ಸೋಮವಾರಪೇಟೆ, ಜು. 19: ಸಮೀಪದ ಐಗೂರು ಗ್ರಾಮದಲ್ಲಿರುವ ಟಾಟಾ ಕಾಫಿ ಎಸ್ಟೇಟ್‍ನ ಡಿಬಿಡಿ ಡಿವಿಷನ್‍ನಲ್ಲಿ 9 ಜಾನುವಾರುಗಳ ಮಾರಣಹೋಮ ನಡೆದಿರುವದು ಬೆಳಕಿಗೆ ಬಂದಿದ್ದು, ತೋಟದ ಸಿಬ್ಬಂದಿಗಳೇ ವಿಷವುಣಿಸಿ ಹತ್ಯೆ ಮಾಡಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.ಐಗೂರು ಟಾಟಾ ಕಾಫಿ ಎಸ್ಟೇಟ್‍ನಲ್ಲಿ ಇಂದು ಬೆಳಿಗ್ಗೆ ಸುಮಾರು 9 ಜಾನುವಾರುಗಳ ಕಳೇಬರ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದ್ದು, ಎಸ್ಟೇಟ್ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗದ್ದೆ ಕೆಲಸ ಮುಕ್ತಾಯಗೊಂಡ ಹಿನ್ನೆಲೆ ಐಗೂರು, ಕಿರಗಂದೂರು, ಕಾಜೂರು ಸೇರಿದಂತೆ ಸುತ್ತಮುತ್ತಲ ಕೃಷಿಕರು ತಮ್ಮ ಜಾನುವಾರುಗಳನ್ನು ಮೇಯಲೆಂದು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬಿಟ್ಟಿದ್ದರು. ಇಂತಹ ಜಾನುವಾರುಗಳು ಅರಣ್ಯಕ್ಕೆ ಒತ್ತಿಕೊಂಡಂತೆ ಇರುವ ಟಾಟಾ ಕಾಫಿ ಎಸ್ಟೇಟ್‍ನೊಳಗೆ ತೆರಳಿದ್ದು, ಇವುಗಳಿಗೆ ಹಲಸಿನ ಹಣ್ಣಿನಲ್ಲಿ ವಿಷ ಬೆರೆಸಿ ಹತ್ಯೆ ಮಾಡಲಾಗಿದೆ ಎಂಬ ಆರೋಪ ಇದೀಗ ವ್ಯಕ್ತವಾಗಿದೆ. ತೋಟದ ವ್ಯವಸ್ಥಾಪಕರ ಸೂಚನೆಯಂತೆ ಸಿಬ್ಬಂದಿಗಳು ಜಾನುವಾರುಗಳಿಗೆ ವಿಷವುಣಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಸ್ಟೇಟ್‍ನ ಸುತ್ತಮುತ್ತ ವ್ಯಾಪ್ತಿಯ ಗ್ರಾಮಗಳಿಂದ ತೋಟ ದೊಳಗೆ ಆಗಮಿಸಿದ ಜಾನುವಾರು ಗಳಿಗೆ ಹಲಸಿನಹಣ್ಣಿನಲ್ಲಿ ‘ಟಿಮೆಟ್’ ಕ್ರಿಮಿನಾಶಕ ಬೆರೆಸಿ ಸಾಯಿಸಿರುವ ಸಂಶಯ ವ್ಯಕ್ತವಾಗಿದೆ.
ಸುತ್ತಮುತ್ತಲ ಕೃಷಿಕರ ಜಾನು ವಾರುಗಳು
(ಮೊದಲ ಪುಟದಿಂದ) ನಾಪತ್ತೆಯಾಗಿರುವದು/ಟಾಟಾ ಕಾಫಿ ಎಸ್ಟೇಟ್‍ನೊಳಗಿನಿಂದ ದುರ್ವಾಸನೆ ಬೀರುತ್ತಿದ್ದರಿಂದ ಸ್ಥಳೀಯರು ಇಂದು ಬೆಳಿಗ್ಗೆ ತೋಟದೊಳಗೆ ತೆರಳಿ ಪರಿಶೀಲಿಸಿದ ಸಂದರ್ಭ ಸುಮಾರು 9 ಜಾನುವಾರುಗಳ ಕಳೇಬರ ಕಂಡುಬಂದಿದೆ.
ಈ ಬಗ್ಗೆ ಕಿರಗಂದೂರು ಗ್ರಾಮದ ಕೃಷಿಕ ಎಸ್.ಸಿ. ಗಿರೀಶ್ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನ್ನ ಮೂರು ಜಾನುವಾರುಗಳನ್ನು ಟಾಟಾ ಕಾಫಿ ಸಂಸ್ಥೆಯ ಸಿಬ್ಬಂದಿಗಳಾದ ದರ್ಶನ, ಗೋವಿಂದ, ಶ್ರೀನಿವಾಸ, ಮುತ್ತಪ್ಪ ಸೇರಿದಂತೆ ಇತರರು, ತೋಟದ ವ್ಯವಸ್ಥಾಪಕರ ನಿರ್ದೇಶನದಂತೆ ವಿಷವುಣಿಸಿ ಸಾಯಿಸಿದ್ದಾರೆ. ಜಾನುವಾರುಗಳನ್ನು ಕಳೆದುಕೊಂಡಿದ್ದರಿಂದ ತನಗೆ 50 ಸಾವಿರ ನಷ್ಟವುಂಟಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇದರೊಂದಿಗೆ ಐಗೂರು ಗ್ರಾಮದ ಕೆ.ಯು. ಸೋಮೇಶ್, ಕಿರಗಂದೂರಿನ ಚಿದಾನಂದ, ಸಂದೀಪ್, ಚಂದ್ರಶೇಖರ್, ವೀರರಾಜು, ಪುಟ್ಟರಾಜು, ನಿತಿನ್ ಅವರುಗಳ ಜಾನುವಾರುಗಳೂ ಸಹ ಕಾಣೆಯಾಗಿದ್ದು, ಟಾಟಾ ಕಾಫಿ ಎಸ್ಟೇಟ್‍ನವರೇ ವಿಷವುಣಿಸಿರುವ ಸಂಶಯವಿದೆ. ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ದೂರಿನ ಆಧಾರದ ಮೇರೆ ಸ್ಥಳಕ್ಕೆ ತೆರಳಿದ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್ ಅವರುಗಳು ಪರಿಶೀಲನೆ ನಡೆಸಿದ್ದಾರೆ. ಸೋಮವಾರಪೇಟೆ ಪಶುವೈದ್ಯಕೀಯ ಇಲಾಖೆಯ ಬಾದಾಮಿ ಅವರು ಜಾನುವಾರುಗಳ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ತೋಟದೊಳಗೆ ಸತ್ತುಬಿದ್ದಿದ್ದ ಜಾನುವಾರುಗಳನ್ನು ಚರಂಡಿಯೊಳಗೆ ಹಾಕಲಾಗಿದೆ ಎಂದು ತೋಟದ ವ್ಯವಸ್ಥಾಪಕರು ಸ್ಪಷ್ಟನೆ ನೀಡಿದ ಸಂದರ್ಭ, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಟೇಟ್‍ನ ವ್ಯವಸ್ಥಾಪಕ, ಸಹಾಯಕ ವ್ಯವಸ್ಥಾಪಕ, ಫೀಲ್ಡ್ ಆಫೀಸರ್, ಟ್ರ್ಯಾಕ್ಟರ್ ಚಾಲಕನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ತೋಟದ ವ್ಯವಸ್ಥಾಪಕರ ನಿರ್ದೇಶನದಿಂದ ಎಸ್ಟೇಟ್‍ನೊಳಗೆ ಬಂದ ಜಾನುವಾರುಗಳಿಗೆ ವಿಷವುಣಿಸಲಾಗಿದೆ. ಅವುಗಳು ಸತ್ತ ನಂತರ ಟ್ರ್ಯಾಕ್ಟರ್‍ನಲ್ಲಿ ಎಳೆದು ಚರಂಡಿಗೆ ಹಾಕಲಾಗಿದೆ. ಕಳೇಬರದ ಮೇಲೆ ಸೊಪ್ಪು ಮುಚ್ಚಲಾಗಿದ್ದು, ಕಳೆದ ವರ್ಷವೂ ಇಂತಹದೇ ಕೃತ್ಯ ನಡೆಸಲಾಗಿದೆ. ತೋಟದೊಳಗೆ ಜಾನುವಾರುಗಳು ಬಂದರೆ ದೊಡ್ಡಿಗೆ ಅಟ್ಟುವದನ್ನು ಬಿಟ್ಟು, ವಿಷವುಣಿಸಿ ಧಾರುಣವಾಗಿ ಹತ್ಯೆಗೈದಿರುವ ಕೃತ್ಯ ಖಂಡನೀಯ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಾದ ಬಲ್ಲಾರಂಡ ಕಂಠಿ ಕಾರ್ಯಪ್ಪ, ಮಣಿ, ರಾಜೀವ್, ಸುಭಾಷ್, ಉಮೇಶ್, ಅನೀಶ್, ದರ್ಶನ್ ಸೇರಿದಂತೆ ಇತರರು ತೆರಳಿ, ಗೋ ಹತ್ಯೆ ನಡೆಸಿದವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.