ವೀರಾಜಪೇಟೆ, ಜು. 22: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಮಳೆ ಹಾನಿ ಪರಿಹಾರ ನಿಧಿಯಲ್ಲಿ 3.50 ಕೋಟಿ ರೂ. ಅನುದಾನ ಬಂದಿದ್ದು, ಈಗಾಗಲೇ ರೂ. 75 ಲಕ್ಷ ವೆಚ್ಚದ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದ್ದರೂ ಎಲ್ಲ ಕಾಮಗಾರಿಯನ್ನು ಹಂತಹಂತವಾಗಿ ಮುಗಿಸುವಂತೆ ಶಾಸಕ ಬೋಪಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜೂನಿಯರ್ ಕಾಲೇಜು ಬಳಿಯ ಬೀರಂಗಾಡು ರಸ್ತೆಯಲ್ಲಿ ಮಳೆ ಹಾನಿ ಪರಿಹಾರ ನಿಧಿಯಲ್ಲಿ ನಿರ್ಮಿಸಲಾಗಿರುವ 7.50 ಲಕ್ಷ ರೂ ಗಳ 110 ಮೀ ಕಾಂಕ್ರಿಟ್ ರಸ್ತೆ ಹಾಗೂ ಶಿವಕೇರಿಯಲ್ಲಿ ಇದೇ ನಿಧಿಯಲ್ಲಿ 14 ಲಕ್ಷ ರೂ ಗಳ ವೆಚ್ಚದಲ್ಲಿ ನಿರ್ಮಿಸಲಾದ 197 ಮೀ ಕಾಂಕ್ರಿಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಳೆ ಹಾನಿಯಲ್ಲಿ ಕೊಡಗಿಗೆ 13 ಕೋಟಿ ರೂ.ಗಳ ಅನುದಾನ ದೊರೆತಿದ್ದು, ಇದರಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಬಂದಿರುವ ಅನುದಾನದಲ್ಲಿ ವಿವಿಧ ಜನಪರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪಟ್ಟಣದ ರಸ್ತೆ ದುರಸ್ತಿ ಡಾಂಬರೀಕರಣ ಮಳೆಗಾಲದ ನಂತರವೂ ಕೈಗೊಳ್ಳಲಾಗುವುದು.
(ಮೊದಲ ಪುಟದಿಂದ) ಬೀರಂಗಾಡು ಒಂದು ಭಾಗದ ರಸ್ತೆ ದುಸ್ಥಿತಿಯಲ್ಲಿದ್ದು, ಮಳೆ ನಿಂತ ಬಳಿಕ 160 ಮೀ ರಸ್ತೆ ಡಾಂಬರೀಕರಣ ಆಗಲಿದೆ. ಸ್ಥಳೀಯರ ಕೋರಿಕೆಯಂತೆ ತಡೆಗೋಡೆಗೂ ಅನುದಾನ ನೀಡಲಾಗುತ್ತದೆ. ಅದೇ ರೀತಿಯಲ್ಲಿ ಜನರ ಕೋರಿಕೆಯಂತೆ ಪಟ್ಟಣದ ಗೌರಿಕೆರೆ, ಛತ್ರಕೆರೆ, ಶೀವಕೇರಿ ಕೆರೆಗಳ ಅಭಿವೃದ್ಧಿಗೆ ಯೋಜನಾ ವರದಿ ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭ ಮುಖ್ಯಾಧಿಕಾರಿ ಶ್ರೀಧರ್, ಅಭಿಯಂತರ ಹೇಮ್‍ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಶಶಿ ಸುಬ್ರಮಣಿ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ರಘುನಾಣಯ್ಯ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು.