ಶ್ರೀಮಂಗಲ, ಜು. 22: ಕುಟ್ಟ ಸನಿಹದ ತೈಲ ಗ್ರಾಮದಲ್ಲಿ ಕಳೆದ ರಾತ್ರಿ ಆನೆಗಳ ಹಿಂಡೊಂದು ಕಾಣಿಸಿಕೊಂಡಿದ್ದು, ಈ ಗುಂಪಿನಲ್ಲಿದ್ದ ಆನೆಮರಿಯೊಂದು ಅಲ್ಲಿನ ಕಂದಕಕ್ಕೆ ಉರುಳಿಬಿದ್ದು, ಅಪಾಯದಲ್ಲಿದ್ದ ಘಟನೆ ವರದಿಯಾಗಿದೆ. ಅಲ್ಲಿನ ತೀತಿರ ಕುಶಾಲಪ್ಪ ಹಾಗೂ ಲಲ್ಲು ಸೋಮಯ್ಯ ಎಂಬವರ ತೋಟದ ಆಜುಬಾಜಿನ ನಡುವೆ ಬರುವ ಕೊಲ್ಲಿ (ಕಂದಕ)ಗೆ ಗಂಡು ಆನೆಮರಿ ಬಿದ್ದು ಸಿಕ್ಕಿಹಾಕಿಕೊಂಡು ಹಿಂಡಿನಿಂದ ಬೇರ್ಪಟ್ಟಿತ್ತು. ಕಳೆದ ರಾತ್ರಿ ಈ ಘಟನೆ ನಡೆದಿದ್ದು, ತಾಯಿ ಆನೆ ಸೇರಿದಂತೆ ಇತರ ಆನೆಗಳು ಈ ವ್ಯಾಪ್ತಿಯಲ್ಲಿ ದಾಂಧಲೆ ನಡೆಸಿದ್ದು, ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.ಇದಲ್ಲದೆ ಇಂದು ಬೆಳಿಗ್ಗೆ ಇದರ ಅರಿವಿಲ್ಲದೆ (ಮೊದಲ ಪುಟದಿಂದ) ಈ ವ್ಯಾಪ್ತಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ತೀತಿರ ವಾಸು ಅಚ್ಚಯ್ಯ ಅವರ ಮನೆಯಲ್ಲಿರುವ ಕಾರ್ಮಿಕ ಚಿಕ್ಕ ಎಂಬವರ ಮೇಲೆ ಆನೆ ದಾಳಿ ನಡೆಸಿದ್ದು, ಅವರು ಸಣ್ಣ - ಪುಟ್ಟ ಗಾಯದೊಂದಿಗೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡಿದ್ದ ಚಿಕ್ಕ ಅವರಿಗೆ ಶ್ರೀಮಂಗಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ತಲೆಭಾಗಕ್ಕೆ ಎಂಟ್ಹತ್ತು ಹೊಲಿಗೆ ಹಾಕಲಾಗಿದೆ.
ಘಟನೆಯ ಕುರಿತು ಶ್ರೀಮಂಗಲ ವಲಯ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಲಾಗಿದ್ದು, ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಮರಿಯನ್ನು ಕಂದಕದಿಂದ ಮೇಲೆತ್ತಿ ತಾಯಿಯಾನೆಯೊಂದಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮರಿಯಿಂದ ದೂರಾಗಿದ್ದ ತಾಯಿ ಆನೆ ಘೀಳಿಡುತ್ತಾ ತೋಟದೊಳಗೆ ಓಡಾಡುತ್ತಾ ಭೀತಿಯ ವಾತಾವರಣವನ್ನು ಸೃಷ್ಟಿಸಿತ್ತು.
ಕುಟ್ಟ, ಮಂಚಳ್ಳಿ, ಕಾಯಮಾನಿ, ತೈಲ ವಿಭಾಗದಲ್ಲಿ ಆನೆಗಳು ಹಿಂಡು ಹಿಂಡಾಗಿ ತಿರುಗಾಡುತ್ತಿದ್ದು, ಸ್ಥಳೀಯ ಜನತೆ ಆತಂಕದಲ್ಲೇ ದಿನ ದೂಡುವಂತಾಗಿದೆ. ಎಲ್ಲಾ ಕೃಷಿ ಫಸಲುಗಳು ಆನೆಗಳ ದಾಳಿಯಿಂದ ನಾಶವಾಗುತ್ತಿವೆ ಎಂದು ಸ್ಥಳೀಯರಾದ ತೀತಿರ ಮಂದಣ್ಣ ಅವರು ಮಾಹಿತಿ ನೀಡಿದ್ದಾರೆ.
ಕಾಡಾನೆ ಮರಿ ಇದ್ದ ಸ್ಥಳದಿಂದ ಸುಮಾರು 2 ಕಿ.ಮೀ. ದೂರದಲ್ಲಿ ಕಾಡಾನೆ ಹಿಂಡುಗಳನ್ನು ಅರಣ್ಯ ಇಲಾಖೆ ಪತ್ತೆ ಹಚ್ಚಿದ್ದು, ಕಾಡಾನೆ ಹಿಂಡಿನಲ್ಲಿದ್ದ ತಾಯಿಯ ಜೊತೆ ಸೇರಿಸಲಾಗಿದೆ. ಕಾಡಾನೆ ಮರಿ ಸುರಕ್ಷಿತವಾಗಿ ತಾಯಿಯ ಮಡಿಲು ಸೇರಿದ್ದು, ಆರೋಗ್ಯವಾಗಿದೆ ಎಂದು ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವಿರೇಂದ್ರ ಮರಿಬಸಣ್ಣವರ್ ತಿಳಿಸಿದ್ದಾರೆ.