ಮಡಿಕೇರಿ, ಜು. 20: ನಗರದ ಪ್ರತಿಷ್ಠಿತ ಸರಕಾರಿ ಬಂಗಲೆ ‘ಸುದರ್ಶನ’ ಅತಿಥಿಗೃಹಕ್ಕೆ ಸರಕಾರದಿಂದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಾಯಕಲ್ಪ ಕೈಗೊಂಡಿದ್ದಾರೆ. ಅನೇಕ ದಶಕಗಳ ಇತಿಹಾಸವಿರುವ ಈ ಅತಿಥಿಗೃಹದಲ್ಲಿ ಉನ್ನತಮಟ್ಟದ ಗಣ್ಯರು ಸರಕಾರಿ ವ್ಯವಸ್ಥೆಯೊಂದಿಗೆ ಕೊಡಗಿಗೆ ಆಗಮಿಸಿದಾಗ, ಜಿಲ್ಲಾ ಕೇಂದ್ರದ ಈ ಬಂಗಲೆಯಲ್ಲಿ ತಂಗುವದು ವಾಡಿಕೆ.

ಆ ಹಿನ್ನೆಲೆಯಲ್ಲಿ ಮತ್ತೆ ಇಡೀ ಅತಿಥಿಗೃಹದ ಶಿಥಿಲಗೊಂಡಿರುವ ಮರಮುಟ್ಟುಗಳು, ಕಿಟಕಿ ಬಾಗಿಲು, ನೆಲಹಾಸು ಸೇರಿದಂತೆ ಮಾಡು ಇತ್ಯಾದಿಯ ರಿಪೇರಿ ಕೆಲಸ ನಡೆಯುತ್ತಿವೆ. ಸರಕಾರದ ಅನುದಾನದೊಂದಿಗೆ ರೂ. 23 ಲಕ್ಷ ವೆಚ್ಚದಲ್ಲಿ ನವೀಕರಣ ಕೆಲಸ ಕೈಗೊಳ್ಳಲಾಗಿದೆ.

ಈ ಸಂದರ್ಭ ಮರಕೆಲಸ ಹಾಗೂ ಕೆತ್ತನೆಯ ಅನುಭವವಿರುವ ನುರಿತ ಕಾರ್ಮಿಕರ ಮುಖಾಂತರ ರಿಪೇರಿ ಮಾಡಿಸಲಾಗುತ್ತಿವೆ ಎಂದು ಮಾಹಿತಿ ಲಭಿಸಿದೆ. ಇಲಾಖೆಯ ಅಧಿಕಾರಿಗಳು ಈ ಬಗ್ಗೆ ವಿವರಿಸುತ್ತಾ, ಅಲ್ಲಲ್ಲಿ ಸೋರುವಿಕೆ ತಡೆಗಟ್ಟುವದರೊಂದಿಗೆ ಹಾಳಾಗಿರುವ ಮರಗಳನ್ನು ಬದಲಾಯಿಸಿ, ರಿಪೇರಿ ಕೈಗೊಳ್ಳಲಾಗಿದೆ ಎಂದರಲ್ಲದೆ, ಅತಿಥಿಗೃಹದ ಕೊಠಡಿಗಳಿಗೂ ಕಾಯಕಲ್ಪ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.