ಮಡಿಕೇರಿ, ಜು.26: ಕೊಡಗು ಜಿಲ್ಲಾ ಅರಣ್ಯ ಇಲಾಖೆಯ ಸೋಮವಾರಪೇಟೆ ತಾಲೂಕು ಸಾಮಾಜಿಕ ಅರಣ್ಯ ವಲಯದ ವತಿಯಿಂದ ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್ ಆಶ್ರಯದಲ್ಲಿ ಶಾಲಾವರಣ ಹಾಗೂ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಸಸಿಗಳನ್ನು ನೆಟ್ಟು ವನಮಹೋತ್ಸವ ಆಚರಿಸಲಾಯಿತು.
ತಾಲ್ಲೂಕು ಜೀವವೈವಿಧ್ಯ ನಿರ್ವಹಣಾ ಸಮಿತಿ, ಗರ್ವಾಲೆ ಗ್ರಾಮ ಪಂಚಾಯ್ತಿ, ಜಿಲ್ಲಾ ರಾಷ್ಟ್ರೀಯ ಹಸಿರು ಪಡೆ, ಶಿಕ್ಷಣ ಇಲಾಖೆ, ಶಾಲಾ ಎಸ್.ಡಿ.ಎಂ.ಸಿ. ಹಾಗೂ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಸಂಯುಕ್ತಾಶ್ರಯದಲ್ಲಿ ‘ಜೀವಿ ವೈವಿಧ್ಯ ಸಂರಕ್ಷಣೆಗಾಗಿ ಅರಣ್ಯ ಬೆಳೆಸಿ’ ಎಂಬ ಉದ್ಘೋಷಣೆಯಡಿ 120 ವಿವಿಧ ತಳಿಯ ಗಿಡಗಳನ್ನು ನೆಡಲಾಯಿತು.
ಪ್ರೌಢಶಾಲಾ ಪ್ರಭಾರಿ ಮುಖ್ಯ ಶಿಕ್ಷಕರೂ ಆದ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಸಂಯೋಜಕ ಟಿ.ಜಿ.ಪ್ರೇಮಕುಮಾರ್, ಪ್ರತಿಯೊಬ್ಬರೂ ನೆಲ- ಜಲ, ಅರಣ್ಯ, ಜೀವಿ ವೈವಿಧ್ಯ ಸಂರಕ್ಷಣೆಯೊಂದಿಗೆ ಪರಿಸರ ಸಂರಕ್ಷಣೆಗೆ ಸಂಕಲ್ಪತೊಡುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕಿದೆ ಎಂದರು.
ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದ ಮಾದಾಪುರ ಪೆÇಲೀಸ್ ಉಪಠಾಣೆಯ ಎ.ಎಸ್.ಐ., ಬಿ.ಟಿ.ಪೆÇನ್ನಪ್ಪ ಪ್ರತಿಯೊಬ್ಬರೂ ಗಿಡ ನೆಟ್ಟು ಬೆಳೆಸುವ ಮೂಲಕ ಸ್ವಚ್ಛ, ಸುಂದರ ಹಸಿರು ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು. ಗರ್ವಾಲೆ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಚಾಮೇರ ಪಳಂಗಪ್ಪ, ಪರಿಸರ ಘೋಷಣೆಗಳ ಭಿತ್ತಿಪತ್ರ ಬಿಡುಗಡೆಗೊಳಿಸಿದರು. ವನಮಹೋತ್ಸವ ಕಾರ್ಯಕ್ರಮದಲ್ಲಿ ಗ್ರಾಮದ ನಾಣಿಯಪ್ಪ, ಪಳಂಗಪ್ಪ, ಪ್ರೀತಿ, ಮನು, ಜಯಂತಿ ಇತರರು ಇದ್ದರು.