ಸೋಮವಾರಪೇಟೆ, ಜು. 22: ಸೋಮವಾರಪೇಟೆ-ಶಾಂತಳ್ಳಿ ರಾಜ್ಯ ಹೆದ್ದಾರಿಯ ಆಲೇಕಟ್ಟೆ ರಸ್ತೆಯಲ್ಲಿ ಕೃತಕ ಕೆರೆ ನಿರ್ಮಾಣವಾಗಿದ್ದು, ಸಾರ್ವಜನಿಕ ಪಾದಚಾರಿಗಳಿಗೆ ಕೆಸರಿನ ಸಿಂಚನವಾಗುತ್ತಿದೆ.
ಲೋಕೋಪಯೋಗಿ ಇಲಾಖೆಗೆ ಒಳಪಡುವ ಈ ರಸ್ತೆಯಲ್ಲಿ ಪದ್ಮ ಕ್ಯಾಂಟೀನ್ ಸಮೀಪ ಹೊಂಡ ನಿರ್ಮಾಣವಾಗಿದ್ದು, ಮಳೆ ನೀರಿನೊಂದಿಗೆ ಕೊಳಚೆ ನೀರು ರಸ್ತೆಯಲ್ಲಿ ಶೇಖರಣೆಗೊಂಡಿದೆ.
ಪರಿಣಾಮ ರಸ್ತೆಯಲ್ಲಿ ವಾಹನಗಳು ಸಂಚರಿಸುವ ಸಂದರ್ಭ ಪಾದಚಾರಿ ಗಳಿಗೆ ಕೆಸರಿನ ಸಿಂಚನವಾಗುತ್ತಿದ್ದು, ರಸ್ತೆ ದುರಸ್ತಿ ಕಾರ್ಯ ನಿರ್ವಹಿಸದ ಲೋಕೋಪ ಯೋಗಿ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಆಲೇಕಟ್ಟೆ, ಗಾಂಧಿನಗರ ವ್ಯಾಪ್ತಿಯ ಮನೆಗಳ ಕೊಳಚೆ ನೀರು, ಮಳೆ ನೀರು ಚರಂಡಿಯ ಮೂಲಕ ಹರಿದು ಪದ್ಮ ಕ್ಯಾಂಟೀನ್ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಸಂಗ್ರಹವಾಗುತ್ತಿದೆ.
ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆಯ ಬದಿಗಳಲ್ಲಿ ಚರಂಡಿ ನಿರ್ಮಾಣ ಮಾಡದೇ ಇರುವದರಿಂದ ಕೊಳಚೆ ನೀರು ರಸ್ತೆಯಲ್ಲಿಯೇ ಶೇಖರಣೆಯಾಗುತ್ತಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಶಾಂತಳ್ಳಿ, ಮಲ್ಲಳ್ಳಿ ಜಲಪಾತ, ಸುಬ್ರಮಣ್ಯ, ತೋಳೂರುಶೆಟ್ಟಳ್ಳಿ, ಸಕಲೇಶಪುರ ಸೇರಿದಂತೆ ಇನ್ನಿತರ ಊರುಗಳಿಗೆ ತೆರಳುವ ಪ್ರಮುಖ ರಸ್ತೆ ಇದಾಗಿದ್ದು, ದಿನಂಪ್ರತಿ ಸಾವಿರಾರು ವಾಹನಗಳ ಓಡಾಟವಿರುತ್ತದೆ. ಇಂತಹ ರಸ್ತೆಯಲ್ಲಿ ಕೃತಕ ಕೆರೆ ನಿರ್ಮಾಣವಾಗಿದ್ದರೂ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಯಾವದೇ ಕ್ರಮ ವಹಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್‍ಕುಮಾರ್, ಮುಂದಿನ ಕ್ರಿಯಾ ಯೋಜನೆಯಲ್ಲಿ ರಸ್ತೆಗೆ ಚರಂಡಿ ನಿರ್ಮಿಸಲು ಕ್ರಮ ವಹಿಸಲಾಗುವದು ಎಂದು ತಿಳಿಸಿದ್ದಾರೆ.