ಮಡಿಕೇರಿ, ಜು. 18: ಕೊಡಗಿನಲ್ಲಿ ಜಿಲ್ಲಾಡಳಿತ, ಸಂಘ-ಸಂಸ್ಥೆಗಳ ಸಲಹೆ ಹೊರತಾಗಿಯೂ ಸಾರ್ವಜನಿಕರು ಕೊರೊನಾ ಸೋಂಕು ತಡೆಗಟ್ಟುವಲ್ಲಿ ನಿಯಮಗಳನ್ನು ನಿರ್ಲಕ್ಷಿಸಿ ಸಮಸ್ಯೆ ಅಧಿಕವಾಗುವಲ್ಲಿ ಕಾರಣವಾಗುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಶುಕ್ರವಾರದ ಸಂತೆ ದಿನ ಮಡಿಕೇರಿಯ ಮಾರುಕಟ್ಟೆ ಪ್ರದೇಶದಲ್ಲಿ ಜನಜಂಗುಳಿ ಇದಕ್ಕೆ ಸಾಕ್ಷಿ ಎಂದು ಅವರು ಪ್ರತ್ಯಕ್ಷ ದೃಶ್ಯವನ್ನು ಬೊಟ್ಟು ಮಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೊಡಗಿನ ಜನತೆ ಈ ಅಪಾಯದಿಂದ ಪಾರಾಗುವ ದಿಸೆಯಲ್ಲಿ ಜಿಲ್ಲಾಡಳಿತ ಒಂದು ತಿಂಗಳ ಮಟ್ಟಿಗೆ ಕಡ್ಡಾಯ ಲಾಕ್ಡೌನ್ ಜಾರಿಗೊಳಿಸುವಂತೆ ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಸಾರ್ವಜನಿಕರು ಸೇರಿದಂತೆ ಬಹಳಷ್ಟು ವ್ಯಾಪಾರಿಗಳು ಮಾರುಕಟ್ಟೆಯಲ್ಲಿ ಮಾಸ್ಕ್ ಧರಿಸದೆ ಜಿಲ್ಲಾಡಳಿತದ ನಿಯಮಗಳನ್ನು ಗಾಳಿಗೆ ತೂರಿ ವಹಿವಾಟಿನಲ್ಲಿ ತೊಡಗಿದ್ದಾಗಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು, ಎಲ್ಲ ಗಡಿಗಳನ್ನು ಒಂದು ತಿಂಗಳು ಸಂಪೂರ್ಣ ಬಂದ್ ಮಾಡಬೇಕೆಂದು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.