ಮಡಿಕೇರಿ, ಜು. 19: ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸೇರಿದಂತೆ ನಾಲ್ಕು ಜಿಲ್ಲಾಮಟ್ಟದ ಸಂಸ್ಥೆಗಳ ಆಡಳಿತ ಮಂಡಳಿಯ ಅಧಿಕಾರಿ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸರಕಾರದಿಂದ ಆಡಳಿತಾಧಿಕಾರಿಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. ಕೊಡಗು ಸಹಕಾರ ಯೂನಿಯನ್ ಆಡಳಿತ ಮಂಡಳಿ ಅಧಿಕಾರ ಅವಧಿ ಮುಕ್ತಾಯ ಹಂತದಲ್ಲಿ ಬರುವ ಆಗಸ್ಟ್ 28ರಂದು ಚುನಾವಣೆ ನಡೆಸಲು ದಿನಾಂಕ ಕೂಡ ನಿಗಧಿಗೊಂಡಿತ್ತು.ಈ ನಡುವೆ ಕೊರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆ ರಾಜ್ಯ ಸರಕಾರವು ಕರ್ನಾಟಕದೆಲ್ಲೆಡೆ, ಈಗಾಗಲೇ ಅವಧಿ ಮುಗಿದಿರುವ ಸಹಕಾರ ಸಂಸ್ಥೆಗಳ ಚುನಾವಣೆಗಳನ್ನು ತಾತ್ಕಾಲಿಕವಾಗಿ ಮುಂದೂಡಿ ಆದೇಶ ಹೊರಡಿಸಿದೆ. ಅಲ್ಲದೆ ಅವಧಿ ಮುಗಿದಿರುವ ಸಂಸ್ಥೆಗಳಿಗೆ ಮುಂದಿನ ಆದೇಶದ ತನಕ ಆಡಳಿತಾಧಿಕಾರಿಗಳ ನೇಮಕಾತಿ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿ ಆದೇಶ ಹೊರಡಿಸಿದೆ.ಆ ಪ್ರಕಾರ ಕೊಡಗಿನಲ್ಲಿ ಜಿಲ್ಲಾಮಟ್ಟದಲ್ಲಿ ಸಹಕಾರ ಯೂನಿಯನ್ ಸೇರಿದಂತೆ ಕೊಡಗು ಏಲಕ್ಕಿ ಬೆಳೆಗಾರರ ಸಹಕಾರ ಸಂಘ, 106ನೇ ಕೊಡಗು ಜಿಲ್ಲಾ ಹಾಪ್‍ಕಾಮ್ಸ್ ಸಂಸ್ಥೆ, ಕೊಡಗು ಶೈಕ್ಷಣಿಕ ಉದ್ಯೋಗಸ್ಥರ ಸಂಘಗಳಿಗೆ ಆಡಳಿತಾಧಿಕಾರಿಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ.

(ಮೊದಲ ಪುಟದಿಂದ)

ಮಾತ್ರವಲ್ಲದೆ ಕೊಡಗಿನಲ್ಲಿ ತಾಲೂಕು ಮಟ್ಟದ ನಾಲ್ಕು ಸಹಕಾರ ಸಂಘಗಳ ಆಡಳಿತ ಮಂಡಳಿಯ ಅಧಿಕಾರ ಪೂರ್ಣಗೊಂಡಿರುವ ಕಾರಣ, ಮುಂದಿನ ಚುನಾವಣೆ ಪ್ರಕ್ರಿಯೆ ತನಕ ಆಡಳಿತಾಧಿಕಾರಿಗಳನ್ನು ನೇಮಿಸಲು ನಿರ್ದೇಶನ ನೀಡಲಾಗಿದೆ. ಇನ್ನು ತಾಲೂಕು ಹಂತಕ್ಕಿಂತಲೂ ಕೆಳಮಟ್ಟದಲ್ಲಿ 14 ಸಹಕಾರ ಸಂಘಗಳಿಗೆ ಚುನಾವಣೆ ಮುಂದೂಡಲ್ಪಟ್ಟಿದ್ದು, ಈ ಎಲ್ಲ ಸಂಸ್ಥೆಗಳ ದೈನಂದಿನ ಕೆಲಸ ಕಾರ್ಯಗಳ ನಿರ್ವಹಣೆಗಾಗಿ ಆಡಳಿತಾಧಿಕಾರಿಗಳ ನೇಮಕಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಸಹಕಾರ ಇಲಾಖೆಯ ಉಪನಿಬಂಧಕ ಸಲೀಂ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಜಿಲ್ಲೆ, ತಾಲೂಕು ಹಾಗೂ ಕೆಳಹಂತದ ಸಂಸ್ಥೆಗಳಿಗೆ ಆಯಾ ಹಂತದಲ್ಲಿ ಸಂಬಂಧಿಸಿದ ಮೇಲಾಧಿಕಾರಿಗಳು ಆಡಳಿತಾಧಿಕಾರಿಗಳ ನೇಮಕಾತಿಯೊಂದಿಗೆ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.