ಭಾಗಮಂಡಲ, ಜು. 20: ಮಳೆಯ ರೌದ್ರಾವತಾರ ಕಡಿಮೆಯಾಗಿ ಕಾವೇರಿ ನದಿಯು ಶಾಂತಗೊಳ್ಳಲಿ ಎಂಬ ಉದ್ದೇಶದಿಂದ ಭಾಗಮಂಡಲದಲ್ಲಿ ಪೊಲಿಂಕಾನ ಉತ್ಸವವನ್ನು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಪ್ರತಿವರ್ಷದಂತೆ ಆಟಿ ಅಮಾವಾಸ್ಯೆಯ ಇಂದು ಆಚರಿಸಲಾಯಿತು.ಈ ಸಂಬಂಧ ಭಗಂಡೇಶ್ವರ ಹಾಗೂ ಪರಿವಾರ ದೇವರ ಸಹಿತ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಹೆಚ್ಚು ಪ್ರಚಾರ ಮಾಡದೇ ಭಗಂಡೇಶ್ವರ ದೇವಾಲಯದಲ್ಲಿ ಬೆಳಿಗ್ಗೆ ಬಾಳೆದಿಂಡಿನ ಉತ್ಸವ ಮಂಟಪದೊಂದಿಗೆ ಕಾವೇರಿ ಮಾತೆಗೆ ವಸ್ತ್ರಾಭರಣ, ಸೀರೆ, ಬೆಳ್ಳಿತೊಟ್ಟಿಲು, ಬೆಳ್ಳಿಮಗು, ಕರಿಮಣಿ, ಬಿಚ್ಚೋಲೆ ಸಹಿತ ಬೆಳ್ಳಿಯ ತಟ್ಟೆಯಲ್ಲಿಟ್ಟು ಪೂಜಿಸಲಾಯಿತು. ಚಂಡೆವಾದ್ಯದೊಂದಿಗೆ ಬಾಳೆದಿಂಡುಗಳಿಂದ ರಚಿಸಲಾದ ಪೊಲಿಂಕಾನ ಮಂಟಪವನ್ನು ಭಗಂಡೇಶ್ವರ ದೇವಾಲಯಕ್ಕೆ ತಂದು ಸುತ್ತು ಪ್ರದಕ್ಷಿಣೆ ಬಂದು ಮಂಗಳಾರತಿ ನಡೆಸಿದ ನಂತರ ತ್ರಿವೇಣಿ ಸಂಗಮಕ್ಕೆ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ಅಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ನಂತರ ಸಂಗಮದಲ್ಲಿ ತೇಲಿಬಿಡಲಾಯಿತು. ಬಹಳ ಹಿಂದಿನಿಂದ ಭಾಗಮಂಡಲದಲ್ಲಿ ಪೊಲಿಂಕಾನ ಉತ್ಸವವನ್ನು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯೊಂದರ ಪ್ರಕಾರ ಮಹಿಳೆಯೊಬ್ಬರಿಗೆ ಚೊಚ್ಚಲ ಹೆರಿಗೆಗೆಂದು ತವರಿಗೆ ಹೋಗಬೇಕಾಗಿ ಬಂದ ಸಂದರ್ಭ ನದಿಯಲ್ಲಿ ಪ್ರವಾಹವಿದ್ದು, ಈ ಸಂದರ್ಭ ಬಾಗಿನ ಹರಕೆ ಸಲ್ಲಿಸುತ್ತಾಳೆ. ಬಳಿಕ ಪ್ರವಾಹ ಇಳಿಮುಖಗೊಂಡಿದ್ದು, ತವರಿಗೆ ತೆರಳುವಂತಾಯಿತು.ಈ ಹಿನ್ನೆಲೆಯಲ್ಲಿ ಪ್ರತಿವರ್ಷ ನದಿಗೆ ಬಾಗಿನ ಅರ್ಪಿಸುವ ಸಂಪ್ರದಾಯ ನಡೆಸಲಾಗುತ್ತಿದೆ. ಮತ್ತೊಂದು ಮೂಲದ ಪ್ರಕಾರ ರೌದ್ರವತಾರಗೊಂಡ ನದಿ ಶಾಂತಗೊಂಡು ರೈತರ ಹಿತಕ್ಕಾಗಿ ಕೈಗೊಂಡ ಸಾಂಪ್ರದಾಯಿಕ ಕ್ರಮವನ್ನು ಹಿಂದಿನ ಕಾಲದಿಂದ ಉತ್ಸವವಾಗಿ ಮುಂದುವರಿಸಿಕೊಂಡು ಬರಲಾಗುತ್ತಿದೆ. ಮತ್ತೊಂದು ಮೂಲದ ಪ್ರಕಾರ ಬಸುರಿ ಹೆಂಗಸಿಗೆ ಕಿತ್ತಳೆ ಹಣ್ಣು ತಿನ್ನುವ ಬಯಕೆಯಾಗಿ ನದಿಯ ಇನ್ನೊಂದು ದಡದಲ್ಲಿದ್ದ ಮಹಿಳೆ ಕಾವೇರಿ ನದಿಗೆ ಬಾಗಿನ ಅರ್ಪಿಸಿದಳು. ನದಿ ಇಬ್ಭಾಗವಾಗಿ ಮತ್ತೊಂದು ದಡಕ್ಕೆ ತೆರಳಲು ಅವಕಾಶವಾದಂತಹ ಸಂದರ್ಭವನ್ನು ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂಬಿತ್ಯಾದಿ ಬೇರೆ ಬೇರೆ ಉಪಕತೆಗಳು ಇಲ್ಲಿ ಹೆಣೆದುಕೊಂಡಿವೆ. ಆ ದಿಸೆಯಲ್ಲಿ ಇಂದು ಪೂಜಾ ಕಾರ್ಯಕ್ರಮಗಳೊಂದಿಗೆ ಈ ವರ್ಷವೂ ಪೊಲಿಂಕಾನ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. - ಕೆ.ಡಿ. ಸುನಿಲ್