ಮಡಿಕೇರಿ, ಜು. 18: ಎದೆನೋವು, ಉಸಿರಾಟದ ತೊಂದರೆಯಿಂದ ವ್ಯಕ್ತಿಯೋರ್ವರು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗುತ್ತಾರೆ., ಪರೀಕ್ಷಿಸಿದ ವೈದ್ಯರು ಎದೆನೋವು, ಸರಿಯಾಗುತ್ತದೆ ಎಂದಿದ್ದಾರೆ. ರಾತ್ರಿಯೇ ವ್ಯಕ್ತಿ ಸಾವನ್ನಪ್ಪುತ್ತಾರೆ. ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ದೃಢೀಕರಿಸುತ್ತಾರೆ, ಶವವನ್ನು ಕೊಂಡೊಯ್ಯಲು ಹೇಳುತ್ತಾರೆ. ಕುಟುಂಬಸ್ಥರೇ ಜವಾಬ್ದಾರಿಯುತವಾಗಿ ಮೃತದೇಹವನ್ನು ಕೋವಿಡ್ ಆಸ್ಪತ್ರೆಗೆ ಕೊಂಡೊಯ್ದು ಮೃತ ವ್ಯಕ್ತಿಯ ದ್ರವವನ್ನು ಪರೀಕ್ಷೆಗೆ ಒಳಪಡಿಸುತ್ತಾರೆ. ಆದರೂ ಆಡಳಿತದವರು ಮೃತದೇಹದ ಅಂತ್ಯಕ್ರಿಯೆ ನೆರವೇರಿಸುವದಿಲ್ಲ. ಕುಟುಂಬಸ್ಥರೇ ಕೊಂಡೊಯ್ದು ಗ್ರಾಮದಲ್ಲಿ ಸಂಪ್ರದಾಯದಂತೆ ಕ್ರಿಯೆ ನೆರವೇರಿಸುತ್ತಾರೆ.., ಇವೆಲ್ಲ ನಡೆದು ಐದು ದಿನಗಳ ಬಳಿಕ ಸತ್ತ ವ್ಯಕ್ತಿಗೆ ಕೊರೊನಾ ಪಾಸಿಟಿವ್ ವರದಿ ಬರುತ್ತದೆ., ಆತಂಕ, ಗೊಂದಲ, ದುಗುಡದಲ್ಲಿರುವ ಆ ವ್ಯಕ್ತಿಯ ಕುಟುಂಬಸ್ಥರು, ಸಂಬಂಧಿಕರ ಪಾಡೇನು..? ಈ ಬೆಳವಣಿಗೆಗೆ ಹೊಣೆ ಯಾರು..? ಹೀಗೊಂದು ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಸಹಜವಾಗಿಯೇ ಹುಟ್ಟಿಕೊಳ್ಳುತ್ತಿದೆ. ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದಂತೆ ಯಾವದು ಸರಿ, ಯಾವದು ತಪ್ಪು ಎಂಬ ಜಿಜ್ಞಾಸೆ ಉಂಟಾಗುತ್ತಿದೆ. ಆರೋಗ್ಯವಾಗಿದ್ದ ವ್ಯಕ್ತಿ ಸಾವನ್ನಪ್ಪಿದರೂ ಪಾಸಿಟಿವ್ ವರದಿಗಳು ಬರುತ್ತಿವೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದವರು ಗುಣಮುಖರಾಗಿ ಹೊರಬರುತ್ತಿದ್ದಾರೆ. ಈ ನಡುವೆ ಓರ್ವ ವ್ಯಕ್ತಿ ಸಾವನ್ನಪ್ಪಿ ಐದು ದಿನಗಳ ಬಳಿಕ ಪಾಸಿಟಿವ್ ವರದಿ ಬಂದಿರುವದು ವ್ಯಕ್ತಿಯ ಕುಟುಂಬ, ಬಂಧುಗಳು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಕಾಡಿದ ಎದೆನೋವು ದಕ್ಷಿಣ ಕೊಡಗಿನ ಹುದಿಕೇರಿಯ ಹೈಸೊಡ್ಲೂರು ಗ್ರಾಮ ನಿವಾಸಿ 58 ವರ್ಷದ ವ್ಯಕ್ತಿಯೋರ್ವರಿಗೆ ಜುಲೈ 6 ರಿಂದ ಎದೆನೋವು ತೊಂದರೆ ಕಾಣಿಸಿಕೊಂಡಿದೆ. ಪರೀಕ್ಷೆಗೆಂದು ಖಾಸಗಿ ಕ್ಲಿನಿಕ್‍ಗೆ ತೆರಳಿದ್ದಾರೆ. ಪರೀಕ್ಷಿಸಿದ ವೈದ್ಯರು ಅಸಿಡಿಟಿ ಎಂದು ಮಾತ್ರೆ ಕೊಟ್ಟಿದ್ದಾರೆ. ನಂತರದಲ್ಲಿ ಮತ್ತೆ ಕೂಲಿ ಕೆಲಸಕ್ಕೆ ಹೋಗಿದ್ದಾರೆ. ತಾ. 11 ರಂದು ಮತ್ತೆ ಎದೆನೋವು ಕಾಣಿಸಿಕೊಂಡಿದೆ. ಕೆಲಸ ಮಾಡುತ್ತಿದ್ದ ತೋಟದಲ್ಲಿಯೇ ತಲೆತಿರುಗಿ ಬಿದ್ದಿದ್ದಾರೆ. ಕೂಡಲೇ ತೋಟದ ಮಾಲೀಕರು ಅವರನ್ನು ಮತ್ತೊಂದು ಖಾಸಗಿ ಕ್ಲಿನಿಕ್‍ಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಮಾತ್ರೆಗಳನ್ನು ನೀಡಿ, ಇಸಿಜಿ ಪರೀಕ್ಷೆ ಮಾಡಿಸುವಂತೆ ಸೂಚಿಸಿ ಕಳುಹಿಸಿದ್ದಾರೆ.

ನಂತರದಲ್ಲಿ ವ್ಯಕ್ತಿಗೆ ಎದೆನೋವು ಜಾಸ್ತಿಯಾಗಿದೆ. ತಾ. 13 ರಂದು ಕುಟುಂಬಸ್ಥರು ಅವರನ್ನು ವೀರಾಜಪೇಟೆಯ ಖಾಸಗಿ ಕ್ಲಿನಿಕ್‍ಗೆ ಕರೆತಂದಿದ್ದಾರೆ. ಅಲ್ಲಿನ ವೈದ್ಯರು ಹಿಂದಿನ ವೈದ್ಯರು ಸೂಚಿಸಿದಂತೆ ಇಸಿಜಿ ಮಾಡಿದ್ದಾರೆ. ‘ಎದೆ ನೋವಿದೆ ಎಲ್ಲ ಸರಿಯಾಗುತ್ತದೆ’ ಎಂದು ಕ್ಲಿನಿಕ್‍ನಲ್ಲಿ ಒಳರೋಗಿಯಾಗಿ ದಾಖಲಿಸಿಕೊಂಡಿದ್ದಾರೆ. ಆದರೆ, ಮರುದಿನ ಬೆಳಿಗ್ಗೆ ಅಂದರೆ ತಾ. 14 ರಂದು ವ್ಯಕ್ತಿ ಮೃತಪಟ್ಟಿರುವದು ಗೋಚರಿಸಿದೆ.

ಹೃದಯಾಘಾತ - ಸಾವು

ತಾ. 14 ರಂದು ಬೆಳಿಗ್ಗೆ 6 ಗಂಟೆಗೆ ಮೃತವ್ಯಕ್ತಿಯ (ಮೊದಲ ಪುಟದಿಂದ) ಕುಟುಂಬಸ್ಥರಿಗೆ ಮೃತದೇಹವನ್ನು ಕೊಂಡೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ ಮೃತರ ಸಂಬಂಧಿಕರು ಮೃತದೇಹವನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲು ಕೋರಿದಾಗÀ ‘ಇದು ಹೃದಯಾಘಾತದಿಂದ ಸಾವನ್ನಪ್ಪಿರುವದಾಗಿ’ ದೃಢೀಕರಣ ಪತ್ರ ಕೂಡ ನೀಡಿ ಈ ಕಾರಣದಿಂದ ಕೊರೊನಾ ಪರೀಕ್ಷೆ ಅಗತ್ಯವಿಲ್ಲವೆಂದು ಹೇಳಿದ್ದಾರೆ. ಆದರೂ ಸಮಾಧಾನವಿಲ್ಲದ ಮೃತರ ಸಂಬಂಧಿಕರು ತಾವೇ ಆ್ಯಂಬ್ಯುಲೆನ್ಸ್‍ನಲ್ಲಿ ಮೃತದೇಹವನ್ನು ವೀರಾಜಪೇಟೆಯ ಕೋವಿಡ್ ಆಸ್ಪತ್ರಗೆ ಕೊಂಡೊಯ್ದು ಗಂಟಲು ದ್ರವ ಪರೀಕ್ಷೆ ಮಾಡುವಂತೆ ಕೋರಿದ್ದಾರೆ. ಅದಾಗಲೇ ಬೆಳಿಗ್ಗೆ 10.30 ಗಂಟೆಯಾಗಿತ್ತು. ಆಸ್ಪತ್ರೆಯಲ್ಲಿ ಗಂಟಲು ದ್ರವ ಪಡೆದುಕೊಂಡ ಅಲ್ಲಿನ ವೈದ್ಯರು ಮೃತದೇಹವನ್ನು ವಾಪಸ್ ವಾರಸುದಾರರಿಗೆ ನೀಡಿದ್ದಾರೆ.

ಗ್ರಾಮದಲ್ಲಿ ಅಂತ್ಯಕ್ರಿಯೆ

ಇತ್ತ ಮೃತದೇಹವನ್ನು ಪಡೆದುಕೊಂಡ ಸಂಬಂಧಿಕರಿಗೆ ಇನ್ನೂ ಒಂದು ಗಂಟೆ ಒಳಗಡೆ ಪರೀಕ್ಷಾ ವರದಿ ಬರಲಿದೆ ಎಂದು ಹೇಳಿ ಕಳುಹಿಸಿದ್ದಾರೆ. ಮೃತದೇಹವನ್ನು ಕೊಂಡೊಯ್ದು ಕುಟುಂಬಸ್ಥರು ಗ್ರಾಮದಲ್ಲಿ ಸಂಪ್ರದಾಯದಂತೆ ಶವಸಂಸ್ಕಾರ ಮಾಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ತಾವೇ ಮುಖಗವಸು, ಕೈಚೀಲಗಳನ್ನು ಧರಿಸಿ ಕ್ರಿಯೆ ಮುಗಿಸಿದ್ದಾರೆ. ಅಂದಾಜು 20-25 ರಷ್ಟು ಮಂದಿ ಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ.

ಮೂರನೇ ದಿನದ ಕಾರ್ಯ

ಕೋವಿಡ್ ಆಸ್ಪತ್ರೆಯ ವೈದ್ಯರು ಹೇಳಿದಂತೆ ಒಂದು ಗಂಟೆ ಕಳೆದು ಎರಡು ದಿನಗಳು ಮುಗಿದರೂ ಪರೀಕ್ಷಾ ವರದಿ ಬಾರದಿರುವದರಿಂದ ನೆಗೆಟಿವ್ ಇರಬಹುದೆಂದು ತಿಳಿದ ಕುಟುಂಬಸ್ಥರು ಮೂರನೇ ದಿನದ ಬೂದಿ ಮುಚ್ಚುವ ಕಾರ್ಯವನ್ನೂ ಕೂಡ ಮಾಡಿದ್ದಾರೆ. ಆಗಲೂ ಕೆಲವು ಮಂದಿ ಭಾಗಿಯಾಗಿದ್ದರು.

ಕೋವಿಡ್ ನಿಯಮವಿಲ್ಲ..!

ಈ ಹಿಂದೆ ಮಡಿಕೇರಿಯಲ್ಲಿ ಅನಾರೋಗ್ಯ ಹಾಗೂ ಹೃದಯಾಘಾತದಿಂದ ಮೃತಪಟ್ಟ ಈರ್ವರು ವ್ಯಕ್ತಿಗಳ ಮೃತದೇಹವನ್ನು ಕೋವಿಡ್ ನಿಯಮಾನುಸಾರ ಕೋವಿಡ್ ಸಿಬ್ಬಂದಿಗಳು ಹಾಗೂ ಸ್ವಯಂಸೇವಕರು ಸೇರಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ನಂತರದಲ್ಲಿ ಅವರುಗಳ ವರದಿ ನೆಗೆಟಿವ್ ಬಂದಿತ್ತು. ಆದರೆ, ಇಲ್ಲಿ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಕೋವಿಡ್ ನಿಯಮ ಇಲ್ಲಿ ಪಾಲನೆಯಾಗಿಲ್ಲ ಏಕೆ ಎಂಬದು ಸಂಬಂಧಿಕರ ಪ್ರಶ್ನೆಯಾಗಿದೆ. ಅಲ್ಲದೆ, ವೈದ್ಯರು ಹೃದಯಾಘಾತ ಎಂದು ದೃಢೀಕರಿಸಿದ್ದರೂ 5 ದಿನಗಳ ಬಳಿಕ ಪಾಸಿಟಿವ್ ಎಂದು ಬಂದಿದೆ ಎಂದು ಹೇಳಲಾಗುತ್ತಿದೆ. ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಸೋಂಕಿತರ ಪಟ್ಟಿಯಲ್ಲಿ ಮೃತ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿರುವದಾಗಿ ನಮೂದಿಸಲಾಗಿದೆ. ಇದೀಗ ಮೃತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದವರ ಪಾಡೇನು ಎಂಬದು ಕೂಡ ಪ್ರಶ್ನೆ? ಮೃತರ ಮನೆಯಲ್ಲಿಯೇ 4-5 ಮಂದಿ ಇದ್ದಾರೆ, ಜೊತೆಗೆ ಸಂಬಂಧಿಕರು, ಒಟ್ಟಿಗೆ ಕೆಲಸ ಮಾಡುವವರು, ಗ್ರಾಮಸ್ಥರು, ತೋಟದ ಮಾಲೀಕರು ಹೀಗೆ.., ಅದೆಷ್ಟು ಮಂದಿಯಲ್ಲಿ ಆತಂಕ ಸೃಷ್ಟಿಯಾಗಿದೆಯೋ? ಅದರೊಂದಿಗೆ ಮೃತರನ್ನು ಪರೀಕ್ಷಿಸಿದ ವೈದ್ಯರು, ಆ ಕ್ಲಿನಿಕ್‍ನ ಸಿಬ್ಬಂದಿಗಳು, ಅವರ ಸಂಪರ್ಕದಲ್ಲಿರುವವರು, ಅಷ್ಟೊಂದು ಮಂದಿಯನ್ನು ಹುಡುಕುವ ಕಾಯಕ ಕೂಡ ಆಗಬೇಕಿದೆಯಲ್ಲವೇ?

ಈ ರೀತಿಯ ಪ್ರಮಾದಗಳಿಗೆ ಹೊಣೆ ಯಾರು..? ಸೋಂಕು ಸಮುದಾಯವಾಗಿ ಹರಡುವದಕ್ಕೆ ಈ ರೀತಿಯ ಪ್ರಕರಣಗಳು ಕಾರಣವಾಗಬಹುದಲ್ಲವೇ..?

-ಕುಡೆಕಲ್ ಸಂತೋಷ್