ಗೋಣಿಕೊಪ್ಪ ವರದಿ, ಜು. 20: ಜಗಜೀವನ್‍ರಾಮ್ ಕೃಷಿ ಸಮ್ಮಾನ್ ಪ್ರಶಸ್ತಿ ವಿಜೇತ ನಲ್ಲೂರು ಗ್ರಾಮದ ಸೋಮೇಂಗಡ ಗಣೇಶ್ ತಿಮ್ಮಯ್ಯ ಅವರ ಗದ್ದೆಗೆ ಬೇಟಿ ನೀಡಿದ ಶಾಸಕ ಕೆ. ಜಿ. ಬೋಪಯ್ಯ ಯಾಂತ್ರೀಕೃತ ನಾಟಿಯಲ್ಲಿ ಪಾಲ್ಗೊಂಡು, ಸ್ಥಳದಲ್ಲಿಯೇ ರೈತನನ್ನು ಸನ್ಮಾನಿಸಿ ಪ್ರೋತ್ಸಾಹಿಸಿದರು.
ರೈತನ ಕೃಷಿ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅವರೊಂದಿಗೆ ಯಾಂತ್ರೀಕೃತ ನಾಟಿಯಲ್ಲಿ ಪಾಲ್ಗೊಂಡು ನಾಟಿ ಬಗ್ಗೆ ಮಾಹಿತಿ ಪಡೆದುಕೊಂಡು ಜಾಗೃತಿ ಮೂಡಿಸಿದರು. ಕೊಡಗು ಜಿಲ್ಲೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಲು ಕಾರಣವಾದ ಗಣೇಶ್ ಅವರನ್ನು ಸ್ಥಳದಲ್ಲಿಯೇ ಸನ್ಮಾನಿಸಿ ಪ್ರೋತ್ಸಾಹ ನೀಡಿದರು. ಈ ಸಂದರ್ಭ ಗೋಣಿಕೊಪ್ಪ ಕೆವಿಕೆ ವಿಜ್ಞಾನಿಗಳಾದ ಡಾ. ವೀರೇಂದ್ರಕುಮಾರ್, ಡಾ. ಪ್ರಭಾಕರ್ ಅವರಿಂದ ಯಾಂತ್ರೀಕೃತ ನಾಟಿ ಬಗ್ಗೆ ಮಾಹಿತಿ ಪಡೆದರು. ಸ್ಥಳೀಯ ಕೃಷಿಕರು ಪಾಲ್ಗೊಂಡಿದ್ದರು.
ನಂತರ ಮಾತನಾಡಿ, ದಿವಂಗತ ಜಗಜೀವ್ ರಾಮ್ ಹಸಿರು ಕ್ರಾಂತಿ ಜಾಗೃತಿ ಜೀವಂತಿಕೆಗೆ ಇವರ ಕೃಷಿ ಪೂರಕವಾಗಿದೆ. ಅವರ ಹಸಿರು ಕ್ರಾಂತಿ ಕಾರ್ಯರೂಪಕ್ಕೆ ಬರುತ್ತಿರುವುದು ಮೆಚ್ಚುವಂತ ವಿಚಾರ. ಇವರ ಸಾಧನೆಗಾಗಿ ಅಭಿನಂದಿಸಲಾಗುತ್ತಿದೆ ಎಂದರು.
ಭತ್ತ ಬೆಳೆಯಿಂದ ನಷ್ಟವಿಲ್ಲ ಎಂಬುವುದನ್ನು ಗಣೇಶ್ ತಿಮ್ಮಯ್ಯ ತೋರಿಸಿಕೊಟ್ಟಿದ್ದಾರೆ. ಕೃಷಿ ಪ್ರಧಾನ ಜಿಲ್ಲೆಯಲ್ಲಿ ಭತ್ತ ಬೆಳೆ ಲಾಭದಾಯಕ ಅಲ್ಲ ಎಂದು ಕಡೆಗಣಿಸಲ್ಪಟ್ಟಿದೆ. ವನ್ಯ ಪ್ರಾಣಿಗಳ ಕಿರುಕುಳದಿಂದಲೂ ನಷ್ಟ ಎಂದು ಬೆಳೆಯಿಂದ ದೂರ ಉಳಿಯುತ್ತಿರುವ ಕಾಲಘಟ್ಟದಲ್ಲಿ ಲಾಭದಾಯಕ ಭತ್ತ ಬೆಳೆ ಎಂದು ಕೃಷಿಕರಿಗೆ ಸಂದೇಶ ನೀಡಿರುವ ಇವರು ಎಲ್ಲರಿಗೂ ಮಾದರಿ. ವೈಜ್ಞಾನಿಕ ಕೃಷಿಯಲ್ಲಿ ಪೂರಕ ಚಟುವಟಿಕೆ ಮೂಲಕ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ತೆಗೆಯುವುದನ್ನು ಅರಿತುಕೊಂಡು ಕೃಷಿಕರು ಕೃಷಿಗೆ ಮುಂದಾಗಬೇಕು. ಏಕ ಬೆಳೆಗಿಂತ ಜೊತೆಯಲ್ಲಿ ಮೀನು ಸಾಕಣೆ, ಬಾಳೆ, ಬಿದಿರು ಬೆಳೆಗೆ ಮುಂದಾಗಿರುವುದು ಪ್ರೇರಣೆಯಾಗಿದೆ ಎಂದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಮುಖ್ಯಸ್ಥ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ, ವಿಸ್ತರಣಾ ಘಟಕ ಮುಖ್ಯಸ್ಥ ಡಾ. ಕೆಂಚರೆಡ್ಡಿ, ಬಿಜೆಪಿ ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್‍ಕುಮಾರ್, ಮಹಿಳಾ ಮೋರ್ಚ ಅಧ್ಯಕ್ಷೆ ಮಲ್ಚೀರ ಕವಿತಾ ಬೋಜಪ್ಪ, ಮುಖಂಡರಾದ ಅರುಣ್ ಭೀಮಯ್ಯ, ವಿನು ಚೆಂಗಪ್ಪ, ಆಲೆಮಾಡ ಸುದೀರ್, ಮಧು ದೇವಯ್ಯ ಉಪಸ್ಥಿತರಿದ್ದರು.
-ಸುದ್ದಿಪುತ್ರ