ಮುಳ್ಳೂರು, ಜು. 20: ಸಮೀಪದ ಆಲೂರು ಸಿದ್ದಾಪುರ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ವ್ಯಾಪ್ತಿಗೆ ಬರುವ ಗರ್ಭಿಣಿ, ಬಾಣಂತಿಯರು ಮತ್ತು ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆ ಸಂದರ್ಭದಲ್ಲಿ ಕೋವಿಡ್-19 ವೈರಸ್ ಸೋಂಕು ಮತ್ತು ಮುಂಜಾಗ್ರತಾ ಕ್ರಮ ಕುರಿತು ಫಲಾನುಭವಿಗಳಿಗೆ ಮಾಹಿತಿ ನೀಡಲಾಯಿತು.

ಕೊಡಗು ಗ್ರಾಮೀಣಾಭಿವೃದ್ದಿ ಸಂಸ್ಥೆ ಮತ್ತು ಜಿಲ್ಲಾ ಮಕ್ಕಳ ಸಹಾಯವಾಣಿ ಸಂಸ್ಥೆಯ ತಾಲೂಕು ಕಾರ್ಯಕರ್ತೆ ಬಿ.ಆರ್.ಕುಮಾರಿ ಮಾಹಿತಿ ನೀಡಿ-ಕೋವಿಡ್-19 ವೈರಸ್ ಕೊಡಗು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ನಿಟ್ಟಿನಲ್ಲಿ ಜನರು ಕೋವಿಡ್ ವೈರಸ್, ಹರಡದಂತೆ ಅನುಸರಿಸುವ ಮುಂಜಾಗ್ರತಾ ಕ್ರಮದ ಬಗ್ಗೆ ಅರಿವು ಹೊಂದುವ ಅವಶ್ಯಕತೆ ಇದೆ ಎಂದರು. ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಜನರು ಆತಂಕ ಪಡಬೇಕಾಗಿಲ್ಲ. ಜನರು ಅಗತ್ಯ ಇದ್ದರೆ ಮಾತ್ರ ಮನೆಯಿಂದ ಹೊರಗಡೆ ಬರಬೇಕು, ಮುಖಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ ಎಂದರು. ಹೊರಗಡೆ ಹೋಗು ವಾಗ ಸ್ಯಾನಿಟೈಸರ್ ಉಪಯೋಗಿಸಬೇಕು. ಇದರ ವ್ಯವಸ್ಥೆ ಇಲ್ಲದವರು ಹೊರಗಡೆ ಹೋಗಿ ಮನೆಗೆ ಬಂದ ಸಂದರ್ಭದಲ್ಲಿ ಸೋಪಿನಿಂದ ಕೈಕಾಲು, ಮುಖವನ್ನು ತೊಳೆದುಕೊಳ್ಳುವ ಮೂಲಕ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಬಹುದಾಗಿದೆ ಎಂದರು. ಆರೋಗ್ಯ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕೈಯಲ್ಲಿರುವುದರಿಂದ ಕೋವಿಡ್ ವೈರಸ್ ಮತ್ತು ಮುಂಜಾಗ್ರತೆ ಬಗ್ಗೆ ಅರಿತುಕೊಳ್ಳುವ ಮೂಲಕ ಕೊರೊನಾ ಸೋಂಕು ನಿರ್ಮೂಲನೆ ಮಾಡುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿ ಜ್ಯೋತಿ ಪ್ರವೀಣ ಇದ್ದರು.

- ಭಾಸ್ಕರ್, ಮುಳ್ಳೂರು