ಶನಿವಾರಸಂತೆ, ಜು. 20: ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಲುವಾಗಿಲು ಗ್ರಾಮದಿಂದ ಆಗಳಿ ಗ್ರಾಮದವರೆಗೆ ಹೇಮಾವತಿ ಹಿನ್ನೀರು ಯೋಜನೆಯಡಿ ರೂ. 1 ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದ 300 ಮೀಟರ್ ನೂತನ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿ ಮುಕ್ತಾಯ ಹಂತ ತಲುಪಿದೆ.
ಈ ವಿಭಾಗದ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಪಿ. ಪುಟ್ಟರಾಜ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಗ್ರಾಮೀಣ ಭಾಗದಲ್ಲಿ ಸರ್ವ ಋತುವಿಗೂ ಹಾಳಾಗದಂತೆ ರಸ್ತೆ ಕಾಮಗಾರಿ ನಡೆಯಬೇಕು. ಕಳಪೆಯಾಗದಂತೆ ಗುಣಮಟ್ಟದ ಸಾಮಗ್ರಿ ಬಳಸಿ ಉತ್ತಮ ರಸ್ತೆ ನಿರ್ಮಿಸಿ ಎಂದು ಅವರು ಗುತ್ತಿಗೆದಾರರಿಗೆ ಸಲಹೆ ನೀಡಿದರು.
ಗ್ರಾಮದಲ್ಲಿ 1 ಕಿ.ಮೀ.ವರೆಗಿನ ಡಾಂಬರು ರಸ್ತೆ ಕಾಮಗಾರಿಯೂ ನಡೆಯಬೇಕಿದ್ದು, ಮಳೆಗಾಲವಾದ ಕಾರಣ ಮುಂದಿನ ಬೇಸಿಗೆ ಕಾಲದಲ್ಲಿ ಮಾಡುವದಾಗಿ ಗುತ್ತಿಗೆದಾರ ತಿಳಿಸಿದರು, ಗ್ರಾಮ ಪ್ರಮುಖರು ಹಾಜರಿದ್ದರು.