ಮಡಿಕೇರಿ, ಜು. 21: ಪಾಶ್ರ್ವುವಾಯುವಿಗೆ ತುತ್ತಾಗಿ ಶ್ರೀಮಂಗಲ ಕಡೆಯಿಂದ ಆಗಮಿಸಿ ವೀರಾಜಪೇಟೆ ತಾಲೂಕು ಮೈದಾನದಲ್ಲಿ ಸೇರಿಕೊಂಡು ಬಳಲುತ್ತಿದ್ದ ವ್ಯಕ್ತಿಯೋರ್ವರನ್ನು ಜಯಭಾರತ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಸ್ವಂತ ರಾಜ್ಯವಾದ ಕೇರಳಕ್ಕೆ ಸೇರಿಸಿದ್ದಾರೆ.

ಇವರನ್ನು ಗಮನಿಸಿದ ಸ್ಥಳೀಯರಾದ ಶಾಹುಲ್ ಹಮೀದ್ ಹಾಗೂ ಕ್ಯಾಂಟೀನ್ ಮಾಲೀಕರಾದ ರಾಣಿ ಇವರುಗಳು 15 ದಿನಗಳಿಂದ ಆಹಾರವನ್ನು ನೀಡಿ, ವಿಷಯವನ್ನು ಜಯ ಭಾರತ ರಕ್ಷಣಾ ವೇದಿಕೆಯ ಕಾರ್ಯಕರ್ತರಿಗೆ ತಿಳಿಸಿದ್ದರು.

ಅದರಂತೆ ಜಯ ಭಾರತ ರಕ್ಷಣಾ ವೇದಿಕೆಯ ಕಾರ್ಯಕರ್ತ ರಾದ ಮನು ಜೋಯಪ್ಪ, ಮೂಕಚಂಡ ಕಿರಣ, ದಿವ್ಯ ಸೋಮಯ್ಯ, ಚಪ್ಪಂಡ ಸೂರಿ, ಮನೋಹರ್, ಖಲೀಲ್, ನಿಯಾಝ್, ಪಟ್ಟಡ ವಿಕ್ರಮ್, ಪಯ್ಯಟ್ಟೀರ ಪ್ರಧಾನ್ ಇವರುಗಳು ಸ್ಪಂದಿಸಿ, ವೀರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ - 19 ಪರೀಕ್ಷೆಯನ್ನು ನಡೆಸಿ, ಪೊಲೀಸ್ ಇಲಾಖಾ ಮಾರ್ಗದರ್ಶನದಂತೆ ಆಂ್ಯಬುಲೆನ್ಸ್ ಮುಖಾಂತರ ವೀರಾಜಪೇಟೆಯಿಂದ ಕೇರಳದ ಪಾಲೆಕಾಡು ಜಿಲ್ಲೆಯಲ್ಲಿರುವ ಮನ್ನಾರ್‍ಕಾಡ್‍ನಲ್ಲಿರುವ ರೋಗಿಯ ಮನೆಗೆ ಕಳುಹಿಸಿಕೊಟ್ಟಿದ್ದಾರೆ.