ಕೂಡಿಗೆ, ಜು. 23: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊರೆನೂರು-ಮಣಜೂರು ಗ್ರಾಮದ ಸಮೀಪದಲ್ಲಿ ಹರಿಯುತ್ತಿರುವ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸುವಂತೆ ಈ ಭಾಗದ ಸಾರ್ವಜನಿಕರ, ರೈತರ ಆಗ್ರಹವಾಗಿದೆ.
ತೊರೆನೂರು ಗ್ರಾಮಕ್ಕೆ ಹೊಂದಿಕೊಂಡಂತೆ ಹರಿಯುವ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣವಾದರೆ, ಕೊಡಗು ಮತ್ತು ಮೈಸೂರು ಜಿಲ್ಲೆಯ ಸಂಪರ್ಕ ಹೆಚ್ಚಾಗುತ್ತದೆ.
ಅಲ್ಲದೆ ಸಮೀಪದ ಗ್ರಾಮ ಪಂಚಾಯಿತಿಗಳಾದ ಶಿರಂಗಾಲ, ಚಿಕ್ಕಅಳುವಾರ, ಬೈರಪ್ಪನಗುಡಿ, ಸಿದ್ಧಲಿಂಗಪುರ ಸೇರಿದಂತೆ ಹತ್ತು ಉಪ ಗ್ರಾಮಗಳ ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಈ ವ್ಯಾಪ್ತಿಯ ಗ್ರಾಮಸ್ಥರು ಹೆಚ್ಚಾಗಿ ಬೇಸಾಯವನ್ನೇ ನಂಬಿರುತ್ತಾರೆ.
ಬೆಳೆಯುವ ಪದಾರ್ಥಗಳನ್ನು ದೂರದ ಸೋಮವಾರಪೇಟೆ ಅಥವಾ ಕುಶಾಲನಗರಕ್ಕೆ ಕೊಂಡೊಯ್ಯಬೇಕು. ಆದರೆ ಸಮರ್ಪಕವಾದ ಬೆಲೆಯು ಸಿಗುವುದಿಲ್ಲ.
ಸೇತುವೆ ನಿರ್ಮಾಣವಾದರೆ ಸೇತುವೆಯ ಮೂಲಕ ಮೈಸೂರು ಜಿಲ್ಲೆಯ ಪ್ರಮುಖ ವ್ಯಾಪಾರ ಕೇಂದ್ರವಾಗಿರುವ ಬೆಟ್ಟದಪುರಕ್ಕೆ ಹೋದರೆ ಬೆಳೆಗೆ ತಕ್ಕ ಬೆಲೆ ಸಿಗಲಿದೆ ಎನ್ನುತ್ತಾರೆ ಈ ಭಾಗದ ರೈತರು.
ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ಕೇಂದ್ರ, ಮತ್ತು ಕರ್ನಾಟಕ ರಾಜ್ಯದ ಪ್ರಥಮ ಪಶುವೈದ್ಯ ತರಬೇತಿ ಕೇಂದ್ರ ಇದ್ದು, ಇಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ಮತ್ತು ಅಧಿಕಾರಿ ವರ್ಗದವರಿಗೆ ಸೇತುವೆ ನಿರ್ಮಾಣದಿಂದ ಬಹಳಷ್ಟು ಅನುಕೂಲವಾಗಲಿದೆ.
ಕಳೆದ ವರ್ಷ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ತೊರೆನೂರು ಗ್ರಾಮದಲ್ಲಿ ಸೇತುವೆ ನಿರ್ಮಾಣ ಮಾಡುವ ಭರವಸೆ ನೀಡಿದ್ದರು. ಸಂಬಂಧಿಸಿದ ಅಧಿಕಾರಿಗಳಿಗೆ ಸರ್ವೆ ಕಾರ್ಯ ನೆಡೆಸಿ ಕ್ರಿಯಾಯೋಜನೆ ತಯಾರಿಸಲು ಸೂಚನೆ ನೀಡಿದ್ದರು.
ಸಂಬಂಧಿಸಿದ ಅಧಿಕಾರಿ ವರ್ಗದವರು ಈ ಸೇತುವೆ ನಿರ್ಮಾಣ ಕಾಮಗಾರಿಯ ಬಗ್ಗೆ ಹೆಚು ಗಮನ ಹರಿಸಬೇಕೆಂದು ನೂರಾರು ಗ್ರಾಮಸ್ಥರು ಸೇರಿದಂತೆ ತೊರೆನೂರು ಸಹಕಾರ ಸಂಘದ ಅಧ್ಯಕ್ಷ ಟಿ.ಎಸ್. ಕೃಷ್ಣೇಗೌಡ, ಕುಶಾಲನಗರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಚಂದ್ರಪ್ಪ, ಸಂಘದ ನಿರ್ದೇಶಕರಾದ ಟಿ.ಕೆ. ಪಾಂಡುರಂಗ, ಲೋಕೇಶ್ ಸೇರಿದಂತೆ ಗ್ರಾಮದ ದೇವಾಲಯ ಸಮಿತಿಯ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಮತ್ತು ಈ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸದಸ್ಯರುಗಳು ಆಗ್ರಹಿಸಿದ್ದಾರೆ.