*ಗೋಣಿಕೊಪ್ಪಲು, ಜು. 22 : ಕೊರೊನಾ ಸೋಂಕು ಪಟ್ಟಣದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ಪ್ರತಿದಿನವೂ ಹೊಸ ಹೊಸ ಬಡಾವಣೆಗಳು ಜನತೆಯ ಪ್ರವೇಶ ನಿಷೇಧಕ್ಕೆ ಒಳಗಾಗುತ್ತಿವೆ.

ಬಸ್ ನಿಲ್ದಾಣ ಬಳಿ ಕಾವೇರಿ ಕಾಂಪ್ಲೆಕ್ಸ್ ಕಟ್ಟಡವನ್ನು ಬುಧವಾರ ಸೀಲ್ ಡೌನ್ ಮಾಡಲಾಯಿತು. ಇಲ್ಲಿ ವಾಸವಿರುವ 24 ವರ್ಷದ ಬ್ಯಾಂಕ್ ಆಫ್ ಬರೋಡದ ನೌಕರರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಮೂರು ದಿನಗಳ ಹಿಂದೆ ಸಣ್ಣ ಪ್ರಮಾಣದ ಜ್ವರ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ತೆರಳಿ ಪರೀಕ್ಷೆಗೆ ಗಂಟಲ ದ್ರವ ನೀಡಿದ್ದರು.

ಇದೀಗ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.ಸೋಂಕಿತರನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಈ ಕಟ್ಟಡದ ಪ್ರವೇಶ ದ್ವಾರದಲ್ಲಿ ಪಟ್ಟಿಕಟ್ಟಿ, ಪ್ರವೇಶ ನಿಷೇಧಿಸಿದ ಬ್ಯಾನರ್ ಅಳವಡಿಸಿದ್ದಾರೆ.

ಬಾಳೆಲೆ ಬಳಿಯ ವಡ್ಡರಮಾಡುವಿ ನಲ್ಲಿ 40 ವರ್ಷದ ವ್ಯಕ್ತಿಯೊಬ್ಬರಿಗೆ, ಬೆಕ್ಕೆಸೊಡ್ಲೂರಿನಲ್ಲಿ 44 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಈ ಭಾಗಗಳನ್ನು ಹೊಸದಾಗಿ ಸೀಲ್ ಡೌನ್ ಮಾಡಿದ್ದಾರೆ. ಗೋಣಿ ಕೊಪ್ಪಲು ಪಟ್ಟಣದಲ್ಲಿ 8 ಬಡಾವಣೆಗಳಿಗೆ ಕೊರೊನಾ ಸೋಂಕು ಹರಡಿದಂತಾಗಿದೆ. ನೇತಾಜಿ ಬಡಾವಣೆಯಲ್ಲಿ ವಾಸವಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ.ಯತಿರಾಜ್‍ಗೆ ಸೋಂಕು ದೃಢಪಟ್ಟು 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿದ್ದರು. ಇದೀಗ ಚೇತರಿಸಿಕೊಂಡು ಮಂಗಳವಾರದಿಂದ ಕರ್ತವ್ಯಕ್ಕೆ ಹಾಜ ರಾಗಿದ್ದಾರೆ. ಇದೇ ಬಡಾವಣೆಯಲ್ಲಿ ಮತ್ತೆ ಇಬ್ಬರಿಗೆ ಸೋಂಕು ದೃಢಪಟ್ಟಿತ್ತು. ಅವರು 14 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿ ಆರೋಗ್ಯ ವಾಗಿದ್ದಾರೆ.

ಇದರಿಂದ ಸೀಲ್‍ಡೌನ್ ಬಡಾವಣೆಯನ್ನು ಬುಧವಾರದಿಂದ ಜನರ ಸಂಪರ್ಕಕ್ಕೆ ಮುಕ್ತ ಗೊಳಿಸಲಾಗಿದೆ. ಕೆಇಬಿ ಹಿಂಭಾಗದ ರಸ್ತೆಯನ್ನು ಜನರ ಓಡಾಟಕ್ಕೆ ಮುಕ್ತಗೊಳಿಸಲಾಗಿದೆ. ಹರೀಶ್ಚಂದ್ರಪುರ, ಎಂಎಂ.ಲೇಔಟ್, ಅಚ್ಚಪ್ಪ ಬಡಾವಣೆ, ಒಂದು ಮತ್ತು ಎರಡನೇ ಬಡಾವಣೆಯಲ್ಲಿ ಮತ್ತೆ ಕೆಲವರಿಗೆ ಸೋಂಕು ಕಾಣಿಸಿಕೊಂಡಿರುವುದರಿಂದ ಈ ಪ್ರದೇಶಗಳ ನಿಷೇಧ ಮುಂದು ವರಿದಿದೆ. -ಎನ್.ಎನ್.ದಿನೇಶ್