ಮಡಿಕೇರಿ, ಜು. 18: ಕೊರೊನಾ ವೈರಸ್ ಹರಡುವಿಕೆಯ ನಿಯಂತ್ರಣದ ಮತ್ತೊಂದು ಹೆಜ್ಜೆಯಾಗಿ ಕೊಡಗು ಜಿಲ್ಲಾಡಳಿತದ ಆದೇಶದಂತೆ ವಾರಾಂತ್ಯವಾದ ಶನಿವಾರ ಹಾಗೂ ಭಾನುವಾರ ಕಟ್ಟುನಿಟ್ಟಿನ ಲಾಕ್ಡೌನ್ಗೆ ಸೂಚನೆಯಿದ್ದ ಹಿನ್ನೆಲೆಯಲ್ಲಿ ಮೊದಲ ದಿನವಾದ ಶನಿವಾರದಂದು ಇಡೀ ಜಿಲ್ಲೆ ಸ್ತಬ್ಧಗೊಂಡಂತಿತ್ತು.ಜಿಲ್ಲೆಯಾದ್ಯಂತ ಎಲ್ಲಾ ಚಟುವಟಿಕೆಗಳು, ವಾಹನ ಸಂಚಾರ, ವ್ಯಾಪಾರೋದ್ಯಮದ ನಿರ್ಬಂಧದ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ನೀರವಮೌನ ಆವರಿಸಿದ್ದು, ದಕ್ಷಿಣ ಕೊಡಗಿನ ಕುಟ್ಟ, ಬಿರುನಾಣಿ, ಟಿ. ಶೆಟ್ಟಿಗೇರಿ, ಕುಟ್ಟ, ಶ್ರೀಮಂಗಲ, ಹುದಿಕೇರಿ, ಪೊನ್ನಂಪೇಟೆ, ಬಾಳೆಲೆ, ಗೋಣಿಕೊಪ್ಪ ಸಹಿತ ವೀರಾಜಪೇಟೆ ತಾಲೂಕು ಕೇಂದ್ರ ಹಾಗೂ ಇತರೆಡೆಗಳಲ್ಲಿ ಇದೇ ಸನ್ನಿವೇಶ ಎದುರಾಯಿತು. ಇತ್ತ ಅಮ್ಮತ್ತಿ, ಪಾಲಿಬೆಟ್ಟ, ಸಿದ್ದಾಪುರ, ಮರಗೋಡು, ಮೂರ್ನಾಡು, ನಾಪೋಕ್ಲು, ಭಾಗಮಂಡಲ, ಚೇರಂಬಾಣೆ ಮತ್ತಿತರೆಡೆಗಳಲ್ಲಿ ಹಾಗೂ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲೂ ನಿಶ್ಯಬ್ಧ ವಾತಾವರಣವಿತ್ತು. ಉತ್ತರ ಕೊಡಗಿನ ಸೋಮವಾರಪೇಟೆ ತಾಲೂಕು ಕೇಂದ್ರ, ಕೊಡ್ಲಿಪೇಟೆ, ಶನಿವಾರಸಂತೆ, ಶಿರಂಗಾಲ, ಕುಶಾಲನಗರ, ಸುಂಟಿಕೊಪ್ಪ ಸೇರಿದಂತೆ ಬಹುತೇಕ ಸ್ಥಳಗಳಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ಜನಸಂಚಾರ ಕಂಡುಬರಲಿಲ್ಲ.
ಸೋಮವಾರಪೇಟೆಯಲ್ಲಿ ಲಾಕ್ಡೌನ್ ಸಂಪೂರ್ಣ ಯಶಸ್ವಿ ಕೊರೊನಾ ಸೋಂಕು ವ್ಯಾಪಕ ವಾಗಿ ಹರಡುವದನ್ನು ತಡೆಗಟ್ಟುವ ಉದ್ದೇಶದಿಂದ ಜಿಲ್ಲಾಡಳಿತ ಜಾರಿಗೊಳಿಸಿದ ಶನಿವಾರದ ಲಾಕ್ಡೌನ್ ಸೋಮವಾರಪೇಟೆಯಲ್ಲಿ ಸಂಪೂರ್ಣ ಯಶಸ್ವಿಯಾಯಿತು.
ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಅಂಗಡಿ ಮುಂಗಟ್ಟುಗಳು ಬೆಳಗ್ಗಿನಿಂದಲೇ ಮುಚ್ಚಲ್ಪಟ್ಟಿದ್ದವು. ಸೋಮವಾರಪೇಟೆ ಪಟ್ಟಣದಲ್ಲಿ ವಾಹನ, ಜನ ಸಂಚಾರ ಕಂಡು ಬಂದಿಲ್ಲ. ಬೆಳಿಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ದಿನಪತ್ರಿಕೆ ಮತ್ತು ಹಾಲು ಖರೀದಿಗೆ ಅವಕಾಶ ಕಲ್ಪಿಸಿದ್ದರಿಂದ, ಸಾರ್ವಜನಿಕರು ಪಟ್ಟಣಕ್ಕೆ ಆಗಮಿಸಿ ಖರೀದಿಯ ನಂತರ ಮನೆಗೆ ತೆರಳಿದರು.
ಪಟ್ಟಣದಲ್ಲಿ ಮೆಡಿಕಲ್ ಅಂಗಡಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರು ಶನಿವಾರ ಕಚೇರಿಯಲ್ಲಿದ್ದು, ಕೋವಿಡ್ ಸಂಬಂಧಿತ ಕೆಲಸ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದರು.
ಹೊರ ರಾಜ್ಯಗಳಿಂದ ಆಗಮಿಸಿ ಹೋಂ ಕ್ವಾರಂಟೈನ್ನಲ್ಲಿರುವ ಮಂದಿಯ ಬಗ್ಗೆ ನಿಗಾ ವಹಿಸಿರುವ ಗ್ರಾಮ ಲೆಕ್ಕಾಧಿಕಾರಿಗಳು, ಅವರುಗಳ ಮನೆಗೆ ತೆರಳಿ ಹೋಂ ಕ್ವಾರಂಟೈನ್ ನಲ್ಲಿರುವ ಬಗ್ಗೆ ಖಾತ್ರಿಪಡಿಸಿ ಕೊಳ್ಳುತ್ತಿದ್ದರು.
ಪಟ್ಟಣದಲ್ಲಿ ಎಲ್ಲಾ ರೀತಿಯ ವಹಿವಾಟುಗಳು ಸ್ಥಗಿತಗೊಂಡಿದ್ದ ರಿಂದ ಜನ ಸಂಚಾರವೂ ಇರಲಿಲ್ಲ. ತುರ್ತು ಅವಶ್ಯಕತೆಗಳಿಗಾಗಿ ಬೆರಳೆಣಿಕೆಯ ವಾಹನಗಳು ತೆರಳುತ್ತಿದ್ದವು. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಬಿರುಸಿನಿಂದ ನಡೆಯುತ್ತಿರುವದರಿಂದ, ಗ್ರಾಮೀಣ ಪ್ರದೇಶದ ಮಂದಿ ಪಟ್ಟಣಕ್ಕೆ ಆಗಮಿಸದೇ ಗ್ರಾಮಗಳಲ್ಲೇ ಉಳಿದಿದ್ದರು.
(ಮೊದಲ ಪುಟದಿಂದ)
ಲಾಕ್ಡೌನ್ನಿಂದಾಗಿ ಕೃಷಿ ಕಾರ್ಯಗಳು ನಿಗದಿತ ಸಮಯದಲ್ಲಿ ಮುಗಿಯುತ್ತಿದ್ದು, ಶನಿವಾರದಂದು ಮಳೆ ಬಿಡುವು ಕೊಟ್ಟಿದ್ದರಿಂದ ಗದ್ದೆ ಉಳುಮೆ, ನಾಟಿ ಕಾರ್ಯ ಬಿರುಸಿನಿಂದ ನಡೆಯಿತು. ಮನೆ ಮಂದಿಯೆಲ್ಲಾ ಕೃಷಿ ಕಾರ್ಯದಲ್ಲಿ ಪಾಲ್ಗೊಂಡಿದ್ದಾಗಿ ಹರಗ ಗ್ರಾಮದ ಕೃಷಿಕ ಶರಣ್ ಅಭಿಪ್ರಾಯ ಹಂಚಿಕೊಂಡರು.
ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಆಗಮಿಸಿದ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಲಾಕ್ಡೌನ್ ಇದ್ದರೂ ಸಹ ಪಟ್ಟಣದಲ್ಲಿ ತಿರುಗಾಡುತ್ತಿದ್ದ ಕೆಲವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಪಟ್ಟಣದ ಕಕ್ಕೆಹೊಳೆ, ಅಮ್ಮಣ್ಣ ಗ್ಯಾರೇಜ್ ಜಂಕ್ಷನ್ನಲ್ಲಿ ಕೆಲವರಿಗೆ ಲಾಠಿ ಬೀಸಿದ ಪೊಲೀಸರು, ಅನಗತ್ಯವಾಗಿ ತಿರುಗಾಡದಂತೆ ತಾಕೀತು ಮಾಡಿದರು.
ವೀರಾಜಪೇಟೆ: ವೀರಾಜಪೇಟೆ ಪಟ್ಟಣದಲ್ಲಿ ಇಂದು ಪೂರ್ಣ ಬಂದ್ ಜರುಗಿತು. ಬೆಳಗಿನ 6ಗಂಟೆಯಿಂದ 9ಗಂಟೆಯವರೆಗೆ ಹಾಲು, ಪತ್ರಿಕಾ ವಿತರಣೆಗೆ ಮಾತ್ರ ನಿರ್ಬಂಧ ಸಡಿಲಗೊಳಿಸಲಾಗಿತ್ತು. ಇಲ್ಲಿನ ಖಾಸಗಿ ಬಸ್ಸು ನಿಲ್ದಾಣ ಹಾಗೂ ಸಾರಿಗೆ ಸಂಸ್ಥೆ ಬಸ್ಸು ನಿಲ್ದಾಣಗಳು ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ, ಮುಖ್ಯರಸ್ತೆಯಲ್ಲಿ ಪೊಲೀಸರು, ಹೋಮ್ ಗಾಡ್ರ್ಸ್ ಹೊರತುಪಡಿಸಿದರೆ ಇನ್ನು ವಾಹನ ಹಾಗೂ ಸಾರ್ವಜನಿಕ ಸಂಚಾರವನ್ನು ಪೂರ್ಣವಾಗಿ ನಿಯಂತ್ರಿಸಲಾಗಿತ್ತು.
ವೀರಾಜಪೇಟೆ ನಗರ ಪೊಲೀಸರು ಜನ, ವಾಹನ ಸಂಚಾರ ನಿಯಂತ್ರಿಸಲು ಇಲಾಖೆಯ ವಾಹನದಲ್ಲಿ ಗಸ್ತು ತಿರುಗಿ ಮನೆಯಿಂದ ಜನರು ಹೊರಬರದಂತೆ ಸೂಚಿಸುತ್ತಿದ್ದರು.
ನಾಪೆÇೀಕ್ಲು ಬಂದ್
ನಾಪೆÇೀಕ್ಲು ಪಟ್ಟಣ ಸಂಪೂರ್ಣ ಬಂದ್ ಆಗಿತ್ತು. ಪೆÇಲೀಸರು ಯಾವದೇ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಿಲ್ಲ. ಬೆಳಿಗ್ಗೆ ಪೇಪರ್, ಹಾಲು, ಮತ್ತಿತರ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಲಾಗಿತ್ತು.
ಕೂಡಿಗೆ ವ್ಯಾಪ್ತಿಯಲ್ಲಿ ಸಂಪೂರ್ಣ ಬಂದ್
ಕುಶಾಲನಗರ ಹೋಬಳಿ ವ್ಯಾಪ್ತಿಯ ಕೂಡಿಗೆ ಕೂಡುಮಂಗಳೂರು ಹೆಬ್ಬಾಲೆ, ತೊರೆನೂರು, ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸರಕಾರದ ಆದೇಶದಂತೆ ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದವು.
ಈ ಭಾಗದಲ್ಲಿ ಔಷಧಿ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಯಾವುದೇ ಅಂಗಡಿಗಳು ತೆರೆಯಲಿಲ್ಲ. ಈ ವ್ಯಾಪ್ತಿಯ ಗ್ರಾಮ ಪಂಚಾಯತಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮಾತ್ರ ಸೇವೆಯಲ್ಲಿ ತೊಡಗಿದ್ದವು. ಈ ಭಾಗಗಳಲ್ಲಿ ಪೆÇೀಲಿಸ್ ಬಂದೋಬಸ್ತು ವ್ಯವಸ್ಥೆಯು ಕಟ್ಟುನಿಟ್ಟಾಗಿತ್ತು.
ಕೊಡಗಿನ ಗಡಿ ಭಾಗ ಶಿರಂಗಾಲದಲ್ಲಿರುವ ಅರಣ್ಯ ತಪಾಸಣಾ ಕೇಂದ್ರದ. ಗೇಟ್ಅನ್ನು ಬಂದ್ ಮಾಡಲಾಗಿತ್ತು. ಹಾಸನ ಹೆದ್ದಾರಿಯಲ್ಲಿ ಯಾವುದೇ ವಾಹನ ಸಂಚಾರವಿರಲಿಲ್ಲ.
ಸಿದ್ದಾಪುರ ಸ್ತಬ್ಧ
ಸಿದ್ದಾಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಪೂರ್ಣ ಬಂದ್ ಮಾಡಲಾಗಿತ್ತು. ಯಾವುದೇ ವಾಹನಗಳ ಸಂಚಾರವಿಲ್ಲದೆ ಹಾಗೂ ಜನರ ಓಡಾಟ ಇಲ್ಲದೆ ಪಟ್ಟಣ ಸ್ತಬ್ಧವಾಗಿತ್ತು. ಇತ್ತೀಚೆಗೆ ಸಿದ್ದಾಪುರ ಪಟ್ಟಣ ವ್ಯಾಪ್ತಿಯಲ್ಲಿ ನಾಲ್ಕು ಮಂದಿಗೆ ವೈರಸ್ ಪತ್ತೆಯಾಗಿದ್ದು, ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಜ್ಯೋತಿನಗರದ ನಿವಾಸಿಯೊಬ್ಬರಿಗೆ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಸಿದ್ದಾಪುರದ ಗ್ರಾಮ ಪಂಚಾಯಿತಿ ವತಿಯಿಂದ ಸಿದ್ದಾಪುರದ ನಿಲ್ದಾಣ ಸುತ್ತಮುತ್ತ ಪ್ರಮುಖ ರಸ್ತೆಗಳಲ್ಲಿ ಔಷಧಿ ಸಿಂಪಡಿಸಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಶಿವಶಂಕರ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಹಾಜರಿದ್ದರು ಸಿದ್ದಾಪುರದ ಅಧಿಕಾರಿ ಮೋಹನ್ರಾಜ್ ನೇತೃತ್ವದಲ್ಲಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಲಾಕ್ಡೌನ್ಗೆ ಮಾರು ಹೋದ ಜನತೆ
*ಗೋಣಿಕೊಪ್ಪಲು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕನ್ನು ನಿಯಂತ್ರಿಸುವ ಉದ್ದೇಶದಿಂದ ಲಾಕ್ಡೌನ್ಗೆ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಬೆಂಬಲ ವ್ಯಕ್ತಪಡಿಸಿದರು. ಶನಿವಾರ ಮುಂಜಾನೆಯಿಂದಲೇ ಮನೆಯಿಂದ ಹೊರಗೆ ಬರಲಿಲ್ಲ.
ವ್ಯಾಪಾರೋದ್ಯಮಿಗಳು ಅಂಗಡಿ ಮುಂಗಟ್ಟುಗಳನ್ನು ತೆರೆಯಲಿಲ್ಲ. ಸಾರಿಗೆ ಬಸ್ ಹಾಗೂ ಖಾಸಗಿ ವಾಹನಗಳು ಸ್ಥಗಿತಗೊಂಡಿದ್ದವು. ಔಷಧಿ ಮತ್ತು ಪೆಟ್ರೋಲ್ ಬಂಕ್ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಆದರೆ ಜನರೇ ಇರಲಿಲ್ಲ. ಹಾಲು ಮತ್ತು ಪತ್ರಿಕೆಗಳ ವಹಿವಾಟು ಬೆಳಿಗ್ಗೆ 9 ಗಂಟೆವರೆಗಿತ್ತು.
ತಿತಿಮತಿ, ದೇವರಪುರ, ಬಾಳೆಲೆ, ಪೊನ್ನಪ್ಪಸಂತೆ, ಕಿರುಗೂರು, ನಲ್ಲೂರು ಭಾಗಗಳು ಸಂಪೂರ್ಣ ಸ್ತಬ್ಧಗೊಂಡಿದ್ದವು. ಗ್ರಾಮೀಣ ಭಾಗದ ಕಾಫಿ ತೋಟದಲ್ಲಿ ಮಾತ್ರ ಕೆಲವು ಕಾರ್ಮಿಕರು ಕಾರ್ಯನಿರ್ವಹಿಸಿದರು.
ಕಡಂಗ: ಕಡಂಗದಲ್ಲಿ ಎಲ್ಲಾ ವರ್ತಕರು ಬೆಂಬಲ ಸೂಚಿಸಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. ಬೆಳಗ್ಗಿನಿಂದ ಸಂಜೆಯವರೆಗೆ ಯಾವುದೇ ವಾಹನ ಓಡಾಟವಿಲ್ಲದೆ ಪಟ್ಟಣ ಸ್ತಬ್ಧವಾಗಿತ್ತು.
ಸುಂಟಿಕೊಪ್ಪ: ಸುಂಟಿಕೊಪ್ಪದಲ್ಲಿ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಮುಚ್ಚಲಾಗಿತ್ತು. ಆದರೆ ಕೆಲವರು ವಾಹನದಲ್ಲಿ ಅನಾವಶ್ಯಕವಾಗಿ ಅಡ್ಡಾಡುತ್ತಿರುವುದನ್ನು ಗಮನಿಸಿದ ವಾಹನಗಳನ್ನು ವಶಪಡಿಸಿಕೊಂಡು ಕ್ರಮ ಕೈಗೊಂಡರು.
ಪೆÇನ್ನಂಪೇಟೆ: ಜಿಲ್ಲಾದ್ಯಂತ ವಿಧಿಸಲಾಗಿದ್ದ ಶನಿವಾರದ ಲಾಕ್ಡೌನ್ಗೆ ಪೆÇನ್ನಂಪೇಟೆ ಸಂಪೂರ್ಣ ಸ್ತಬ್ಧವಾಗಿತ್ತು. ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಬೆಳಿಗ್ಗೆ ತೆರೆದಿದ್ದ ಮೆಡಿಕಲ್ ಶಾಪ್ಗಳು ಕೂಡ ಗ್ರಾಹಕರಿಲ್ಲದೆ ಮಧ್ಯಾಹ್ನದ ನಂತರ ಮುಚ್ಚಲ್ಪಟ್ಟವು. ಪೆಟ್ರೋಲ್ ಬಂಕ್ ಎಂದಿನಂತೆ ಕಾರ್ಯ ನಿರ್ವಹಿಸಿದರೂ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಬೆಳಿಗ್ಗೆ 9 ಗಂಟೆವರೆಗೆ ಹಾಲು ಹಾಗೂ ದಿನಪತ್ರಿಕೆ ಮಾರಾಟ ಇತ್ತು. ವಾಹನ ಸಂಚಾರ ವಿರಳವಾಗಿತ್ತು.
ಪೆÇಲೀಸ್ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಮಾಡುವ ಮೂಲಕ ಸಾರ್ವಜನಿಕರ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಿದ್ದರು.
ಅಮ್ಮತ್ತಿ: ಅಮ್ಮತ್ತಿಯ ಜನತೆಯಿಂದ ಲಾಕ್ಡೌನ್ಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಜನತೆ ಕೂಡ ಗ್ರಾಮದಲ್ಲಿ ಅನಗತ್ಯ ಸಂಚಾರಕ್ಕೆ ಮುಂದಾಗದೆ ಮನೆಯಲ್ಲೇ ಉಳಿದಿದ್ದರು. ಹೀಗಾಗಿ ವಾಹನ ಸಂಚಾರವಿಲ್ಲದೆ ಅಮ್ಮತ್ತಿ ಗ್ರಾಮ ಸಂಪೂರ್ಣ ಸ್ತಬ್ಧವಾಗಿತ್ತು.
ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ಜಾರಿಗೊಳಿಸಿರುವ ಎರಡು ದಿನಗಳ ಲಾಕ್ಡೌನ್ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣ ಸಂಪೂರ್ಣ ಸ್ತಬ್ಧಗೊಂಡಿದೆ. ಅಗತ್ಯ ಸೇವೆಗಳಿಗೆ ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ವಾಹನ ಸಂಚಾರಕ್ಕೆ ಜಿಲ್ಲೆಯ ಗಡಿಭಾಗ ಕೊಪ್ಪ ಗೇಟ್ ಬಳಿ ಪೊಲೀಸರು ನಿರ್ಬಂಧ ವಿಧಿಸಿದ್ದರು.
ಕುಶಾಲನಗರ ಪಟ್ಟಣ ಸಂಪೂರ್ಣ ಬಂದ್ ಆಗುವುದರೊಂದಿಗೆ ಇಡೀ ಪಟ್ಟಣ ಬಿಕೋ ಎನ್ನುವಂತಾಗಿತ್ತು. ಅನಾವಶ್ಯಕ ಓಡಾಟ ನಡೆಸುತ್ತಿದ್ದ ವಾಹನ ಸವಾರರ ಮೇಲೆ ಪೊಲೀಸರು ಗೇಟ್ ಬಳಿ ವಾಪಾಸ್ ಕಳುಹಿಸುತ್ತಿದ್ದ ದೃಶ್ಯ ಕಂಡುಬಂತು. ಸಮೀಪದ ಕೊಪ್ಪ ಗ್ರಾಮದಲ್ಲಿ ಮಾತ್ರ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2.30 ರ ತನಕ ಎಲ್ಲಾ ವಹಿವಾಟುಗಳು ಎಂದಿನಂತೆ ನಡೆದವು. ಮದ್ಯದಂಗಡಿಗಳು, ಬಾರ್ಗಳು ಸಂಜೆ 6 ಗಂಟೆ ತನಕ ಕಾರ್ಯನಿರ್ವಹಿಸಿದವು.