ಸೋಮವಾರಪೇಟೆ,ಜು.25: ಪಟ್ಟಣದ ಕಕ್ಕೆಹೊಳೆ ಸಮೀಪ ವಾಸವಿರುವ, ಕೊರೊನಾ ಸೋಂಕಿತ ಯುವತಿ ಕೆಲಸ ಮಾಡಿದ್ದ ಪಟ್ಟಣದ ಬ್ಯೂಟಿ ಪಾರ್ಲರ್‍ನ್ನು ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಸ್ಯಾನಿಟೈಸ್ ಮಾಡಿದರು.

ಕಕ್ಕೆಹೊಳೆ ಸಮೀಪದ ನಿವಾಸಿ, ನ್ಯಾಯಾಲಯದಲ್ಲಿ ಕೆಲಸಕ್ಕಿದ್ದ ಯುವತಿಯೋರ್ವಳಿಗೆ ಸೋಂಕು ಪತ್ತೆಯಾಗಿ ಕೋವಿಡ್ ಆಸ್ಪತ್ರೆಗೆ ಸೇರಿ ಗುಣಮುಖರಾಗಿದ್ದ ಹಿನ್ನೆಲೆ, ಆ ಯುವತಿಯೊಂದಿಗೆ ವಾಸವಿದ್ದವರ ಗಂಟಲು ದ್ರವವನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿತ್ತು.

ನ್ಯಾಯಾಲಯದ ಸಿಬ್ಬಂದಿಯೊಂದಿಗೆ ವಾಸವಿದ್ದ, ಬ್ಯೂಟಿ ಪಾರ್ಲರ್‍ನಲ್ಲಿ ಕೆಲಸಕ್ಕಿದ್ದ ಯುವತಿ ಗಂಟಲು ದ್ರವ ಕೊಟ್ಟ ನಂತರವೂ ಗ್ರಂಥಾಲಯದ ಸಮೀಪದÀ ಪಾರ್ಲರ್‍ನಲ್ಲಿ ಕೆಲಸ ಮಾಡಿದ್ದಳು ಎನ್ನಲಾಗಿದೆ.

ಮೊನ್ನೆಯಷ್ಟೇ ಈ ಯುವತಿಗೆ ಸೋಂಕು ದೃಢಪಟ್ಟಿದ್ದು, ಆ ನಂತರವೂ ಮಾಲೀಕರು ಪಾರ್ಲರ್ ಮುಚ್ಚದೆ ಎಂದಿನಂತೆ ಕಾರ್ಯನಿರ್ವಸಿದ್ದಾರೆ. ಈ ಹಿನ್ನೆಲೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ತೆರಳಿ ಪಾರ್ಲರ್ ಸುತ್ತಮುತ್ತ ಸ್ಯಾನಿಟೈಸ್ ಮಾಡಿಸಿ, ಪಾರ್ಲರ್‍ನ್ನು ಬಂದ್ ಮಾಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಪಾರ್ಲರ್‍ಗೆ ಬರುವ ಪ್ರತಿ ಗ್ರಾಹಕರ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ನಮೂದಿಸಿಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.