ಕುಶಾಲನಗರ, ಜು. 23: ಕೋವಿಡ್-19 ನಿರ್ವಹಣೆ ಸಂಬಂಧ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಲು ಕುಶಾಲನಗರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿ ರಚಿಸಲಾಯಿತು. ಪಟ್ಟಣ ಪಂಚಾಯ್ತಿ ಕಛೇರಿ ಸಭಾಂಗಣದಲ್ಲಿ ವಾರ್ಡ್ ಸದಸ್ಯರು, ಬೂತ್ ಮಟ್ಟದ ಅಧಿಕಾರಿ ಮತ್ತು ಸ್ಥಳೀಯ ಪಂಚಾಯ್ತಿ ಸಿಬ್ಬಂದಿಗಳನ್ನು ಒಳಗೊಂಡ ಸಮಿತಿಯ ಸಭೆಯಲ್ಲಿ ಸಮಿತಿಯ ಕಾರ್ಯವೈಖರಿಗಳ ಬಗ್ಗೆ ಚರ್ಚೆ ನಡೆಯಿತು.

ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸುಜಯ್‍ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಟ್ಟಣದ ಪ್ರತಿ ವಾರ್ಡ್‍ನಲ್ಲಿ ಆಯಾ ತಂಡ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಕಾರ್ಯ ನಡೆಸಬೇಕು. ನಾಗರಿಕರು ಪ್ರತಿಯೊಬ್ಬರೂ ಮನೆಯಿಂದ ಹೊರಬಂದ ಸಂದರ್ಭ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ವ್ಯಾಪಾರ ಸ್ಥಳಗಳಲ್ಲಿ ಸಾನಿಟೈಸರ್ ಬಳಕೆ ಮಾಡುವುದು ಮತ್ತು ಸರಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳುವುದು ಸಮಿತಿಯ ಜವಾಬ್ದಾರಿಯಾಗಿದೆ ಎಂದು ಪಂಚಾಯ್ತಿ ಆರೋಗ್ಯ ಅಧಿಕಾರಿ ಉದಯಕುಮಾರ್ ತಿಳಿಸಿದರು.

ನಿಯಮ ಉಲ್ಲಂಘನೆ ಮಾಡಿದಲ್ಲಿ ಸರಕಾರದ ಆದೇಶದ ರೀತಿಯಲ್ಲಿ ದಂಡ ವಿಧಿಸಿ ಕ್ರಮಕೈಗೊಳ್ಳಲಾಗುವುದು ಎಂದು ಪಂಚಾಯ್ತಿ ಅಧಿಕಾರಿ ಸತೀಶ್‍ಕುಮಾರ್ ತಿಳಿಸಿದರು. ಈ ಸಂದರ್ಭ ಪಂಚಾಯ್ತಿ ಸದಸ್ಯರಾದ ಪ್ರಮೋದ್ ಮುತ್ತಪ್ಪ, ಅಮೃತ್‍ರಾಜ್, ಪುಟ್ಟಲಕ್ಷ್ಮಿ, ಎಂ.ಕೆ.ಸುಂದರೇಶ್, ಎಂ.ವಿ.ನಾರಾಯಣ, ಕೆ.ಜಿ.ಮನು ಮತ್ತು ಪಪಂ ಸಿಬ್ಬಂದಿಗಳು ಇದ್ದರು.