ಮಡಿಕೇರಿ, ಜು. 19: ಆನ್ಲೈನ್ ಶಿಕ್ಷಣ ಬೇಡಗಳ ನಡುವೆಯೂ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ವಿನೂತನವಾಗಿ ‘ವಾಯ್ಸ್ ರೆಕಾಡ್ರ್’ ಮತ್ತು ‘ಕಲಿಕಾ ಕಾರ್ಡ್’ ರಚನೆಯ ಮೂಲಕ ಬೋಧನೆ ಮಾಡಿ ವಿದ್ಯಾರ್ಥಿಗಳ ಕಲಿಕಾ ಕೊರತೆಯನ್ನು ಸರಿದೂಗಿಸಲು ಪ್ರಯತ್ನಿಸುತ್ತಿದ್ದಾರೆ.
ಆನ್ಲೈನ್ ಬೋಧನೆಯಿಂದಾಗಿ ವಿದ್ಯಾರ್ಥಿಗಳಿಗೆ ಒತ್ತಡ ಉಂಟಾಗುತ್ತದೆ ಹಾಗೂ ಕಣ್ಣಿನ ದೃಷ್ಟಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಲದೆ ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಆನ್ಲೈನ್ ಬೋಧನೆಯನ್ನು ಗ್ರಹಿಸಲು ಕಷ್ಟಸಾಧ್ಯ ಎಂಬ ಕೂಗುಗಳು ಕೇಳಿಬರುತ್ತಿದೆ. ಇದನ್ನು ಮನಗಂಡ ಮುಳ್ಳೂರು ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಮೊಬೈಲ್ನಿಂದ ದೂರವಿದ್ದು ಕೇವಲ ವಾಯ್ಸ್ ರೆಕಾರ್ಡ್ ಕೇಳಿಸಿಕೊಂಡು ತಮಗೆ ನೀಡಿರುವ ಅಭ್ಯಾಸ ಕಲಿಕಾ ಕಾರ್ಡ್ಗಳನ್ನು ಇಟ್ಟುಕೊಂಡು ಕಲಿಯುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ.
“ನಮ್ಮ ಶಾಲೆಯ ಶಿಕ್ಷಕರು ಎಲ್ಲಾ ತರಗತಿಯ ಮಕ್ಕಳಿಗೆ ಕಲಿಕಾ ಕಾರ್ಡ್ಗಳನ್ನು ತಯಾರಿಸಿದ್ದಾರೆ. ಸುಮಾರು ಅರ್ಧವಾರ್ಷಿಕದಷ್ಟು ಪಾಠಗಳನ್ನು ಈ ಕಲಿಕಾ ಕಾರ್ಡ್ಗಳಲ್ಲಿ ಅಳವಡಿಸಲಾಗಿದೆÉ,” ಎಂದು ಮುಳ್ಳೂರು ಶಾಲೆಯ ಶಿಕ್ಷಕ ಸತೀಶ್ ತಿಳಿಸಿದ್ದಾರೆ.
ಮುಳ್ಳೂರು ಶಾಲೆಯ ತರಗತಿಯ ವಾಟ್ಸಾಪ್ ಗ್ರೂಪ್ ರಚನೆ ಮಾಡಲಾಗಿದೆ. ಈ ಗ್ರೂಪಿನಲ್ಲಿ ಆಯಾ ತರಗತಿಯ ವಿಷಯಗಳಿಗೆ ಸಂಬಂಧಿಸಿದಂತೆ ಒಂದೇ ಕಾರ್ಡ್ನಲ್ಲಿ ಕನ್ನಡ, ಆಂಗ್ಲ, ಗಣಿತ ಮತ್ತು ಪರಿಸರ ವಿಷಯಕ್ಕೆ ಸಂಬಂಧಿಸಿದಂತೆ ಆ ದಿನದ ಕಲಿಕಾಂಶಗಳು ಇರುತ್ತವೆ. ಇಲ್ಲಿ ಶಿಕ್ಷಕರು ಕಲಿಕಾಂಶಗಳ ಪ್ರಮಾಣಕ್ಕನುಗುಣವಾಗಿ ದಿನದ ಕಾರ್ಡ್, ವಾರದ ಹಾಗೂ ತಿಂಗಳ ಎಂಬ ಮೂರು ಮಾದರಿಯ ಕಾರ್ಡುಗಳನ್ನು ರಚಿಸಿದ್ದಾರೆ. ಈ ಕಾರ್ಡಿನ ಫೆÇೀಟೋವನ್ನು ವಾಟ್ಸಾಪ್ ಮಾಡಲಾಗುತ್ತದೆ; ಇದರ ಜೊತೆಯಲ್ಲಿ ಆ ಕಾರ್ಡಿನ ಕಲಿಕಾಂಶವನ್ನು ವಾಯ್ಸ್ ರೆಕಾರ್ಡ್ ಮಾಡಿ ಕಳುಹಿಸಲಾಗುತ್ತದೆ. ಮಕ್ಕಳು ಅದನ್ನು ಒಂದೆರಡು ಬಾರಿ ಕೇಳಿಸಿಕೊಳ್ಳುತ್ತಾರೆ, ಆನಂತರ ನೋಟ್ಬುಕ್ನಲ್ಲಿ ಬರೆದುಕೊಳ್ಳುತ್ತಾರೆ. ಮಕ್ಕಳು ಕೇವಲ ಕೇಳಿಸಿಕೊಳ್ಳಲು ಮಾತ್ರ ಇಲ್ಲಿ ಮೊಬೈಲ್ ಫೋನ್ ಬಳಸುತ್ತಾರೆ. ಸಂಜೆ, ಶಿಕ್ಷಕರು 30 ನಿಮಿಷಗಳ ಕಾಲ ‘ಕಾನ್ಫರೆನ್ಸ್ ಕಾಲ್’ ಮೂಲಕ ವಿದ್ಯಾರ್ಥಿಗಳೊಂದಿಗೆ ಕಲಿಕಾಂಶದ ಬಗ್ಗೆ ಚರ್ಚಿಸುತ್ತಾರೆ. ಪಠ್ಯದ ಅಂತ್ಯದಲ್ಲಿ ತೆರೆದ ಪುಸ್ತಕ ಮಾದರಿಯಲ್ಲಿ ಕಿರುಪರೀಕ್ಷೆ ಮಾಡಿ ಮೌಲ್ಯಮಾಪನ ಕೂಡ ಮಾಡುತ್ತಾರೆ.
ಇನ್ನು, ಸ್ಮಾರ್ಟ್ಫೋನ್ ಅಥವಾ ಮೊಬೈಲ್ ನೆಟ್ವರ್ಕ್ ಇಲ್ಲದ ಮನೆಗಳಲ್ಲಿ, ವಿದ್ಯಾರ್ಥಿಗಳಿಗೆ ಸುರಕ್ಷಿತ ವಿಧಾನಗಳಿಂದ ಕಲಿಕಾ ಕಾರ್ಡ್ನ ಫೋಟೊ ಕಾಪಿ ತಲುಪಿಸುವ ವ್ಯವಸ್ಥೆಯನ್ನು ಶಿಕ್ಷಕರು ಮಾಡುತ್ತಾರೆ. ಈಗಾಗಲೇ ವಿದ್ಯಾರ್ಥಿಗಳಿಗೆ ಕಳೆದ ಶೈಕ್ಷಣಿಕ ವಷರ್Àದ ಅಂತಿಮ ತಿಂಗಳಿನಿಂದಲೇ ನಿಗದಿತ ಕಲಿಕಾಂಶವನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಆದರೆ, ಮುಳ್ಳೂರು ಸರಕಾರಿ ಶಾಲೆಯಲ್ಲಿ ಜೂನ್ನಿಂದ ಇದೇ ಮಾದರಿಯಲ್ಲಿ ಶೈಕ್ಷಣಿಕ ಪ್ರಕ್ರಿಯೆ ಎಂದಿನಂತೆ ನಡೆಯುತ್ತಿದ್ದು, ನಿಗದಿತ ಪಠ್ಯಗಳನ್ನು ಪೂರೈಸಿ ತೆರೆದ ಪುಸ್ತಕ ಮಾದರಿಯ ಕಿರು ಪರೀಕ್ಷೆಗಳನ್ನು ಕೂಡ ನಡೆಸಲಾಗಿದೆ.
ಆನ್ಲೈನ್ ಕ್ಲಾಸ್ನ ಬಗೆಗೆ ದೇಶದೆಲ್ಲಡೆ ಚರ್ಚೆಯಾಗುತ್ತಿರುವ ಈ ಸಮಯದಲ್ಲಿ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, ಯಾವ ವಿದ್ಯಾರ್ಥಿಗೂ ಅನ್ಯಾಯವಾಗದಂತೆ ನವೀನ ರೀತಿಯಲ್ಲಿ ಕೊರೊನಾ ಲಾಕ್ಡೌನ್ನ ಮಧ್ಯೆಯೂ ಪರಿಣಾಮಕಾರಿಯಾಗಿ ಪಾಠಗಳನ್ನು ನೆರವೇರಿಸುತ್ತಿದ್ದಾರೆ ಎನ್ನುವುದು ಪ್ರಶಂಸನೀಯ.