ಆ. 5 ರಂದು ರಾಮ ಮಂದಿರಕ್ಕೆ ಮೋದಿ ಶಿಲಾನ್ಯಾಸ

ಪುಣೆ, ಜು. 22: ಅಯೋಧ್ಯೆಯಲ್ಲಿ ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‍ನ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸ್ವಾಮಿ ಗೋವಿಂದ್ ದೇವ್ ಗಿರಿ, ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 5 ರಂದು ರಾಮ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಖಚಿತಪಡಿಸಿಕೊಳ್ಳಲು, 150 ಆಹ್ವಾನಿತರು (ಸಮಾರಂಭದಲ್ಲಿ) ಸೇರಿದಂತೆ 200ಕ್ಕೂ ಹೆಚ್ಚು ಜನರಿಗೆ ಅವಕಾಶ ಇರುವುದಿಲ್ಲ ಎಂದರು. ಪ್ರಧಾನಿ ಮೋದಿ ಆಗಸ್ಟ್ 5 ರಂದು ಬೆಳಿಗ್ಗೆ ಹನುಮಾನ್ ಗರ್ಹಿ, ರಾಮ್ ಲಲ್ಲಾ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಬಳಿಕ ಮರ ನೆಡುತ್ತಾರೆ ಮತ್ತು ನಂತರ ರಾಮ ಮಂದಿರ ನಿರ್ಮಾಣದ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಅವರು ಹೇಳಿದರು. ಅಯೋಧ್ಯೆಯ ರಾಮ ಮಂದಿರದ ನಿರ್ಮಾಣ ಕಾರ್ಯವು ಆಗಸ್ಟ್ 5 ರಿಂದ ಆರಂಭವಾದರೂ ಕೂಡ ದೇವಾಲಯವನ್ನು ಸಂಪೂರ್ಣಗೊಳಿಸಲು ಸರಿಸುಮಾರು ಮೂರರಿಂದ ಮೂರುವರೆ ವರ್ಷಗಳು ಬೇಕಾಗಬಹುದೆಂದು ಅಂದಾಜಿಸಲಾಗಿದೆ.

ಅಮೇರಿಕಾ-ಚೀನಾ ನಡುವೆ ಶೀತಲ ಸಮರ

ಹೂಸ್ಟನ್, ಜು. 22: ಹೂಸ್ಟನ್‍ನಲ್ಲಿರುವ ಚೀನಾದ ದೂತವಾಸ ಕಚೇರಿ ತೆರವುಗೊಳಿಸಲು ಅಮೇರಿಕಾ ಚೀನಾಗೆ ಸೂಚನೆ ನೀಡಿದ್ದು, ಅಮೇರಿಕಾ-ಚೀನಾ ನಡುವಿನ ಶೀತಲ ಸಮರ ಮತ್ತೊಂದು ಹಂತ ತಲುಪಿದೆ. ಹೂಸ್ಟನ್‍ನಲ್ಲಿರುವ ಚೀನಾದ ದೂತವಾಸ ಕಚೇರಿಯಿಂದ ಅಮೇರಿಕನ್ನರ ಬೌದ್ಧಿಕ ಆಸ್ತಿ ಹಕ್ಕು ಹಾಗೂ ಗೌಪ್ಯತೆಗೆ ಅಪಾಯವಿದ್ದು, ಅದನ್ನು ರಕ್ಷಿಸುವುದಕ್ಕಾಗಿ ಚೀನಾ ದೂತವಾಸ ಕಚೇರಿಯನ್ನು ಸ್ಥಗಿತಗೊಳಿಸುವುದಕ್ಕೆ ಆದೇಶ ನೀಡಲಾಗಿದೆ ಎಂದು ಅಮೇರಿಕಾ ಸರ್ಕಾರ ಸಮರ್ಥನೆ ನೀಡಿದೆ. ಚೀನಾದ ವಿದೇಶಾಂಗ ವಕ್ತಾರರಾದ ವಾಂಗ್ ವೆನ್ಬಿನ್ ಅಮೇರಿಕಾದ ಈ ನಡೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಮೇರಿಕಾದ ಬೇಡಿಕೆ ಹಿಂದೆಂದೂ ಕಾಣದ ತೀವ್ರತರವಾದುದ್ದಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಅಮೇರಿಕಾದಲ್ಲಿರುವ ಚೀನಾ ರಾಯಭಾರ ಕಚೇರಿ ಹಾಗೂ ದೂತವಾಸ ಕಚೇರಿಗಳಿಗೆ ಇತ್ತೀಚೆಗಷ್ಟೇ ಬಾಂಬ್ ಹಾಗೂ ಜೀವ ಬೆದರಿಕೆಗಳೂ ಬಂದಿದ್ದವು ಎಂದು ಹೇಳಿದ್ದಾರೆ.

ಮುಸ್ಲಿಂ ಮಹಿಳಾ ಹಕ್ಕುಗಳ ದಿನ

ನವದೆಹಲಿ, ಜು. 22: ಸಾಮಾಜಿಕ ಅನಿಷ್ಟದ ವಿರುದ್ಧದ ಕಾನೂನು ಜಾರಿಯಾದಂದಿನಿಂದ ತ್ರಿವಳಿ ತಲಾಖ್ ಪ್ರಕರಣಗಳಲ್ಲಿ ಶೇ. 82 ರಷ್ಟು ಕುಸಿತ ಕಂಡುಬಂದಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ಇದೇ ವೇಳೆ ಆಗಸ್ಟ್ 1 ತ್ರಿವಳಿ ತಲಾಖ್ ನಿಷೇಧದ ಕಾನೂನು ಜಾರಿಯಾದ ದಿನವಾಗಿದ್ದು, ಇದನ್ನು ಮುಸ್ಲಿಂ ಮಹಿಳಾ ಹಕ್ಕುಗಳ ದಿನ ಎಂದು ಕರೆದಿದ್ದಾರೆ. ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ಸಂರಕ್ಷಣೆ) ಕಾಯ್ದೆ, 2019, ಮಹಿಳೆಯರ ಹಕ್ಕುಗಳ ಸಂರಕ್ಷಣೆಗೆ ಬದ್ದವಾಗಿದೆ ಎಂದು ಅವರು ಹೇಳಿದ್ದಾರೆ. ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ಪ್ರಕಟಿಸಿದ ತ್ರಿವಳಿ ತಲಾಖ್ ಅಥವಾ ತಲಾಖ್-ಎ-ಬಿಡ್ಡತ್ ಇಸ್ಲಾಮಿಕ್ ಕಾನೂನುಬದ್ಧವಲ್ಲ. ಆದರೆ ಸಾಮಾಜಿಕ ಅನಿಷ್ಟಕ್ಕೆ ಇನ್ನೂ ಮತದ ರಾಜಕಾರಣದಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದಿದ್ದಾರೆ. ಆಗಸ್ಟ್ 1, 2019, ಭಾರತೀಯ ಸಂಸದೀಯ ಇತಿಹಾಸದಲ್ಲಿ ಐತಿಹಾಸಿಕ ದಿನವಾಗಿದ್ದು, ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಸೇರಿದಂತೆ “ಜಾತ್ಯತೀತತೆಯ ಚಾಂಪಿಯನ್ನರೆಂದು” ಕರೆಯಲ್ಪಡುವ ಪಕ್ಷಗಳ ವಿರೋಧದ ನಡುವೆಯೂ ತ್ರಿವಳಿ ತಲಾಖ್ ವಿರುದ್ಧದ ಮಸೂದೆಯನ್ನು ಕಾನೂನಾಗಿ ಮಾಡಲಾಗಿದೆ ಎಂದು ನಖ್ವಿ ಹೇಳಿದ್ದಾರೆ.

11 ಪೊಲೀಸರಿಗೆ ಜೀವಾವಧಿ ಶಿಕ್ಷೆ

ಮಥುರಾ, ಜು. 22: 35 ವರ್ಷಗಳ ಹಿಂದಿನ ರಾಜಸ್ಥಾನದ ಭರತ್‍ಪುರ ಎಸ್ಟೇಟ್‍ನ ರಾಜಾ ಮನ್ ಸಿಂಗ್ ನಕಲಿ ಎನ್‍ಕೌಂಟರ್‍ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 14 ಆರೋಪಿಗಳ ಪೈಕಿ ತಪ್ಪಿತಸ್ಥ 11 ಪೊಲೀಸರಿಗೆ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಸಾಧನಾ ರಾಣಿ ಠಾಕೂರ್ ಅವರು ತಪ್ಪಿತಸ್ಥರಿಗೆ ಶಿಕ್ಷೆಯ ಪ್ರಮಾಣವನ್ನು ಬುಧವಾರ ಪ್ರಕಟಿಸಿದರು. ಮಂಗಳವಾರ ನ್ಯಾಯಾಧೀಶರು ಪ್ರಕರಣದಲ್ಲಿ ನಾಲ್ವರು ಖುಲಾಸೆಗೊಳಿಸಿ, 11 ಪೊಲೀಸರು ತಪ್ಪಿತಸ್ಥರೆಂದು ತೀರ್ಪು ನೀಡಿದ್ದರು. ಆದರೆ ಶಿಕ್ಷಣಯ ಪ್ರಮಾಣ ಇಂದಿಗೆ ಕಾಯ್ದಿರಿಸಿದ್ದರು. 1985ರ ಫೆಬ್ರವರಿ 21 ರಂದು ರಾಜಾ ಮನ್ ಸಿಂಗ್ ಮತ್ತು ಇತರ ಇಬ್ಬರು ಪೊಲೀಸರು ಎನ್ಕೌಂಟರ್‍ನಲ್ಲಿ ಹತ್ಯೆಯಾಗಿದ್ದರು. ರಾಜಾ ಮನ್ ಸಿಂಗ್ ಅವರ ಪುತ್ರಿ ದೀಪಾ ಸಿಂಗ್ ಮತ್ತು ಅವರ ಪತಿ ವಿಜಯ್ ಸಿಂಗ್ ಅವರು ಪೊಲೀಸರ ವಿರುದ್ಧ ಹತ್ಯೆ ಆರೋಪ ಮಾಡಿ, ರಾಜಸ್ಥಾನದ ಡೀಗ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದರು.

ರಾಜ್ಯಸಭಾ ಸದಸ್ಯರಿಂದ ಪ್ರಮಾಣವಚನ

ನವದೆಹಲಿ, ಜು. 22: ರಾಜ್ಯಸಭೆಗೆ ಹೊಸದಾಗಿ ಚುನಾಯಿತರಾದ 61 ಸದಸ್ಯರ ಪೈಕಿ 45 ಸದಸ್ಯರು ಬುಧವಾರ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ನೂತನ ಸದಸ್ಯರಿಗೆ ರಾಜ್ಯಸಭಾಧ್ಯಕ್ಷ, ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಮುಖ್ಯವಾಗಿ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್, ದೀಪೇಂದರ್ ಎಸ್. ಹೂಡಾ ಮತ್ತು ಕೆ.ಟಿ.ಎಸ್. ತುಳಸಿ ಮತ್ತಿತರರಿದ್ದು, 45 ಸದಸ್ಯರ ಪೈಕಿ 36 ಸದಸ್ಯರು ರಾಜ್ಯಸಭೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಕಲಾಪಕ್ಕೆ ಯಾವುದೇ ಅಡ್ಡಿಯಾಗದಂತೆ ನಡೆದುಕೊಳ್ಳಬೇಕು ಮತ್ತು ಸಂಸದರಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಎತ್ತಿಹಿಡಿಯಬೇಕು ಎಂದು ನೂತನ ಸದಸ್ಯರಿಗೆ ವೆಂಕಯ್ಯ ನಾಯ್ಡು ಕಿವಿಮಾತು ಹೇಳಿದ್ದಾರೆ.

ಪತ್ರಕರ್ತ ವಿಕ್ರಮ್ ಜೋಶಿ ಸಾವು

ನವದೆಹಲಿ, ಜು. 22: ದುಷ್ಕರ್ಮಿಗಳಿಂದ ಹಲ್ಲೆಗೀಡಾಗಿದ್ದ ಘಾಜಿಯಾಬಾದ್ ಮೂಲದ ಪತ್ರಕರ್ತ ವಿಕ್ರಮ್ ಜೋಶಿ ಸಾವನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಆಡಳಿತಾರೂಢ ಉತ್ತರಪ್ರದೇಶ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರವಾಗಿ ಕಿಡಿಕಾರಿದ್ದು, ಉತ್ತರಪ್ರದೇಶ ಸರ್ಕಾರವನ್ನು ಗೂಂಡಾ ರಾಜ್ಯವೆಂದು ಕಿಡಿಕಾರಿದ್ದಾರೆ. ಪತ್ರಕರ್ತನ ಸಾವು ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್‍ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು, ಪತ್ರಕರ್ತನ ಕೊಲೆ ಮತ್ತು ಸಂಬಂಧಿಯ ಮೇಲಿನ ಹಲ್ಲೆ ಪ್ರಕರಣದ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ಅಲ್ಲದೆ ಯೋಗಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಅವರು ರಾಮರಾಜ್ಯದ ಮಾತುಕೊಟ್ಟಿದ್ದ ಬಿಜೆಪಿ ಸರ್ಕಾರ ಗೂಂಡಾ ರಾಜ್ಯವನ್ನು ನಿರ್ಮಾಣ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ರಂದೀಪ್ ಸುರ್ಜೇವಾಲಾ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಭರವಸೆ ನೀಡಿದ್ದ ಅದೇ ರಾಮ ರಾಜ್ಯವೇ ಇದು ಸಂಪೂರ್ಣ ಗೂಂಡಾರಾಜ್. ಯುಪಿಯಲ್ಲಿ ಪತ್ರಕರ್ತರಾಗಲೀ, ಕಾನೂನನ್ನು ರಕ್ಷಿಸುವವರಾಗಲೀ ಸುರಕ್ಷಿತವಲ್ಲ, ಇವರಿಂದ ಸಾಮಾನ್ಯ ಜನರು ನ್ಯಾಯವನ್ನು ಹೇಗೆ ನಿರೀಕ್ಷಿಸಬಹುದು ಎಂದು ಟ್ವೀಟ್ ಮಾಡಿದ್ದಾರೆ.

ತಾಲಿಬಾನ್ ಉಗ್ರರನ್ನು ಕೊಂದ ಬಾಲಕಿ

ಕಾಬೂಲ್, ಜು. 22: ತನ್ನ ಹೆತ್ತವರನ್ನು ಕಣ್ಣೆದುರೇ ಮನೆಯಿಂದ ಎಳೆದೊಯ್ದು ಕೊಲೆ ಮಾಡಿದ ಇಬ್ಬರು ತಾಲಿಬಾನ್ ಉಗ್ರರನ್ನು 15 ವರ್ಷ ಪ್ರಾಯದ ಖಮರ್ ಗುಲ್ ಎಂಬ ಬಾಲಕಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಶ್ಚಿಮ ಘೋರ್ ಪ್ರಾಂತ್ಯದಲ್ಲಿ ನಡೆದಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಂತ್ಯದ ತೈವಾರಾ ಜಿಲ್ಲೆಯಲ್ಲಿ ತನ್ನ ಸಹೋದರ ಮತ್ತು ತಂದೆ-ತಾಯಿಯನ್ನು ನನ್ನ ಕಣ್ಣೆದುರೇ ತಾಲಿಬಾನಿಗಳು ಹತ್ಯೆ ಮಾಡಿದ್ದರು. ಇದಕ್ಕೆ ಸೇಡು ತೀರಿಸಿಕೊಂಡಿದ್ದೇನೆ ಎಂದು ಖಮರ್ ಗುಲ್ ಹೇಳಿದ್ದಾಳೆ. ಖಮರ್ ಗುಲ್ ತನ್ನ ತಂದೆಯ ಎಕೆ-47 ರೈಫಲ್ ತೆಗೆದುಕೊಂಡು ತನ್ನ ಹೆತ್ತವರನ್ನು ಗುಂಡಿಕ್ಕಿ ಕೊಂದ ಇಬ್ಬರು ತಾಲಿಬಾನಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾಳೆ.