ಮಡಿಕೇರಿ, ಜು. 21: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಮಳೆಗಾಲ ತುಸು ವಿಭಿನ್ನ ರೀತಿಯಲ್ಲಿದ್ದು, ಸದ್ಯದ ಮಟ್ಟಿಗೆ ಹೆಚ್ಚು ಅಬ್ಬರವಿಲ್ಲದಂತೆ ಕಂಡುಬರುತ್ತಿದೆ. 2018 ಹಾಗೂ 2019 ರ ಮಳೆಗಾಲ ಕೊಡಗು ಜಿಲ್ಲೆಯಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದ್ದರಿಂದ ಜನತೆಗೆ ಮಳೆಗಾಲದ ಆಗಮನವೆಂದರೆ ಆತಂಕ ಸೃಷ್ಟಿಯಾಗುವಂತಾಗಿತ್ತು. ಆದರೆ 2020 ರ ವರ್ಷದ ಮಳೆಗಾಲದ ಈತನಕದ ಪರಿಸ್ಥಿತಿ ಜನತೆಗೆ ಒಂದಷ್ಟು ನಿರಾಳತೆ ತಂದಿದೆ. ಮಳೆಗಾಲದ ವಾತಾವರಣವೇ ಮುಂದುವರಿಯುತ್ತಿದೆಯಾದರೂ ಕೆಲವು ಸಂದರ್ಭಗಳಲ್ಲಿ ಮಾತ್ರ ಬಿರುಸಿನ ಮಳೆಯಾಗಿದೆ. ಇದನ್ನು ಹೊರತುಪಡಿಸಿದರೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬಿಸಿಲಿನ ವಾತಾವರಣವೂ ಕಂಡುಬರುತ್ತಿರುವುದು ಪ್ರಸ್ತುತ ಚಿತ್ರಣವಾಗಿದೆ.ಜಿಲ್ಲೆ ಕೃಷಿ ಪ್ರಧಾನವಾಗಿದ್ದು, ವಾಡಿಕೆಯಂತೆ ಅಗತ್ಯ ಮಳೆಯಾಗಬೇಕೆಂಬದು ಅನುಭವಿಗಳ ಅಭಿಪ್ರಾಯವಾಗಿದೆ. ಸಣ್ಣ ಪ್ರಮಾಣದ ಮಳೆ - ಬಿಸಿಲಿನ ವಾತಾವರಣದ ನಡುವೆ ಇದೀಗ ಅಲ್ಲಲ್ಲಿ ಕೃಷಿ ಕಾರ್ಯಗಳು ಭರದಿಂದ ಸಾಗುತ್ತಿದೆ. ಇನ್ನು ಹೆಚ್ಚಿನ ನೀರನ್ನು ಅವಲಂಬಿಸುವಂತಹ ಪ್ರದೇಶಗಳಲ್ಲಿ ಭತ್ತದ ಗದ್ದೆಗಳಲ್ಲಿ ಸರಿಯಾಗಿ ನೀರು ತುಂಬದೆ ಇದು ಕೃಷಿ ಕೆಲಸಕ್ಕೆ ವಿಳಂಬವಾಗುತ್ತಿದೆ. ಏನೇ ಆದರೂ ವಾತಾವರಣದಲ್ಲಾಗುವ ಬದಲಾವಣೆಗಳನ್ನು ಯಾರೂ ಇದು ಹೀಗೆಯೇ ಮುಂದುವರಿಯಲಿದೆ ಎಂದು ಇತ್ತೀಚಿನ ವರ್ಷಗಳಲ್ಲಿ ಊಹಿಸಲು ಅಸಾಧ್ಯವೆಂಬಂತಾಗಿದೆ.
ಕಳೆದ ವರ್ಷವೂ ಆರಂಭದಲ್ಲಿ ಮಳೆ ಕಡಿಮೆ ಇತ್ತಾದರೂ ಜುಲೈ ಅಂತ್ಯದಿಂದ ಸೆಪ್ಟೆಂಬರ್ ನಡುಭಾಗದ ತನಕ ಸುರಿದ ಧಾರಾಕಾರ ಮಳೆ ಜಿಲ್ಲೆಯನ್ನು ಕಂಗೆಡಿಸಿತ್ತು ಎಂಬದನ್ನು ಯಾರೂ ಮರೆಯುವಂತಿಲ್ಲ. ಇದಲ್ಲದೆ ಜಿಲ್ಲೆಯ ಕೆಲವು ಪ್ರದೇಶ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಬೇಸಿಗೆ ಅವಧಿಯಲ್ಲಿ ಹೆಚ್ಚಿನ ಮಳೆಯಾಗಿದ್ದು, ಜಿಲ್ಲೆಯ ಪ್ರಮುಖ ಬೆಳೆಯಾದ ಕಾಫಿ ಫಸಲು ಕಾಯಿಬಿಟ್ಟಿದ್ದು ಕೆಲವೆಡೆ ಈಗಾಗಲೇ ಕಾಫಿ ಉದುರುವಿಕೆ ಕಂಡುಬರುತ್ತಿರುವ ಬಗ್ಗೆಯೂ ವರದಿಯಾಗಿದೆ.
ಅಂಕಿಅಂಶಗಳ ಪ್ರಕಾರ ಪ್ರಸ್ತುತ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿಗೆ ಮಳೆಯಾಗಿರುವ ದಾಖಲೆ ಕಂಡು ಬರುತ್ತದೆಯಾದರೂ ಬೇಸಿಗೆ ಆರಂಭದ ಸಂದರ್ಭದಲ್ಲಿ ಮಳೆ ಹೆಚ್ಚು ಬಿದ್ದಿರುವುದು ಇದಕ್ಕೆ ಕಾರಣವಾಗಿದೆ. ಕಳೆದ ವಾರದಲ್ಲಿ ಒಂದೆರಡು ದಿನಗಳ ಕಾಲ ಹಲವೆಡೆ ಧಾರಾಕಾರ ಮಳೆ ಯಾಗಿದ್ದು, ನದಿ-ತೊರೆಗಳಲ್ಲಿ ನೀರಿನ ಹರಿವು ಹೆಚ್ಚಾಗಿತ್ತಲ್ಲದೆ ಹಾರಂಗಿ ಜಲಾಶಯದಿಂದಲೂ ನೀರನ್ನು ಹರಿಯಬಿಡಲಾಗಿತ್ತು. ಆದರೆ ಮತ್ತೆ ವಾತಾವರಣದಲ್ಲಿ
(ಮೊದಲ ಪುಟದಿಂದ) ಬದಲಾವಣೆ ಕಂಡುಬಂದಿದ್ದು ಇದೀಗ ಬಿಸಿಲಿನ ಸನ್ನಿವೇಶ ಗೋಚರ ವಾಗುತ್ತಿದೆ.
ಮಳೆ ವಿವರ
ಪ್ರಸಕ್ತ ವರ್ಷ ಈತನಕ ಜಿಲ್ಲೆಯಲ್ಲಿ ಸರಾಸರಿ 28.17 ಇಂಚು ಮಳೆಯಾಗಿದ್ದರೆ ಕಳೆದ ವರ್ಷ ಈತನಕ 28.54 ಇಂಚು ಮಳೆ ಸುರಿದಿತ್ತು. ಮಡಿಕೇರಿ ತಾಲೂಕಿನಲ್ಲಿ ಜನವರಿಯಿಂದ ಈತನಕ 43.95 ಇಂಚು, ಕಳೆದ ವರ್ಷ 39.55 ಇಂಚು, ವೀರಾಜಪೇಟೆ ತಾಲೂಕಿನಲ್ಲಿ ಈ ಬಾರಿ 24.18 ಇಂಚು ಹಾಗೂ ಕಳೆದ ಬಾರಿ 29.30 ಇಂಚು ಸರಾಸರಿ ಮಳೆಯಾಗಿತ್ತು. ಸೋಮವಾರಪೇಟೆ ತಾಲೂಕಿಗೆ ಇದೇ ಅವಧಿಯಲ್ಲಿ 16.37 ಇಂಚು ಹಾಗೂ ಕಳೆದ ವರ್ಷ ಇದೇ ಅವಧಿಯಲ್ಲಿ 16.78 ಇಂಚು ಮಳೆಯಾಗಿತ್ತು.