ಕುಶಾಲನಗರ, ಜು. 21: ಕುಶಾಲನಗರ ಪಟ್ಟಣದಲ್ಲಿ ಆತಂಕ ಸೃಷ್ಠಿಸಿದ್ದ ಕೊರೊನಾ ಸೋಂಕು ಕಳೆದ ಒಂದು ವಾರದಿಂದ ಯಾವುದೇ ಹೊಸ ಪ್ರಕರಣಗಳು ಕಂಡುಬಾರದಿರುವುದು ಸ್ಥಳೀಯ ನಾಗರಿಕರು ನಿಟ್ಟುಸಿರು ಬಿಡುವಂತಾಗಿದೆ. ಜೂನ್ ತಿಂಗಳ ಅಂತ್ಯದಲ್ಲಿ ಕುಶಾಲನಗರ ಪಟ್ಟಣದ ಹೃದಯ ಭಾಗದ ಔಷಧಿ ವ್ಯಾಪಾರಿಯೊಬ್ಬರು ಸೋಂಕಿಗೆ ತುತ್ತಾಗಿ ಇಡೀ ರಥಬೀದಿ ಉದ್ದಕ್ಕೂ ನಿರ್ಬಂಧಿತ ವಲಯವಾಗುವುದರೊಂದಿಗೆ ಎರಡು ವಾರಗಳ ಕಾಲ ಸಂಪೂರ್ಣ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಇದರ ಬೆನ್ನಲ್ಲೇ ಪಟ್ಟಣದ ದಂಡಿನಪೇಟೆಯಲ್ಲಿ ಬೆಂಗಳೂರಿನಿಂದ ಬಂದ ವ್ಯಕ್ತಿಯೊಬ್ಬ ತನ್ನ ಸಹೋದರನ ಮನೆಯಲ್ಲಿ ಸೋಂಕಿಗೆ ತುತ್ತಾಗಿ ಮೃತಪಟ್ಟಿರುವ ಘಟನೆಯೂ ನಡೆಯಿತು. ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ 20ಕ್ಕೂ ಅಧಿಕ ಸೋಂಕು ಪ್ರಕರಣಗಳು ಪತ್ತೆಯಾದರೆ ನೆರೆಯ ಗ್ರಾಮಗಳಲ್ಲಿ ಅಲ್ಲಲ್ಲಿ ಸೋಂಕಿತ ಪ್ರಕರಣಗಳು ದಾಖಲಾಗುವುದರೊಂದಿಗೆ 10ಕ್ಕೂ ಅಧಿಕ ನಿರ್ಬಂಧಿತ ವಲಯಗಳನ್ನು ಘೋಷಣೆ ಮಾಡಲಾಯಿತು.

ಈ ಎರಡು ಘಟನೆಗಳ ಬೆನ್ನಲ್ಲೇ ಪಟ್ಟಣದ ಬಡಾವಣೆಗಳಲ್ಲಿ ಪ್ರಾಥಮಿಕ ಸಂಪರ್ಕದೊಂದಿಗೆ ಹಲವು ಸೋಂಕಿತ ಪ್ರಕರಣಗಳು ದಾಖಲೆಯಾಗುವುದರೊಂದಿಗೆ ಪಟ್ಟಣ ವ್ಯಾಪ್ತಿಯ ಜನತೆ ಭಯಭೀತಿಗೆ ಒಳಗಾದ ಪ್ರಮೇಯವೂ ಸೃಷ್ಠಿಯಾಯಿತು. ಈ ನಡುವೆ ಅಲ್ಲಲ್ಲಿ ಸೀಲ್‍ಡೌನ್ ಘೋಷಣೆ ಮತ್ತಷ್ಟು ಆತಂಕಕ್ಕೆ ದೂಡಿದಂತಾಗಿ ಸ್ಥಳೀಯ ಚೇಂಬರ್ ಆಫ್ ಕಾಮರ್ಸ್ ಸೋಂಕು ಸಮುದಾಯಕ್ಕೆ ತಗುಲದಂತೆ ಮುನ್ನೆಚ್ಚರಿಕೆ ಸಲುವಾಗಿ ಒಂದು ವಾರಗಳ ಕಾಲ ಪಟ್ಟಣದ ಅಂಗಡಿ ಮುಂಗಟ್ಟುಗಳನ್ನು ಕೂಡ ಬಂದ್ ಮಾಡುವ ನಿರ್ಣಯ ಕೈಗೊಂಡಿತ್ತು.

ಈ ಮೂಲಕ ಜನಸಂಪರ್ಕ ಕಡಿಮೆಯಾಗುವುದರೊಂದಿಗೆ ಪಟ್ಟಣದ ಜನರು ಮನೆಯಲ್ಲೇ ಇರುವ ಸ್ಥಿತಿ ಉಂಟಾದ ಬೆನ್ನಲ್ಲೇ ಸೋಂಕಿತ ಪ್ರಕರಣಗಳು ಕೂಡ ಕ್ಷೀಣಗೊಂಡಿರುವುದು ಆಶಾದಾಯಕ ವಿಚಾರ.

ಜನರಲ್ಲಿ ಕೊರೊನಾ ಸೋಂಕಿನ ಬಗ್ಗೆ ಅರಿವು ಜಾಗೃತಿ ಮೂಡಿದಲ್ಲಿ ಸೋಂಕಿನಿಂದ ರಕ್ಷಣೆ ಪಡೆಯಲು ಸಾಧ್ಯ ಎನ್ನುವುದು ಅವರ ಅಭಿಪ್ರಾಯವಾಗಿದೆ. ಈ ನಡುವೆ ಅನಾವಶ್ಯಕವಾಗಿ ಓಡಾಡುತ್ತಿದ್ದ ವಾಹನಗಳನ್ನು ಪತ್ತೆ ಮಾಡಿ ಕ್ರಮಕೈಗೊಳ್ಳುವಲ್ಲಿ ಕೂಡ ಕುಶಾಲನಗರ ಪೊಲೀಸರು ಬಹುತೇಕ ಯಶಸ್ವಿಯಾಗಿದ್ದಾರೆ. ಜಿಲ್ಲಾಡಳಿತ ಲಾಕ್‍ಡೌನ್ ಘೋಷಣೆ ಮಾಡಿದ ಶನಿವಾರ, ಭಾನುವಾರವಂತೂ ಕುಶಾಲನಗರ ಪಟ್ಟಣ ಸಂಪೂರ್ಣ ಬಂದ್ ಆಗುವುದರೊಂದಿಗೆ ಜನಜೀವನ ಸ್ತಬ್ಧಗೊಂಡಿತ್ತು.

ಈ ನಡುವೆ ಕೋವಿಡ್ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದ ಕುಶಾಲನಗರ ಇಬ್ಬರು ವ್ಯಕ್ತಿಗಳು ಗುಣಮುಖರಾಗಿ ಮನೆಗೆ ಹಿಂತಿರುಗಿದ್ದು ಈ ಮೂಲಕ ಬಹುತೇಕರ ಆತಂಕ ಕೂಡ ದೂರವಾಗಲು ಕಾರಣವಾಗಿದೆ. ಯಾವುದೇ ರೀತಿಯ ಭಯವಿಲ್ಲದೆ ಸೋಂಕಿತ ವ್ಯಕ್ತಿಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು. ಆ ಮೂಲಕ ಸಮುದಾಯಕ್ಕೆ ಸೋಂಕು ಹರಡದಂತೆ ಎಚ್ಚರವಹಿಸಬೇಕೆನ್ನುವುದು ಗುಣಮುಖರಾಗಿರುವ ವ್ಯಕ್ತಿಗಳ ಪ್ರತಿಕ್ರಿಯೆಯಾಗಿದೆ.

ಸೋಂಕು ತಗುಲಿದಲ್ಲಿ ಯಾವುದೇ ರೀತಿಯ ಆತಂಕ ಅಥವಾ ಭಯಪಡುವ ಅವಶ್ಯಕತೆಯಿಲ್ಲ ಎಂದು ಅವರು ‘ಶಕ್ತಿ’ ಮೂಲಕ ಜನರಿಗೆ ಧೈರ್ಯ ತುಂಬಿದ್ದಾರೆ. - ಚಂದ್ರಮೋಹನ್