ಮಡಿಕೇರಿ, ಜು.27 : ಕರಿಕೆ ಗ್ರಾಮದಲ್ಲಿ ಕೊರೊನಾ ಹಿನ್ನೆಲೆ ಮಣ್ಣಿನಿಂದ ಮುಚ್ಚಲಾಗಿರುವ ಕೇರಳದ ಗಡಿ ರಸ್ತೆಯನ್ನು ಗ್ರಾಮಸ್ಥರ ಹಿತದೃಷ್ಟಿಯಿಂದ ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವಂತೆ ಕರಿಕೆ ಗ್ರಾಮಸ್ಥರು ವಸತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕೊಡಗಿನ ಗಡಿ ಗ್ರಾಮ ಕರಿಕೆ ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪನತ್ತಡಿ ಗ್ರಾಮಕ್ಕೆ ಹೊಂದಿಕೊಂಡಿದೆ. ಸುಮಾರು ಐದು ಸಾವಿರ ಮಂದಿ ಇರುವ ಗ್ರಾಮದಲ್ಲಿ ಶೇ.70 ರಷ್ಟು ಕಡು ಬಡವರು, ಪರಿಶಿಷ್ಟರು, ಹಿಂದುಳಿ ದವರು ವಾಸವಾಗಿದ್ದಾರೆ. ಗ್ರಾಮಸ್ಥರು ದೈನಂದಿನ ಚಟುವಟಿಕೆಗಳಿಗೆ ಹಾಗೂ ತುರ್ತು ಚಿಕಿತ್ಸೆಗೆ ನೆರೆಯ ಕೇರಳದ ಪಾಣತ್ತೂರು ಗ್ರಾಮವನ್ನೇ ಅವಲಂಭಿಸಿದ್ದಾರೆ.
ಗ್ರಾಮದಲ್ಲಿ ಜನರಿಗೆ ಮೂಲಭೂತ ಸೌಲಭ್ಯಗಳ ಕೊರತೆ ಇದ್ದು, ಎಲ್ಲಾ ದಿನಸಿ ಪದಾರ್ಥಗಳು, ಆರೋಗ್ಯದ ಅಗತ್ಯಗಳಿಗೂ ಮತ್ತು ರೈತರು ಬೆಳೆದ ಅಡಿಕೆ, ತೆಂಗು, ರಬ್ಬರ್ಗಳ ಮಾರುಕಟ್ಟೆಗೂ ಕೇರಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಅವಲಂಭಿಸಬೇಕಾಗಿದೆ. ರಸ್ತೆ ಸಂಚಾರ ತಡೆಯಿಂದಾಗಿ ರೈತರು ಮತ್ತು ಕೃಷಿ ಕೂಲಿಕಾರರು ಭಾರೀ ಕಷ್ಟ, ನಷ್ಟ್ಟಗಳನ್ನು ಅನುಭವಿಸುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೂ ಅಡಚಣೆಯಾಗಿದೆ ಎಂದು ಗ್ರಾಮಸ್ಥರು ಸಚಿವರ ಗಮನ ಸೆಳೆದರು.