ವೀರಾಜಪೇಟೆ, ಜು. 23: ಪೊನ್ನಂಪೇಟೆಯ ಸಾಯಿ ಶಂಕರ್ ವಿದ್ಯಾ ಸಂಸ್ಥೆಯ ಪರವಾಗಿ ಸಾಲ ಮರುಪಾವತಿಗಾಗಿ ಕೆನರಾ ಬ್ಯಾಂಕ್‍ಗೆ ನೀಡಿದ್ದ ರೂ. 80ಲಕ್ಷ ಮೌಲ್ಯದ ಚೆಕ್ ಅಮಾನ್ಯಗೊಂಡಿದ್ದರಿಂದ ಹಣವನ್ನು 30 ದಿನಗಳೊಳಗೆ ಪಾವತಿಸದಿದ್ದರೆ ಚೆಕ್ ನೀಡಿದ ಕೆ. ಝರುಗಣಪತಿ ಹಾಗೂ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಪಿ.ಎ. ನಾರಾಯಣ ಇಬ್ಬರು ಆರು ತಿಂಗಳ ಸಜೆ ಅನುಭವಿಸುವಂತೆ ಪೊನ್ನಂಪೇಟೆಯ ಅಡಿಷನಲ್ ಮುನ್ಸೀಫ್ ನ್ಯಾಯಾಲಯದ ನ್ಯಾಯಾಧೀಶ ಗಿರಿಗೌಡ ಅವರು ತೀರ್ಪು ನೀಡಿದ್ದಾರೆ.
ಪೊನ್ನಂಪೇಟೆಯ ಝರುಗಣಪತಿ ಅವರು ವಿದ್ಯಾ ಸಂಸ್ಥೆಯ ಹೆಸರಿನಲ್ಲಿ ಕೆನರಾಬ್ಯಾಂಕ್ ಪೊನ್ನಂಪೇಟೆ ಶಾಖೆಯಿಂದ ರೂ. 2.80 ಕೋಟಿ ಸಾಲ ಪಡೆದಿದ್ದು, ಸಾಲ ಮರುಪಾವತಿಗಾಗಿ ತಾ. 30.12.2011ರ ದಿನಾಂಕವನ್ನು ನಮೂದಿಸಿ ಸಾಯಿ ಶಂಕರ್‍ನ ಪೊನ್ನಂಪೇಟೆಯ ಎಸ್.ಬಿ.ಎಂ.ನಲ್ಲಿ ಸಂಸ್ಥೆಯ ಅಧ್ಯಕ್ಷರು ಹಾಗೂ ಪ್ರಾಂಶುಪಾಲರ ಜಂಟಿ ಹೆಸರಿನ ಖಾತೆಯಲ್ಲಿದ್ದ ಚೆಕ್ ಅನ್ನು ನೀಡಿದ್ದು, ಅದು ತಾ. 19.1.2012 ರಂದು ಅಮಾನ್ಯಗೊಂಡಿತು. ನಂತರ ತಾ. 8.8.2014 ರಂದು ಬೆಂಗಳೂರಿನ ಕರ್ನಾಟಕ ಸಾಲ ವಸೂಲಾತಿಯ ನ್ಯಾಯ ಮಂಡಳಿಯ (ಡಿ.ಆರ್‍ಡಿ.ಟಿ) ಮುಂದೆ ಸಾಲ ಮರು ಪಾವತಿಸುವುದಾಗಿ ರಾಜಿ ಸಂಧಾನ ನಡೆದಿತ್ತು. ಆರು ವರ್ಷಗಳಾದರೂ ಸಂಸ್ಥೆಯ ಅಧ್ಯಕ್ಷ ಝರುಗಣಪತಿ ಸಾಲ ಮರುಪಾವತಿ ಮಾಡದೆ ನಿರ್ಲಕ್ಷ್ಯತೆ ತೋರಿದ್ದಾರೆ ಎಂದು ಕೆನರಾ ಬ್ಯಾಂಕ್ ಪರವಾಗಿ ವೀರಾಜಪೇಟೆಯ ವಕೀಲ ಬಿ. ರತ್ನಾಕರ ಶೆಟ್ಟಿ ಅವರು ವಾದಿಸಿದ್ದರು.
ಪೊನ್ನಂಪೇಟೆಯ ಸಾಯಿ ಶಂಕರ್ ವಿದ್ಯಾ ಸಂಸ್ಥೆಯ ವಿರುದ್ಧ ಕೆನರಾ ಬ್ಯಾಂಕ್ ತಾ. 10.7.12 ರಂದು ಚೆಕ್ ಅಮಾನ್ಯ ಪ್ರಕರಣ ದಾಖಲಿಸಿತ್ತು.