುಟ ರಚಿಸಲಾಗದೆ ಒಬ್ಬರೇ ರಾಜ್ಯದ ಪ್ರವಾಹ ಪರಿಸ್ಥಿತಿ ಎದುರಿಸಿದ್ದು, ಅನಂತರದಲ್ಲಿ ಸಂಪುಟ ರಚನೆಯೊಂದಿಗೆ ಎಲ್ಲರ ಸಹಕಾರದಿಂದ ಜನರ ಕಷ್ಟಗಳಿಗೆ ಸ್ಪಂದಿಸಿದಲ್ಲದೆ, ಉಪ ಚುನಾವಣೆಯಲ್ಲಿ 12 ಸ್ಥಾನಗಳ ಗೆಲುವಿನೊಂದಿಗೆ ಸ್ಥಿರ ಸರಕಾರ ನಡೆಸಲು ಸಾಧ್ಯವಾಗಿದೆ ಎಂದು ಯಡಿಯೂರಪ್ಪ ಮೆಲುಕು ಹಾಕಿದರು.

ಕೇಂದ್ರದ ನೆರವು ಶ್ಲಾಘನೀಯ : ಕರ್ನಾಟಕದ ಕಷ್ಟಕ್ಕೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಸಾವಿರಾರು ಕೋಟಿ ರೂ. ಅನುದಾನ ಒದಗಿಸಿದ್ದು, ಶ್ಲಾಘನೀಯ ಎಂದ ಯಡಿಯೂರಪ್ಪ, ಪ್ರಾದೇಶಿಕ

(ಮೊದಲ ಪುಟದಿಂದ) ಅಸಮಾತೋಲನ ನಿವಾರಣೆಯೊಂದಿಗೆ ಕಲ್ಯಾಣ ಕರ್ನಾಟಕದ ದೂರದೃಷ್ಟಿ ಯಿಂದ ಎಲ್ಲಾ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ಧವೆಂದು ಘೋಷಿಸಿದರು.

ಕೈಪಿಡಿ ಬಿಡುಗಡೆ : ಏಕಕಾಲಕ್ಕೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ‘ಸವಾಲುಗಳ ವರ್ಷ ಪರಿಹಾರದ ಸ್ಪರ್ಶ’ ಎಂಬ ಸರಕಾರದ ಸಾಧನೆಯ ಕೈಪಿಡಿ ಬಿಡುಗಡೆಗೊಳಿಸಲಾಯಿತು. ಮಡಿಕೇರಿಯ ಜಿ.ಪಂ. ಸಭಾಂಗಣದಲ್ಲಿ ಕೊಡಗು ಉಸ್ತುವಾರಿ ಹಾಗೂ ರಾಜ್ಯ ವಸತಿ ಸಚಿವ ವಿ.ಸೋಮಣ್ಣ ಇದನ್ನು ಬಿಡುಗಡೆಗೊಳಿಸಿದರು.

ಉಪಮುಖ್ಯಮಂತ್ರಿಗಳಾದ ಸಿ.ಅಶ್ವತ್ಥ್ ನಾರಾಯಣ್ ರಾಮನಗರ ದಿಂದ ಹಾಗೂ ಗೋವಿಂದ ಕಾರಜೋಳ ಕೊಪ್ಪಳದಿಂದ ಸರಕಾರದ ಸಾಧನೆ ಬಗ್ಗೆ ಆನ್‍ಲೈನ್ ಮೂಲಕ ಮಾತನಾಡಿದರು. ಆ ಬಳಿಕ ಮುಖ್ಯಮಂತ್ರಿಗಳು ಪ್ರಧಾನ ಭಾಷಣದೊಂದಿಗೆ, ಮುಂದಿನ ವರ್ಷಗಳಲ್ಲಿ ಸಮಗ್ರ ಕರ್ನಾಟಕವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವದರೊಂದಿಗೆ, ಬೆಂಗಳೂರನ್ನು ಇಡೀ ದೇಶದ ಮಾದರಿ ನಗರವನ್ನಾಗಿ ರೂಪಿಸುವ ಇಂಗಿತ ವ್ಯಕ್ತಪಡಿಸಿದರು. ಜನರು ಕೊರೊನಾ ದವಡೆಯಿಂದ ಪಾರಾಗುವ ದಿಸೆಯಲ್ಲಿ ಸದಾ ಜಾಗೃತಿಯೊಂದಿಗೆ ಮಾಸ್ಕ್ ಧರಿಸುವಂತೆ ಮತ್ತು ಆರೋಗ್ಯ ಕಾಪಾಡಿಕೊಳ್ಳುವಂತೆ ಮುಖ್ಯಮಂತ್ರಿಗಳು ಕಳಕಳಿಯ ನಿವೇಧನೆ ಮಾಡಿಕೊಂಡರು.

ಸಚಿವರಿಗೆ ಸಾಥ್: ಜಿ.ಪಂ. ಸಭಾಂಗಣದಲ್ಲಿ ವಿಶಾಲ ಪರದೆಯಲ್ಲಿ ರಾಜಧಾನಿಯಿಂದ ನೇರವಾಗಿ ಸರಕಾರದ ಸಾಧನೆಯ ಕಾರ್ಯಕ್ರಮ ವೀಕ್ಷಿಸಿದ ಸಚಿವ ವಿ. ಸೋಮಣ್ಣ ಅವರಿಗೆ ಶಾಸಕತ್ರಯರಾದ ಎಂ.ಪಿ. ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ಸಂಸದ ಪ್ರತಾಪ್ ಸಿಂಹ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮೊದಲಾದವರು ಸಾಥ್ ನೀಡಿದರು.

ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಲಕ್ಷ್ಮೀಪ್ರಿಯ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ವಿ. ಸ್ನೇಹಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಉಪವಿಭಾಗಾಧಿಕಾರಿ ಟಿ. ಜವರೇಗೌಡ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.