ಮಡಿಕೇರಿ, ಜು. 20: ರಾಜ್ಯದಲ್ಲಿ ಅತಿ ಕಡಿಮೆ ಜನಸಂಖ್ಯೆ ಇರುವ ಕೊಡಗು ಜಿಲ್ಲೆಯಲ್ಲಿ 250 ಕ್ಕಿಂತಲೂ ಹೆಚ್ಚು ಕೊರೊನಾ ಪ್ರಕರಣಗಳು ಇದುವರೆಗೆ ವರದಿಯಾಗಿವೆ. ಆದರೆ ಈ ಪೈಕಿ ಶೇ.72 ರಷ್ಟು ಮಂದಿ ಗುಣಮುಖರಾಗಿದ್ದಾರೆ. ಅಗತ್ಯ ವೈದ್ಯರುಗಳ ಕೊರತೆಯ ನಡುವೆ ಈಗ ಇರುವ ವೈದ್ಯರುಗಳ, ಶುಶ್ರೂಷಕರ ಪರಿಶ್ರಮದಿಂದ ರೋಗಿಗಳು ಗುಣಮುಖ ರಾಗುತ್ತಿರುವದು ಕಂಡು ಬಂದಿದೆ. ಒಟ್ಟು 5 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ 5 ಮಂದಿಗೆ ಹೃದ್ರೋಗ, ಕಿಡ್ನಿ ವೈಫಲ್ಯ ಸೇರಿದಂತೆ ಇತರ ಕಾಯಿಲೆಗಳೂ ಇದ್ದದ್ದು, ಇದರೊಂದಿಗೆ ಕೊರೊನಾ ಸೋಂಕು ಕೂಡ ಇದ್ದುದಾಗಿ ಕೂಡ ಖಚಿತವಾಗಿದೆ. 2 ಪ್ರಕರಣಗಳಲ್ಲಂತೂ ವ್ಯಕ್ತಿ ಸಾವಿಗೀಡಾದ ನಂತರ ಸೋಂಕು ದೃಢವಾಗಿರುವುದು ವರದಿಯಾಗಿವೆ. ಇನ್ನುಳಿದ ಸಕ್ರಿಯ ಪ್ರಕರಣಗಳಲ್ಲೂ ಕೂಡ ಹೆಚ್ಚಿನವರಿಗೆ ಯಾವುದೇ ಜ್ವರದ ಲಕ್ಷಣಗಳಾಗಲಿ, ಯಾವುದೇ ಗಂಭೀರ ಸಮಸ್ಯೆ ಇಲ್ಲದಿರುವುದು ತಿಳಿದುಬಂದಿದೆ. ಜಿಲ್ಲಾ ಆರೋಗ್ಯ ಇಲಾಖೆ ಸೇರಿದಂತೆ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸರಕಾರದಿಂದ ಮಂಜೂರಾದ ವೈದ್ಯರ ಹುದ್ದೆಗಳ ಪೈಕಿ 120 ಹುದ್ದೆಗಳು ಖಾಲಿಯಿದ್ದು, ಗುತ್ತಿಗೆ ಆಧಾರದಲ್ಲಿ ನೇಮಕಾತಿಗೆ ಟೆಂಡರ್ ಕರೆಯಲಾಗಿದೆ. 120 ಹುದ್ದೆ ಖಾಲಿ ಇದ್ದರೂ ಕೊರೊನಾ ಸೋಂಕಿತರು ಶೇ.72 ರಷ್ಟು ಮಂದಿ ಗುಣಮುಖ ರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಕುರಿತು ‘ಶಕ್ತಿ’ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರೊಂದಿಗೆ ಅಭಿಪ್ರಾಯ ಬಯಸಿತು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕೆ.ಐ.ಎಮ್.ಎಸ್) ಹಾಗೂ ಆರೋಗ್ಯ ಇಲಾಖೆಯ ಜಂಟಿ ಕಾರ್ಯಾಚರಣೆಯ ಮೂಲಕ ಕೊರೊನಾ ಸೋಂಕಿತರ ಶೀಘ್ರ ಗುಣಮುಖ ಹಾಗೂ ಬಿಡುಗಡೆಗೆ ಸಾಧ್ಯವಾಗುತ್ತಿರುವುದಾಗಿ ಅವರು ಅಭಿಪ್ರಾಯಪಟ್ಟರು.

ಕೋವಿಡ್ ಆಸ್ಪತ್ರೆಯಲ್ಲಿ ಕೆ.ಐ.ಎಮ್.ಎಸ್ ನಿಂದ ನಿರ್ವಹಣೆ

ಕೋವಿಡ್ ಸಂಬಂಧ ಎಲ್ಲ ಜವಾಬ್ದಾರಿಯನ್ನು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ವಹಿಸಿಕೊಂಡಿದೆ. ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ರೋಗಿಗಳ ಸಂಪೂರ್ಣ ಜವಾಬ್ದಾರಿಯನ್ನು ಕೆ.ಐ.ಎಮ್.ಎಸ್ ವೈದ್ಯರು ವಹಿಸಿಕೊಂಡಿದ್ದಾರೆ. ವೈದ್ಯಕೀಯ ಕಾಲೇಜಿನಲ್ಲಿ ಅನುಭವಿ ವೈದ್ಯರು ಇದ್ದಾರೆ. ಆದರೆ ಅವರುಗಳ ಸಂಖ್ಯೆ ಕಡಿಮೆ ಇದೆ. ಆದುದ್ದರಿಂದ ಈ ಅನುಭವಿ ವೈದ್ಯರೆ ಗಂಭೀರ ರೋಗಿಗಳು ಸೇರಿದಂತೆ ಸಾಮಾನ್ಯ ಕೋವಿಡ್ ರೋಗಿಗಳ ಉಪಚಾರದಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಯನಿರತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೋವಿಡ್ ಕೇರ್ ಕೇಂದ್ರ, ಆರೋಗ್ಯ ಇಲಾಖೆಯ ಜವಾಬ್ದಾರಿ

ಇನ್ನುಳಿದಂತೆ ರೋಗದ ಲಕ್ಷಣಗಳು ಇಲ್ಲದ ಸೋಂಕಿತರನ್ನು ‘ಕೋವಿಡ್-ಕೇರ್ ಸೆಂಟರ್’ನಲ್ಲಿ ಆರೋಗ್ಯ ಇಲಾಖೆಯ ಆಯುಷ್ ಹಾಗೂ ಎಮ್.ಬಿ.ಬಿ.ಎಸ್ ಪದವೀದರರು ಉಪಚರಿಸುವುದಾಗಿ ಅನೀಸ್ ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯ ಕಿರಿಯ ವೈದ್ಯರಿಗೆ ವೈದ್ಯಕೀಯ ಕಾಲೇಜಿನ ವೈದ್ಯರು ಮಾರ್ಗದರ್ಶನ ನೀಡುತ್ತಿರುವುದಾಗಿಯೂ ಅವರು ತಿಳಿಸಿದರು.

‘ಹೋಮ್ ಐಸೋಲೇಷನ್’ಗೆ ಸೂಚನೆ

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಕೆಲವು ಸೋಂಕಿತರನ್ನು ಮನೆಯಲ್ಲಿಯೇ ಇರುವಂತೆ ಸೂಚಿಸಲಾಗುತ್ತಿದೆ. ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲದ ಸೋಂಕಿತರನ್ನು ಮನೆಯಲ್ಲಿಯೇ ಇರುವಂತೆ ನಿರ್ದೇಶಿಸಲಾಗುತ್ತಿದ್ದು, ವೈದ್ಯರ ಕೊರತೆ ಸೇರಿದಂತೆ ಹಾಸಿಗೆಗಳ ಕೊರತೆ ಆಗದಂತೆ ಕ್ರಮವಹಿಸಲಾಗುತ್ತಿದೆ ಎಂದು ಅನೀಸ್ ತಿಳಿಸಿದರು. ಮನೆಯಲ್ಲಿಯೇ ಇರುವ ಸೋಂಕಿತರನ್ನು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಫೋನ್ ಮೂಲಕ ಉಪಚರಿಸಿ ಅವರ ಆರೋಗ್ಯದ ಕುರಿತು ಮಾಹಿತಿ ಪಡೆಯುವುದಾಗಿಯೂ ಮಾಹಿತಿ ನೀಡಿದರು. ಕೆ.ಐ.ಎಮ್.ಎಸ್ ನ ಕೊನೆಯ ವರ್ಷದ ವಿದ್ಯಾರ್ಥಿಗಳು ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

10 ದಿನಗಳ ನಂತರ ಬಿಡುಗಡೆ

ಜಿಲ್ಲೆಯಲ್ಲಿ ಇದುವರೆಗೆ 201 ಮಂದಿ ಗುಣಮುಖರಾಗಿದ್ದಾರೆ. ಸರಕಾರದ ಆದೇಶದಂತೆ ರೋಗದ ಲಕ್ಷಣಗಳು ಇಲ್ಲದ ಸೋಂಕಿತರನ್ನು ಸೋಂಕು ಪತ್ತೆಯಾಗಿ 10 ದಿನಗಳ ಬಳಿಕ ದ್ರವ ಮಾದರಿ ಪರೀಕ್ಷೆಯಲ್ಲಿ ‘ನೆಗೆಟಿವ್’ ವರದಿ ಬಂದರೆ ಬಿಡುಗಡೆಗೊಳಿಸುತ್ತಿರುವುದಾಗಿ ಕೆ.ಐ.ಎಮ್.ಎಸ್ ನ ಅಧೀಕ್ಷಕ ಡಾ.ಲೋಕೇಶ್ ಮಾಹಿತಿ ನೀಡಿದ್ದಾರೆ.

ಕ್ಯಾನ್ಸರ್ ರೋಗಿಯೂ ಬಿಡುಗಡೆ

ಇತ್ತೀಚೆಗೆ ಕ್ಯಾನ್ಸರ್ ಪೀಡಿತ ವ್ಯಕ್ತಿಗೂ ಕೊರೊನಾ ತಗುಲಿದ್ದು, ಯಶಸ್ವಿ ಚಿಕಿತ್ಸೆಯ ಬಳಿಕ ಅವರು ಕೂಡ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಂಡಿ ರುವುದಾಗಿ ಲೋಕೇಶ್ ತಿಳಿಸಿದರು. ಇವರನ್ನು ಐ.ಸಿ.ಯುನಲ್ಲಿ ದಾಖಲು ಮಾಡಲಾಗಿತ್ತು. ವೈದ್ಯರ ಸತತ ಪರಿಶ್ರಮದಿಂದ ಇವರು ಕೂಡ ಸೋಂಕಿನಿಂದ ಮುಕ್ತರಾಗಿದ್ದಾರೆ. ಈ ಪ್ರಕರಣ ಸೇರಿದಂತೆ ಇನ್ನು 3 ಪ್ರಕರಣಗಳು ಕೂಡ ಐ.ಸಿ.ಯು ನಲ್ಲಿ ಚಿಕಿತ್ಸೆ ಪಡೆದ ನಂತರ ಸೋಂಕಿನಿಂದ ಮುಕ್ತಗೊಂಡು ಬಿಡುಗಡೆ ಗೊಂಡಿರುವುದಾಗಿ ಲೋಕೇಶ್ ಮಾಹಿತಿ ನೀಡಿದ್ದಾರೆ.

ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆ

ಸಾಮಾನ್ಯವಾಗಿ ಕೋವಿಡ್ ಪರೀಕ್ಷೆ ಸಂಬಂಧ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿ ವರದಿ ಬರಲು ಕನಿಷ್ಟ ಒಂದು ದಿನವಾದರು ಆಗುತ್ತದೆ. ಆದರೆ ರ್ಯಾಪಿಡ್ ಆ್ಯಂಟಿಜನ್ ಕಿಟ್ ಮೂಲಕ ಪರೀಕ್ಷೆ ನಡೆಸಿದ್ದಲ್ಲಿ ಕೇವಲ ಅರ್ಧ ಗಂಟೆಯಲ್ಲಿ ವರದಿ ದೊರಕುವುದಾಗಿ ಡಾ.ಲೋಕೇಶ್ ಮಾಹಿತಿ ನೀಡಿದ್ದಾರೆ. ಪರೀಕ್ಷೆ ನಡೆಸಲೆಂದು ಬರುವ ವ್ಯಕ್ತಿಗಳಲ್ಲಿ ಗಂಭೀರ ಆರೋಗ್ಯದ ಸಮಸ್ಯೆ ಇದ್ದರೆ ಮಾತ್ರ ಈ ಪರೀಕ್ಷೆಯನ್ನು ನಡೆಸುವುದಾಗಿ ಅವರು ತಿಳಿಸಿದರು. -ವರದಿ : ಪ್ರಜ್ಞಾ