ಮಡಿಕೇರಿ, ಜು. 23: ಕೊಡಗಿನ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಜಲಾಶಯದಲ್ಲಿ ಮಳೆಗಾಲದ ಸಂದರ್ಭ ನೀರಿನ ಸಂಗ್ರಹ ಹಾಗೂ ಬಿಡುಗಡೆಯನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಸಂಬಂಧ ರಾಜ್ಯ ಉಚ್ಚ ನ್ಯಾಯಾಲಯ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ.ಹಾರಂಗಿ ಜಲಾನಯನ ಪ್ರದೇಶದ ಜನರ ಪರವಾಗಿ ಹಟ್ಟಿಹೊಳೆಯ ನಂದಾಬೆಳ್ಯಪ್ಪ, ಮಾದಾಪುರದ ಪೀತು ಕಾರ್ಯಪ್ಪ, ಮಡಿಕೇರಿಯ ಕೆ.ಕೆ. ವಿಶ್ವನಾಥ್, ಹಟ್ಟಿಹೊಳೆಯ ಚಿತ್ರಾಸುಬ್ಬಯ್ಯ, ಹೆಬ್ಬೆಟ್ಟಗೇರಿಯ ಪ್ರದೀಪ್ ಕೋರಹ್, ಮಕ್ಕಂದೂರಿನ ರಮೇಶ್, ತಂತಿಪಾಲದ ಕೆ.ಆರ್. ಸತೀಶ್ ಇವರುಗಳು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕರ ಪರವಾಗಿ ರಿಟ್ ಅರ್ಜಿ ಸಲ್ಲಿಸಿದ್ದು, ಮಳೆಗಾಲದ ಸಂದರ್ಭ ಹಾರಂಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಹಾಗೂ ಬಿಡುಗಡೆ ಕಾರ್ಯ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ಇದರಿಂದಾಗಿ ಮಳೆ ಅಧಿಕಗೊಂಡ ಸಂದರ್ಭ ಸಾಕಷ್ಟು ಅನಾಹುತಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದಲ್ಲಿ ನೀರನ್ನು ಸಂಗ್ರಹಿಸುವ ಹಾಗೂ ಬಿಡುಗಡೆ ಮಾಡುವ ಕಾರ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಸಂಬಂಧಿಸಿ ದವರಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಅವರ ನೇತೃತ್ವದ ವಿಭಾಗೀಯ ಪೀಠ ಕೇಂದ್ರ ಜಲಾಶಕ್ತಿ ಸಚಿವಾಲಯ, ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆ, ಬೃಹತ್ ಮತ್ತು ಸಣ್ಣ ನೀರಾವರಿ ಇಲಾಖೆ, ಕಾವೇರಿ ನೀರಾವರಿ ನಿಗಮ, ಕೊಡಗು ಜಿಲ್ಲಾಧಿಕಾರಿ ಸೇರಿದಂತೆ 13 ಇಲಾಖೆಗಳಿಗೆ ನೋಟಿಸ್ ಜಾರಿ ಮಾಡಿದ್ದು, ಅರ್ಜಿದಾರರು ಮಂಡಿಸಿರುವ ಕೋರಿಕೆಯಂತೆ ಪ್ರತಿ ಬಾರಿ ಮಳೆಗಾಲದ ವೇಳೆ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಹಾರಂಗಿ ಜಲಾಶಯದಲ್ಲಿ ಶೇ. 50ರಷ್ಟು ಮಾತ್ರ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಮೂಲಕ ಪ್ರವಾಹದಂತಹ ಅನಾಹುತಗಳು ಸಂಭವಿಸುವ ಸಂದರ್ಭ ಜನವಸತಿ ಪ್ರದೇಶಗಳಿಗೆ ನೀರು ನುಗ್ಗುವುದನ್ನು ತಪ್ಪಿಸಲು ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಅಭಿಪ್ರಾಯ ತಿಳಿಸುವಂತೆ ಸೂಚಿಸಿದ್ದು, ಈ ಸಂಬಂಧದ ವಿಚಾರಣೆಗೆ ಆಗಸ್ಟ್ 10ರಂದು ದಿನಾಂಕ ನಿಗದಿ ಮಾಡಿದೆ.

ಅರ್ಜಿದಾರರ ಪರ ಭಾಗಮಂಡಲ ಮೂಲದ ಹೈಕೋರ್ಟ್ ವಕೀಲ ಎಂ.ಸಿ. ರವಿಕುಮಾರ್ ವಕಾಲತ್ತು ವಹಿಸಿದ್ದಾರೆ.