ವೀರಾಜಪೇಟೆ, ಜು. 23: ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಸುಭಾಷ್‍ನಗರ 9ನೇ ವಾರ್ಡ್‍ನಲ್ಲಿ ಕೊರೊನಾ ಜಾಗೃತಿ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಯೂರೋಕಿಡ್ಸ್ ಶಾಲೆಯ ಸಭಾಂಗಣದಲ್ಲಿ ತಹಶೀಲ್ದಾರ್ ಎಲ್.ಎಂ.ನಂದೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ||.ವಿಶ್ವನಾಥ್ ಸಿಂಪಿ ಕೊರೊನಾ ಕಾಲದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ಮಾತನಾಡಿದರು. ಕೊರೊನಾ ವೈರಾಣು ಹರಡದಂತೆ ಮುಂಜಾಗರೂಕತೆ ವಹಿಸಲು ಸೇವಾ ಸಂಸ್ಥೆಗಳು ಬದ್ಧರಾಗಬೇಕು. ಸಮಾಜದ ಪ್ರತಿಯೊಬ್ಬರಿಗೂ ಕೊರೊನಾ ವೈರಸ್‍ನ ಜಾಗ್ರತೆಯ ಅರಿವು ಮೂಡಿಸಿ ಪ್ರತಿಯೊಬ್ಬರ ಆರೋಗ್ಯ ಕಾಪಾಡಬೇಕು. ಆರೋಗ್ಯ ತಂಡ, ಅಂಗನವಾಡಿ ಕಾರ್ಯಕರ್ತೆಯರು, ಸಮಾಜ ಸೇವಕರು, ಸ್ವಯಂ ಸೇವಕರು ಇದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಕೊರೊನಾ ವೈರಾಣು ಹರಡದಂತೆ ನಿಯಂತ್ರಣಕ್ಕೆ ಸಾರ್ವಜನಿಕ ಆಸ್ಪತ್ರೆಯಲ್ಲಿಯೂ ವಿಶೇಷ ಸೌಲಭ್ಯ ಒದಗಿಸಲಾಗಿದೆ. ಇದಕ್ಕಾಗಿ ಫೀವರ್ ಕ್ಲಿನಿಕ್ ಕಾರ್ಯೋನ್ಮುಖವಾಗಿದೆ ತುರ್ತು ರೋಗಿಗಳಿರುವ ಕೊರೊನಾ ವಾರ್ಡ್ ಸಿದ್ಧವಿದೆ. ಕೊರೊನಾ ಶಂಕಿತರನ್ನು ತಪಾಸಣೆಗಾಗಿ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಈಗ ರಚನೆಯಾಗುವ ಕೊರೊನಾ ವೈರಾಣು ತಡೆಗಟ್ಟುವ ಜಾಗೃತಿ ಸಮಿತಿಯೊಂದಿಗೆ ಸಾರ್ವಜನಿಕ ಆಸ್ಪತ್ರೆಯ ವೈದ್ಯರುಗಳು, ಶುಶ್ರೂಷಕಿಯರು, ಆಶಾ ಕಾರ್ಯಕರ್ತೆಯರು ಮುಕ್ತವಾಗಿ ಸಹಕರಿಸಲಿದ್ದಾರೆ ಎಂದರು.
ವಾರ್ಡ್ ಸದಸ್ಯ ಕೆ.ಹೆಚ್. ಮುಹಮ್ಮದ್ ರಾಫಿ ಅವರ ಸಂಚಾಲಕತ್ವದಲ್ಲಿ 9 ಮಂದಿಯ ತಂಡವನ್ನು ರಚಿಸಲಾಯಿತು. ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಎಸ್.ಹೆಚ್. ಮತೀನ್, ವಾರ್ಡ್ ಪ್ರಮುಖರಾದ ವಿ.ಟಿ.ನಾಣಯ್ಯ ಪಾಲ್ಗೊಂಡಿದ್ದರು. ಪ. ಪಂ. ಸಿಬ್ಬಂದಿ ಸುಲೇಖಾ ಸ್ವಾಗತಿಸಿದರು.