ರಾಜ್ಯದಲ್ಲಿ ಇನ್ನು ಮುಂದೆ ಲಾಕ್ಡೌನ್ ಇರುವುದಿಲ್ಲ
ಬೆಂಗಳೂರು, ಜು. 21: ರಾಜ್ಯದಲ್ಲಿ ಇನ್ನು ಮುಂದೆ ಲಾಕ್ಡೌನ್ ಇರುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳವಾರ ಘೋಷಿಸಿದ್ದಾರೆ. ಲಾಕ್ಡೌನ್ ಒಂದೇ ಕೊರೊನಾ ಸೋಂಕು ನಿಯಂತ್ರಣಕ್ಕೆ ಪರಿಹಾರವಲ್ಲ ಎಂದಿದ್ದಾರೆ. ಪ್ರತಿಯೋರ್ವರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸುವಂತೆ ಕರೆ ನೀಡಿದ್ದಾರೆ. ರಾಜ್ಯದ ಸೋಂಕಿತರ ಪೈಕಿ ಶೇ. 80 ರಲ್ಲಿ ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಕೇವಲ 5 ರಷ್ಟು ಮಂದಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ಸೋಂಕು ತಗುಲಿದರೆ ಜೀವಭಯ ಬೇಡ. ಗುಣಮುಖರಾಗುತ್ತಿರುವವರ ಸಂಖ್ಯೆ ಸಾಕಷ್ಟು ಹೆಚ್ಚಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಸೋಂಕು ಪರೀಕ್ಷೆ ಕೈಗೊಳ್ಳಲಾಗುತ್ತದೆ. ಗಂಟಲು, ಮೂಗು ದ್ರವ ಪರೀಕ್ಷೆಗೆ ನೀಡಿದ 24 ಗಂಟೆಗಳಲ್ಲಿ ವ್ಯಕ್ತಿಯ ಮಾದರಿ ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗಿದೆ. ವಿಳಂಬ ಇರುವುದಿಲ್ಲ ಎಂದು ಮುಖ್ಯಮಂತ್ರಿ ನುಡಿದಿದ್ದಾರೆ. ಬೆಂಗಳೂರಿನಲ್ಲಿ ಬುಧವಾರದಿಂದ ಲಾಕ್ಡೌನ್ ತೆರವುಗೊಳಿಸಲಾಗುತ್ತಿದೆ ಎಂದು ಮಾಹಿತಿಯಿತ್ತಿದ್ದಾರೆ.
ಶ್ರೀ ಸುಗುಣೇಂದ್ರ ತೀರ್ಥರಿಗೆ ಪಾಸಿಟಿವ್
ಉಡುಪಿ, ಜು. 21: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಈ ಕುರಿತು ಮಾಹಿತಿ ದೃಢಪಡಿಸಿರುವ ಮಠದ ಮೂಲಗಳು ಸದ್ಯ ಸ್ವಾಮೀಜಿಗಳು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮಧ್ಯಪ್ರದೇಶ ರಾಜ್ಯಪಾಲ ನಿಧನ
ನವದೆಹಲಿ, ಜು. 21: ಮಧ್ಯಪ್ರದೇಶದ ರಾಜ್ಯಪಾಲ ಲಾಲ್ ಜಿ. ಟಂಡನ್ (85) ಉತ್ತರ ಪ್ರದೇಶದ ಲಕ್ನೋದಲ್ಲಿ ಮಂಗಳವಾರ ವಿಧಿವಶರಾದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ವಾರದ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಮರನಾಥ ಯಾತ್ರೆ ರದ್ದು
ನವದೆಹಲಿ, ಜು. 21: ಪ್ರಸಕ್ತ ಸನ್ನಿವೇಶವನ್ನು ಹಿನ್ನೆಲೆಯಾಗಿಟ್ಟುಕೊಂಡು, ಅಮರನಾಥಜಿ ದೇವಾಲಯ ಮಂಡಳಿಯು ಈ ವರ್ಷದ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಿದೆ. ಈ ಹಿನ್ನೆಲೆ 2020ರ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಿ ಮಂಡಳಿ ಆದೇಶ ಹೊರಡಿಸಿದೆ. ಯಾತ್ರೆ ರದ್ಧತಿಯನ್ನು ಘೋಷಿಸಲು ಮಂಡಳಿ ವಿಷಾದ ವ್ಯಕ್ತಪಡಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ರಾಜಭವನ ಹೇಳಿದೆ. ಧಾರ್ಮಿಕ ಭಾವನೆಗಳ ಘಾಸಿಯಾಗದಂತೆ ಮಂಡಳಿ ಬೆಳಿಗ್ಗೆ ಮತ್ತು ಸಂಜೆ ಆರತಿಯ ನೇರ ಪ್ರಸಾರ / ವರ್ಚುವಲ್ ದರ್ಶನವನ್ನು ಮುಂದುವರಿಸಲಿದೆ ಎಂದು ಅದು ಹೇಳಿದೆ. ಈ ಹಿಂದೆ ನಡೆಸಿದ್ದಂತೆಯೇ ಸಾಂಪ್ರದಾಯಿಕ ಆಚರಣೆಗಳನ್ನು ಕೈಗೊಳ್ಳಲಾಗುತ್ತದೆ. ಖಾದಿ ಮುಬಾರಕ್ ಅವರಿಗೆ ಸರ್ಕಾರದಿಂದ ಅನುಕೂಲವಾಗಲಿದೆ ಎಂದು ರಾಜಭವನ ಹೇಳಿದೆ.
ಪೊಲೀಸರಿಗೆ ನೀತಿ ಸಂಹಿತೆ ಜಾರಿ
ಅಹಮದಾಬಾದ್, ಜು. 21: ಡಿಜಿಪಿ ಶಿವಾನಂದ್ ಝಾ ಹೊರಡಿಸಿದ ಆದೇಶದನ್ವಯ ಗುಜರಾತ್ನ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಯಾರೂ ಸಾಮಾಜಿಕ ತಾಣದಲ್ಲಿ ತಮ್ಮ ರಾಜಕೀಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಾರದು ಅಥವಾ ಯಾವುದೇ ಸರ್ಕಾರಿ ವಿರೋಧಿ ಬರಹ ಪ್ರಕಟಿಸಬಾರದು ಎಂದು ನಿರ್ದೇಶಿಸಲಾಗಿದೆ. ಇದು ದೇಶದ ಮೊಟ್ಟ ಮೊದಲ ಸಾಮಾಜಿಕ ತಾಣಗಳ ಮೇಲಿನ ನೀತಿ ಸಂಹಿತೆ ಎಂದು ಹೇಳಲಾಗಿದೆ. ರಾಜ್ಯದ ಪೊಲೀಸ್ ಸಿಬ್ಬಂದಿಯ ವೇತನ ಹೆಚ್ಚಳಕ್ಕಾಗಿ ಆನ್ಲೈನ್ ಅಭಿಯಾನ ಪ್ರಾರಂಭವಾದ ನಂತರ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಇದು ಫೇಸ್ಬುಕ್ ಮತ್ತು ಟ್ವಿಟರ್ನಂತಹ ವೇದಿಕೆಗಳಲ್ಲಿ ಭಾರಿ ಪ್ರತಿಕ್ರಿಯೆಗಳನ್ನು ಪಡೆದಿದೆ. ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಪೊಲೀಸ್ ಸಿಬ್ಬಂದಿಗೆ ರಾಜ್ಯ ಸರ್ಕಾರದ ವಿರುದ್ಧ ಯಾವುದೇ ವಿಷಯಗಳನ್ನು ಮುದ್ರಿಸಲು ಅಥವಾ ಪ್ರಕಟಿಸಲು ನಿಷೇಧಿಸಲಾಗಿದ್ದರೂ, ಸಾಮಾಜಿಕ ಮಾಧ್ಯಮಗಳ ಬಳಕೆಗೆ ಸಂಬಂಧಿಸಿದಂತೆ ಇಂತಹ ವಿವರವಾದ ನೀತಿ ಸಂಹಿತೆಯನ್ನು ಅವರಿಗೆ ನೀಡಲಾಗುತ್ತಿರುವುದು ಇದೇ ಮೊದಲು.
ಗಡಿಯಲ್ಲಿ ಭಾರತ್ ಡ್ರೋನ್ ಬಳಕೆ
ನವದೆಹಲಿ, ಜು. 21: ಪೂರ್ವ ಲಡಾಖ್ನಲ್ಲಿನ ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ) ಬಳಿ ಚೀನಾ ಸೇನೆಯ ಚಲನವಲನದ ಮೇಲೆ ಕಣ್ಣಿಡಲು ಭಾರತೀಯ ಸೇನೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ನಿರ್ಮಾಣದ ಭಾರತ್ ಡ್ರೋನ್ಗಳನ್ನು ಬಳಸಿಕೊಳ್ಳುತ್ತಿದೆ. ಗಡಿಯಲ್ಲಿ ಚೀನಾ ಸೇನೆ ತಂಟೆ ಮಾಡುತ್ತಿರುವುದರಿಂದ ವಿವಾದಿತ ಪ್ರದೇಶಗಳಲ್ಲಿ ನಿಖರವಾದ ಕಣ್ಗಾವಲು ನಡೆಸಲು ಭಾರತೀಯ ಸೇನೆಗೆ ಡ್ರೋನ್ಗಳ ಅಗತ್ಯವಿತ್ತು. ಈ ಹಿನ್ನೆಲೆ ಡಿಆರ್ಡಿಒ ನಿರ್ಮಿಸಿದ್ದ ಡ್ರೋನ್ಗಳಿಗೆ ಭಾರತ್ ಎಂದು ಹೆಸರಿಡಲಾಗಿದ್ದು ಅವುಗಳನ್ನು ಸೇನೆಗೆ ಹಸ್ತಾಂತರಿಸಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ. ವಿಶ್ವದ ಅತ್ಯಂತ ಚುರುಕುಬುದ್ಧಿಯ ಮತ್ತು ಹಗುರ ಕಣ್ಗಾವಲು ಡ್ರೋನ್ಗಳ ಪಟ್ಟಿಗೆ ಭಾರತ್ ಸರಣಿಯ ಡ್ರೋನ್ಗಳನ್ನು ಸೇರಿಸಬಹುದಾಗಿದೆ. ಈ ಭಾರತ್ ಡ್ರೋನ್ ಸಣ್ಣ ಹಾಗೂ ಶಕ್ತಿಯುತವಾದ ಡ್ರೋನ್ ಆಗಿದ್ದು ಸ್ಥಳದಲ್ಲಿ ನಿಖರವಾಗಿ ಕಾರ್ಯ ನಿರ್ವಹಿಸಬಲ್ಲದು. ಮಿತ್ರರು ಹಾಗೂ ವೈರಿಗಳನ್ನು ಪತ್ತೆ ಹಚ್ಚಲು ಕೃತಕ ಬುದ್ದಿಮತ್ತೆಯನ್ನು ಅಳವಡಿಸಲಾಗಿದೆ. ಅದಕ್ಕೆ ಅನುಗುಣವಾಗಿ ಈ ಡ್ರೋನ್ ಕಾರ್ಯ ನಿರ್ವಹಿಸುತ್ತದೆ.
ತಾ. 27 ಕ್ಕೆ ಬರಲಿದೆ ರಫೇಲ್ ವಿಮಾನ
ನವದೆಹಲಿ, ಜು. 21: ಎಲ್ಒಸಿಯಲ್ಲಿ ಪಾಕಿಸ್ತಾನ ಮತ್ತು ಎಲ್ಎಸಿಯಲ್ಲಿ ಚೀನಾ ತಂಟೆಗಳೆರಡನ್ನೂ ಪರಿಣಾಮಕಾರಿಯಾಗಿ ನಿಭಾಯಿಸುತ್ತಿರುವ ಭಾರತೀಯ ಸೇನೆಗೆ ಮತ್ತೊಂದು ಆನೆ ಬಲ ದೊರೆತಿದ್ದು, ತಾ. 27 ರಂದು ಭಾರತಕ್ಕೆ ಮೊದಲ ರಫೇಲ್ ಯುದ್ಧ ವಿಮಾನ ಆಗಮಿಸಲಿದೆ. ಮೂಲಗಳ ಪ್ರಕಾರ ತಾ. 27 ರಂದು ಫ್ರಾನ್ಸ್ ನಿರ್ಮಿತ ಐದು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಲಿದ್ದು, ಫ್ರಾನ್ಸ್ನ ಇಸ್ಟ್ರೆಸ್ನಿಂದ ರಫೇಲ್ ಯುದ್ಧ ವಿಮಾನಗಳು ಟೇಕ್ ಆಫ್ ಆಗಲಿದೆ. ಫ್ರಾನ್ಸ್ನ ಟ್ಯಾಂಕರ್ ವಾಹಕದ ಮೂಲಕ ಭಾರತಕ್ಕೆ ಆಗಮಿಸುತ್ತಿವೆ. ಟ್ಯಾಂಕರ್ ವಾಹಕ ಪ್ರಯಾಣದ ನಡುವೆ ಯುಎಇಯ ಅಬುದಾಬಿಯ ಅಲ್ ಧಫ್ರಾ ಏರ್ ಬೇಸ್ನಲ್ಲಿ ಇಂಧನಕ್ಕಾಗಿ ಇಳಿಯಲಿದೆ. ಬಳಿಕ ತಾ. 27 ರಂದು ಹರ್ಯಾಣದ ಅಂಬಾಲಾ ಏರ್ ಬೇಸ್ನಲ್ಲಿ ಲ್ಯಾಂಡ್ ಆಗಲಿವೆ. ಬಳಿಕ ತಾ. 29 ರಂದು ಭಾರತೀಯ ವಾಯು ಪಡೆಗೆ ಸೇರ್ಪಡೆಯಾಗಲಿವೆ. ಹವಾಮಾನ ಸಹಕರಿಸಿದರೆ ತಾ. 29 ರಂದು ಹರಿಯಾಣದ ಅಂಬಾಲಾ ವಾಯು ನೆಲೆಯಲ್ಲಿ ಅವುಗಳ ಹಾರಾಟ ಪರೀಕ್ಷೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಬರುವ ಮತ್ತೊಂದು ಸ್ಕ್ವಾಡ್ರನ್ ಪಶ್ಚಿಮ ಬಂಗಾಳದಲ್ಲಿ ನಿಯೋಜನೆಗೊಳ್ಳಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ
ಲಖನೌ, ಜು. 21: ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ಶ್ರೀರಾಮನ ಸುಂದರ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಇದಾಗಲೇ ತಯಾರಾಗಿದ್ದ ದೇವಾಲಯದ ನೀಲನಕ್ಷೆ ಗಾತ್ರ ಮತ್ತು ವಿನ್ಯಾಸದಲ್ಲಿ ಮಾರ್ಪಾಡು ಮಾಡಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಒಪ್ಪಿಗೆ ಸೂಚಿಸಿದ ಕಾರಣ ಅಯೋಧ್ಯೆಯ ಪ್ರಸ್ತಾವಿತ ರಾಮ ದೇವಾಲಯವು ವಿಶ್ವದ ಅತಿದೊಡ್ಡ ಹಿಂದೂ ದೇವಾಲಯಗಳಲ್ಲಿ ಒಂದೆನಿಸಲಿದೆ. ಏತನ್ಮಧ್ಯೆ, ‘ಭೂಮಿಪೂಜೆ’ ದಿನಾಂಕವನ್ನು ನಿಗದಿಪಡಿಸುವುದರೊಂದಿಗೆ, ದೇವಾಲಯದ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹ ಪ್ರಾರಂಭವಾಗಿದೆ. ಇಂಡಿಯನ್ ಬುಲಿಯನ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ನ ಲಕ್ನೋ ಚಾಪ್ಟರ್ ಮಂಗಳವಾರ ದೇವಾಲಯದ ಟ್ರಸ್ಟ್ ಮುಖ್ಯಸ್ಥ ಮಹಂತ್ ನತ್ರ್ಯಗೋಪಾಲ್ ದಾಸ್ ಅವರಿಗೆ ಸುಮಾರು 34 ಕೆ.ಜಿ. ತೂಕದ ಇಟ್ಟಿಗೆಗಳನ್ನು ಕೊಡುಗೆಯಾಗಿ ನೀಡಿತು. ಮತ್ತೊಂದೆಡೆ ರಂಜಾಲ್ ಟ್ರಸ್ಟ್ 21,000 ರೂ.ಗಳ ಚೆಕ್ ಅನ್ನು ದೇವಾಲಯದ ಟ್ರಸ್ಟ್ಗೆ ಹಸ್ತಾಂತರಿಸಿತು. ಯೋಜನೆಯ ಮುಖ್ಯ ವಾಸ್ತುಶಿಲ್ಪಿ ಚಂದ್ರಕಾಂತ್ ಸೋಮಾಪುರ ಅವರ ಪುತ್ರರಾದ ವಾಸ್ತುಶಿಲ್ಪಿಗಳಾದ ನಿಖಿಲ್ ಸೋಮಾಪುರರ ಹಾಗೂ ಆಶಿಶ್ ಸೋಮಾಪುರ ಅವರು ದೇವಾಲಯದ ಮಾರ್ಪಡಿಸಿದ ವಿನ್ಯಾಸವನ್ನು ರಚಿಸಲಿದ್ದಾರೆ.