ಕಣಿವೆ, ಜು. 22: ಮೊದಲೇ ಕೊರೊನಾದಿಂದಾಗಿ ಜನ ಕಂಗೆಟ್ಟು ಹೋಗಿರುವ ಈ ಸಂದರ್ಭದಲ್ಲಿ ಇಲ್ಲಿನ ಕಾವೇರಿ ನದಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಕಸ ತ್ಯಾಜ್ಯಗಳಿಂದ ತುಂಬಿ ಹೋಗಿದೆ. ಇದು ಇನ್ನೆಲ್ಲೋ ದೂರದ ಊರಿನಲ್ಲಿ ಕಾಣುವ ಸ್ಥಿತಿಯಲ್ಲ. ಕೊಡಗಿನ ಹೆಬ್ಬಾಗಿಲು ಪ್ರಮುಖ ವಾಣಿಜ್ಯ ನಗರಿ ಕುಶಾಲನಗರದ ಸೆರಗಿನಲ್ಲಿರುವ ಮುಳ್ಳುಸೋಗೆ ಗ್ರಾಮದಲ್ಲಿನ ಸ್ಥಿತಿ. ಸನಿಹದಲ್ಲೇ ಊರಿನ ಆಡಳಿತ ಸೌಧವಾದ ಪಂಚಾಯಿತಿ ಕಚೇರಿ ಇದೆ. ಆದರೆ ಪಂಚಾಯತಿ ಅಧಿಕಾರಿಗಳು ಮಾತ್ರ ಇಲ್ಲಿನ ಅವ್ಯವಸ್ಥೆಯನ್ನು ಕಂಡರೂ ಕಾಣದಂತೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯ ನಿವಾಸಿಗಳು ದೂರುತ್ತಿದ್ದಾರೆ.ಕುಶಾಲನಗರ - ಹಾಸನ ರಾಜ್ಯ ಹೆದ್ದಾರಿಯಂಚಿನಲ್ಲೇ ಇರುವ ಈ ಗ್ರಾಮದ ಕಾವೇರಿ ನದಿಗೆ ತೆರಳುವ ರಸ್ತೆಯಲ್ಲಿ ಊರಿನ ಕಸ ತ್ಯಾಜ್ಯವನ್ನು ತಂದು

(ಮೊದಲ ಪುಟದಿಂದ) ಬಿಸಾಕಿರುವುದರಿಂದ ಇಲ್ಲಿ ಸಂಚರಿಸುವ ಪಾದಚಾರಿಗಳು ಕೊರೊನಾ ಮುಖ ಗವಸು ಜೊತೆಗೆ ಮತ್ತೆರಡು ಮುಖ ಗವಸುಗಳನ್ನು ಧರಿಸಿದರೂ ಕೂಡ ಇಲ್ಲಿ ಬೀರುತ್ತಿರುವ ದುರ್ವಾಸನೆ ವಾಂತಿ ತರಿಸುತ್ತಿದೆ. ಜೊತೆಗೆ ಇದೇ ರಸ್ತೆಯ ಕಾವೇರಿ ನದಿ ದಂಡೆಯಲ್ಲಿ ಪ್ರಸಿದ್ಧ ಧಾರ್ಮಿಕ ಕೇಂದ್ರ ತಪೆÇೀವನವಿದೆ. ಅಲ್ಲಿಗೂ ಪಾದ್ರಿಗಳು ಹಾಗೂ ತರಬೇತಿ ನಿರತ ಪಾದ್ರಿಗಳು ಸಂಚರಿಸುತ್ತಾರೆ. ಜೊತೆಗೆ ಕಾವೇರಿ ನದಿಗೆ ಬಟ್ಟೆ ತೊಳೆಯಲು ಧಾವಿಸುವ ಮಹಿಳೆಯರು ಹಾಗೂ ಮಕ್ಕಳಂತು ಇಲ್ಲಿ ತಿರುಗಾಡಲಾರದ ದುಸ್ಥಿತಿ ಎದುರಾಗಿದೆ.

ಇದೇ ಅಶುಚಿತ್ವದ ಸ್ಥಳದ ಆಸುಪಾಸಿನಲ್ಲಿ ಇತ್ತೀಚೆಗೆ ತೆರೆದುಕೊಂಡಿರುವ ತರಕಾರಿ-ಹಣ್ಣು ಮಳಿಗೆಗಳು, ಬೇಕರಿಗಳು ಕೂಡ ಇದ್ದು, ಈ ಕಸದ ಮೇಲೆ ಕೂರುವ ಮಾರಕ ನೊಣಗಳು ಅಲ್ಲಿನ ತರಕಾರಿ ಹಾಗೂ ಹಣ್ಣುಗಳ ಮೇಲೆ ಕುಳಿತುಕೊಳ್ಳುತ್ತವೆ. ಇದ್ಯಾವುದನ್ನು ಅರಿಯದ ಮುಗ್ಧ ಜನ ಅಲ್ಲಿಯೇ ತರಕಾರಿ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ. ಆದರೆ ಅವರಿಗೆ ಯಾವುದಾದರೂ ಸಾಂಕ್ರಾಮಿಕ ರೋಗಗಳು ಬಾಧಿಸಿದರೆ ಪಂಚಾಯಿತಿ ಅಧಿಕಾರಿಗಳು ಹೊಣೆಯಾಗಬೇಕಲ್ಲವೇ ಅಥವಾ ಈ ಅವ್ಯವಸ್ಥೆ ಹಾಗೂ ಅಸ್ವಚ್ಛತೆ ಸರಿ ಮಾಡಲು ಪಂಚಾಯಿತಿಗೆ ಸೂಕ್ತ ನಿರ್ದೇಶನ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿರುವ ಆರೋಗ್ಯಾಧಿಕಾರಿಗಳು ಹೊಣೆಯಾಗಬೇಕಲ್ಲವೇ?

ಪಂಚಾಯತಿ ಆಡಳಿತ ಈಗಾಗಲೆ ಆ ತ್ಯಾಜ್ಯ ತುಂಬಿದ ರಾಶಿಗಳ ಮಧ್ಯೆ ಎಚ್ಚರಿಕೆಯ ಫಲಕವೊಂದನ್ನು ಹಾಕಿ, ಇಲ್ಲಿ ಕಸ ಹಾಕುವುದನ್ನು ನಿಷೇಧಿಸಲಾಗಿದೆ. ಕಸ ಸುರಿಯುವವರ ಮೇಲೆ ಕ್ರಮಕೈಗೊಳ್ಳಲಾಗುತ್ತದೆ. ಇಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂಬ ಬೂಟಾಟಿಕೆಯ ನಾಮಫಲಕಕ್ಕೆ ಯಾರಿಂದಲೂ ಕಿಮ್ಮತ್ತೇ ಸಿಗುತ್ತಿಲ್ಲ. ಪಂಚಾಯಿತಿ ಎಚ್ಚರಿಕೆ ಉಲ್ಲಂಘಿಸಿ ಕಸ ಸುರಿದವರಿಗೆ ಸ್ಥಳದಲ್ಲಿ ದಂಡ ವಿಧಿಸಿದ್ದರೆ ಯಾರಾದರೂ ಮತ್ತೆ ಮತ್ತೆ ಸುರಿಯುತ್ತಿದ್ದರೇ? ಪ್ರಯೋಜನಕ್ಕೆ ಬಾರದ ನಾಮಫಲಕ ಇಲ್ಲಿ ಅಗತ್ಯ ಹಾಗೂ ಅವಶ್ಯ ಇದೆಯೇ? ಎಂಬದು ಇಲ್ಲಿನ ಕೆಲವರ ಪ್ರಶ್ನೆ.

ಕೂಡಲೇ ಪಂಚಾಯಿತಿ ಆಡಳಿತಾಧಿಕಾರಿಗಳು ಇತ್ತ ಗಮನಿಸಬೇಕು. ಇಲ್ಲಿ ಸುರಿದ ಕಸದಿಂದ ಗಬ್ಬೆದ್ದು ನಾರುತ್ತಿರುವ ರಸ್ತೆಯ ಮಾರ್ಗವನ್ನು ಸ್ವಚ್ಛಗೊಳಿಸಬೇಕು. ಜೊತೆಗೆ ಇದೇ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತ ಪಾರ್ಥೇನಿಯಂ ಗಿಡಗಳನ್ನು ತೆರವುಗೊಳಿಸಿ ಸಾರ್ವಜನಿಕರು ನಿಶ್ಚಿಂತೆ ಹಾಗೂ ನೆಮ್ಮದಿಯಿಂದ ತಿರುಗಾಡುವಂತಹ ಸ್ಥಿತಿಯನ್ನು ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

-ಕೆ.ಎಸ್. ಮೂರ್ತಿ